Malda Violence | ಎಐಎಂಐಎಂ ಮಾಸ್ಟರ್ ಮೈಂಡ್ ಬಂಧನ 
ದೇಶ

ಏಳು ಮಂದಿ ಎಸ್‌ಐಆರ್ ಅಧಿಕಾರಿಗಳನ್ನು ಒತ್ತೆಯಾಳಾಗಿರಿಸಿದ್ದ ಆರೋಪ; ಎಐಎಂಐಎಂ ಮಾಸ್ಟರ್ ಮೈಂಡ್ ಬಂಧನ | Malda Violence

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಬುಧವಾರ ನಡೆದ ಪ್ರತಿಭಟನೆಯ ವೇಳೆ ಏಳು ಜನ ಎಸ್​ಐಆರ್​ ಅಧಿಕಾರಿಗಳನ್ನು ಸುಮಾರು ಒಂಬತ್ತು ಗಂಟೆಗಳ ಕಾಲ ದಿಗ್ಬಂಧನದಲ್ಲಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಐಎಂಐಎಂ ನಾಯಕ ಮೊಫಕ್ಕೆರುಲ್ ಇಸ್ಲಾಂರನ್ನು ಪಶ್ಚಿಮ ಬಂಗಾಳ ಪೊಲೀಸರು ಶುಕ್ರವಾರ ಬಂಧಿಸಿರುವುದಾಗಿ ವರದಿಯಾಗಿದೆ.
ಘಟನೆ ದೇಶ್ಯಾದ್ಯಂತ ವ್ಯಾಪಿಸಿದ ಬಳಿಕ ರಾಜ್ಯದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದ ಇಸ್ಲಾಂನನ್ನು ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯ ಹಿನ್ನಲೆ

ಮಾಲ್ಡಾ ಜಿಲ್ಲೆಯ ಕಲಿಯಾಚಕ್ II ಬ್ಲಾಕ್ ಅಭಿವೃದ್ಧಿ ಕಚೇರಿ ಹೊರಗೆ ಬುಧವಾರ ಈ ಗದ್ದಲ ಆರಂಭವಾಗಿದ್ದು, ಎಸ್​ಐಆರ್​​ ಪ್ರಕ್ರಿಯೆಯ ಭಾಗವಾಗಿ ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ಅಳಿಸಿಹಾಕುತ್ತಿರುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ಭುಗಿಲೆದ್ದಿತು. ಪ್ರತಿಭಟನಾಕಾರರು ಮೊದಲು ನ್ಯಾಯಾಂಗ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಕೋರಿದ್ದರು.
ಅಧಿಕಾರಿಗಳು ಇದಕ್ಕೆ ಒಪ್ಪದಿದ್ದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಸಂಜೆ 4 ಗಂಟೆ ಸುಮಾರಿಗೆ ಬಿಡಿಒ ಕಚೇರಿಗೆ ಮುತ್ತಿಗೆ ಹಾಕಿದ ಗುಂಪು, ಅಧಿಕಾರಿಗಳನ್ನು ಹೊರಬರದಂತೆ ತಡೆದು ಒತ್ತೆಯಾಳಾಗಿ ಇರಿಸಿಕೊಂಡಿತು ಎನ್ನಲಾಗಿದೆ. ಈ ಘಟನೆಯ ಹಿಂದೆ ಮೊಫಕ್ಕೆರುಲ್ ಇಸ್ಲಾಂ ಅವರ ಕೈವಾಡವಿದ್ದು, ಇವರೇ ಈ ಕೃತ್ಯದ ಮಾಸ್ಟರ್ ಮೈಂಡ್ ಎಂದು ಪೊಲೀಸರು ತಿಳಿಸಿದ್ದಾರೆ.

ಯಾರು ಈ ಮೊಫಕ್ಕೆರುಲ್ ಇಸ್ಲಾಂ?

ವೃತ್ತಿಯಲ್ಲಿ ವಕೀಲರಾಗಿರುವ ಈತ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ಸಕ್ರಿಯ ನಾಯಕರಾಗಿದ್ದಾರೆ. 2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಇಟಾಹಾರ್ ಕ್ಷೇತ್ರದಿಂದ ಎಐಎಂಐಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಎನ್ನಲಾಗಿದೆ.

18 ಜನರ ಬಂಧನ

ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 18 ಜನರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಕಾನೂನು ಸುವ್ಯವಸ್ಥೆ ಹಳಿತಪ್ಪಿರುವುದಕ್ಕೆ ಜೀವಂತ ಸಾಕ್ಷಿಯಾಗಿರುವ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ರಾಜ್ಯವು ಅತ್ಯಂತ ಧ್ರುವೀಕೃತ ಪರಿಸ್ಥಿತಿಯಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಅಧಿಕಾರಿಗಳ ರಕ್ಷಣೆಯ ವಿಷಯದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಈ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತು ಎನ್‌ಐಎ ಸಂಸ್ಥೆಗಳಿಗೆ ವಹಿಸಲು ಆದೇಶಿಸಿದೆ.

ರಾಜಕೀಯ ಕೆಸರೆರೆಚಾಟ

ಈ ಇಡೀ ಅವ್ಯವಸ್ಥೆಯು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇರ ಸೂಚನೆಯ ಮೇರೆಗೆ ನಡೆದಿದೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆಯನ್ನು ಟಿಎಂಸಿಯ ಉನ್ನತ ಮಟ್ಟದ ನಾಯಕತ್ವವೇ ಯೋಜಿಸಿ ಸಂಘಟಿಸಿದೆ ಮತ್ತು ಸ್ಥಳೀಯ ನಾಯಕಿ ಸಬೀನಾ ಯಾಸ್ಮಿನ್ ಈ ಸಂಚನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ದೂರಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನ್ಯಾಯಾಂಗ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಚುನಾವಣಾ ಆಯೋಗವೇ ವಿಫಲವಾಗಿದ್ದು, ರಾಜ್ಯದ ನಾಗರಿಕ ಮತ್ತು ಪೊಲೀಸ್ ಆಡಳಿತವನ್ನು ಹಸ್ತಕ್ಷೇಪದ ಮೂಲಕ ಬದಲಾಯಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಯತ್ನಿಸುತ್ತಿದ್ದಾರೆ ಮತ್ತು ಈ ಇಡೀ ಬೆಳವಣಿಗೆಯ ಹಿಂದೆ ಅವರ ಪಿತೂರಿ ಅಡಗಿದೆ ಎಂದು ದೀದಿ ಆರೋಪಿಸಿದ್ದಾರೆ. ಅಮಿತ್ ಷಾ ರಾಜೀನಾಮೆಗೆ ಒತ್ತಾಯಿಸಿರುವ ಸಿಎಂ ಬ್ಯಾನರ್ಜಿ, ಕೇಂದ್ರ ಸರ್ಕಾರವು ಚುನಾವಣಾ ಆಯೋಗವನ್ನು ಬಳಸಿಕೊಂಡು ರಾಜ್ಯ ಸರ್ಕಾರದ ಮೇಲೆ ಸವಾರಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಎಸ್‌ಐಆರ್ ವಿವಾದ

ಬಂಗಾಳ ಚುನಾವಣೆಗೆ ಮುನ್ನ ಚುನಾವಣಾ ಆಯೋಗ ನಡೆಸುತ್ತಿರುವ ಈ ಎಸ್‌ಐಆರ್ ಪ್ರಕ್ರಿಯೆ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಬರೋಬ್ಬರಿ 63 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದೆ. ಇನ್ನೂ 60 ಲಕ್ಷಕ್ಕೂ ಹೆಚ್ಚು ಮತದಾರರನ್ನು ತೀರ್ಪಿನ ಅಡಿಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದ್ದು, ಘೇರಾವ್ ಮಾಡಲ್ಪಟ್ಟ ನ್ಯಾಯಾಂಗ ಅಧಿಕಾರಿಗಳು ಈ 60 ಲಕ್ಷ ಮತದಾರರ ಭವಿಷ್ಯವನ್ನು ನಿರ್ಧರಿಸುವ ಜವಾಬ್ದಾರಿ ಹೊತ್ತಿದ್ದರು(ಏಜೆನ್ಸೀಸ್​​).