Narendra Modi | ಪ್ರಧಾನಿ ನರೇಂದ್ರ ಮೋದಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ಎಂಬುದು ಈಗ ಕೇವಲ ಘೋಷಣೆಯಲ್ಲ, ಅದು ಗೋಡೆಗಳ ಮೇಲೆ ಬರೆಯಲ್ಪಟ್ಟಿದೆ ಮತ್ತು ಜನರ ಹೃದಯಗಳಲ್ಲಿ ಕೆತ್ತಲ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.
ಕೋಲ್ಕತ್ತಾದಲ್ಲಿ ಶನಿವಾರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಂಗಾಳದಲ್ಲಿ ನಡೆಯುತ್ತಿರುವ ಕ್ರೂರ ಆಡಳಿತದ ಅಂತ್ಯ ಈಗ ಅನಿವಾರ್ಯವಾಗಿದ್ದು, ಜನಸಾಮಾನ್ಯರು ಪ್ರಸ್ತುತ ವ್ಯವಸ್ಥೆಯಿಂದ ಬೇಸತ್ತಿದ್ದಾರೆ, ಇಲ್ಲಿನ ಜಂಗಲ್ ರಾಜ್ ಆಳ್ವಿಕೆಯ ಯುಗ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದರು.
ಬಿಜೆಪಿ ಪರ ಜನರ ಧ್ವನಿ
ರಾಜ್ಯದ ಮೂಲೆ ಮೂಲೆಯಿಂದಲೂ ಬದಲಾವಣೆಯ ಧ್ವನಿ ಕೇಳಿ ಬರುತ್ತಿದ್ದು, ಈ ಬಾರಿ ಬಿಜೆಪಿ ಸರ್ಕಾರವನ್ನು ತನ್ನಿ ಎಂಬ ಕೂಗು ರಾಜ್ಯಾದ್ಯಂತ ಹೊರಮೊಮ್ಮುತ್ತಿದೆ, ಬಂಗಾಳದ ಸಮಗ್ರ ಅಭಿವೃದ್ಧಿ ಮತ್ತು ಶಾಂತಿಗಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಇಂದಿನ ಅಗತ್ಯವಾಗಿದೆ ಎಂದು ಪ್ರಧಾನಿ ತಿಳಿಸಿದರು. ಸ್ವಾತಂತ್ರ್ಯ ಸಿಕ್ಕ ಬಳಿಕ ಪಶ್ಚಿಮ ಬಂಗಾಳವು ವಿಭಜನೆಯ ಆಘಾತ, ಕೋಮು ಗಲಭೆಗಳು, ರಾಜಕೀಯ ಅಸ್ಥಿರತೆ, ಒಳನುಸುಳುವಿಕೆ ಮತ್ತು ಹಿಂಸಾಚಾರದ ಅವಧಿಗಳು ಸೇರಿದಂತೆ ಹಲವಾರು ಕಠಿಣ ಹಂತಗಳನ್ನು ಕಂಡಿದೆ, ಇದರಿಂದ ಹೆಚ್ಚು ಬಳಲಿದವರು ರಾಜ್ಯದ ಮಹಿಳೆಯರು ಎಂದು ಹೇಳಿದರು.
ಬಂಗಾಳವು ಇಡೀ ದೇಶದ ಪ್ರಗತಿಗೆ ಶಕ್ತಿ ತುಂಬಿ ವ್ಯಾಪಾರ ಮತ್ತು ಕೈಗಾರಿಕೆಗಳಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಕಾಲವೊಂದಿತ್ತು, ಆದರೆ, ಇಂದಿನ ಪರಿಸ್ಥಿತಿ ತುಂಬಾ ಭಿನ್ನವಾಗಿದೆ, ಅನೇಕ ಯುವಕರು ಪದವಿ ಪಡೆಯಲು ಅಥವಾ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ, ರಾಜ್ಯದ ಯುವಕರು ಕೆಲಸ ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ.
ಪೂರ್ವ ಭಾರತದ ಅಭಿವೃದ್ಧಿ ಪ್ರಧಾನಿ ಮೋದಿ ಮಾತು
ಪೂರ್ವ ಭಾರತದ ಅಭಿವೃದ್ಧಿ ಸಾಮರ್ಥ್ಯದ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಈ ವಲಯದ ನೈಜ ಶಕ್ತಿಯು ದಶಕಗಳಿಂದ ಬಳಕೆಯಾಗದೆ ಉಳಿದಿತ್ತು, ಆದರೆ ಒಳನಾಡಿನ ಜಲಮಾರ್ಗಗಳು ವ್ಯಾಪಾರ ಮತ್ತು ಕೈಗಾರಿಕಾ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯುತ್ತಿರುವುದರಿಂದ ಈಗ ಪರಿಸ್ಥಿತಿ ಬದಲಾಗುತ್ತಿದೆ, ದೇಶದ ಆರ್ಥಿಕ ಪ್ರಗತಿಯಲ್ಲಿ ಬಂದರುಗಳು ಮತ್ತು ಜಲಸಾರಿಗೆಯು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದರು.
ಕೋಲ್ಕತ್ತಾ ಬಂದರು ಮತ್ತು ಹಲ್ಡಿಯಾ ಡಾಕ್ ಕಾಂಪ್ಲೆಕ್ಸ್‌ನಂತಹ ಬಂದರುಗಳು ಈ ಪ್ರದೇಶದ ಪ್ರಮುಖ ವ್ಯಾಪಾರ ಕೇಂದ್ರಗಳಾಗಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿವೆ, ಹಲ್ಡಿಯಾ ಡಾಕ್ ಕಾಂಪ್ಲೆಕ್ಸ್ ಪ್ರಸ್ತುತ ಯಾಂತ್ರೀಕರಣಕ್ಕೆ ಒಳಗಾಗುತ್ತಿದ್ದು, ಇದು ಸರಕು ನಿರ್ವಹಣೆಯನ್ನು ವೇಗಗೊಳಿಸುತ್ತದೆ, ಬಂದರಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ವ್ಯಾಪಾರವನ್ನು ಬೆಂಬಲಿಸಲು ಹೊಸ ಸೌಲಭ್ಯಗಳನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದರು. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳು ಏಪ್ರಿಲ್‌ನಲ್ಲಿ ನಡೆಯುವ ಸಾಧ್ಯತೆಯಿದೆ(ಏಜೆನ್ಸೀಸ್).