ಬಂಗಾಳ ಸಿಎಂ ಆರ್ಭಟಕ್ಕೆ ಬಾಂಗ್ಲಾ ಶಾಕ್: ಯಾವುದೇ ಬೆಲೆ ತೆತ್ತಾದರೂ ಸುವೇಂದು ಬಾಬುರನ್ನು ತಡೆಯಿರಿ! ಪ್ರಧಾನಿ ಮೋದಿಗೆ ಬಿಎನ್‌ಪಿ ಮನವಿ!
ಢಾಕಾ: ಪಶ್ಚಿಮ ಬಂಗಾಳದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ನೆರೆಯ ಬಾಂಗ್ಲಾದೇಶದಲ್ಲಿ ಭಾರಿ ಆತಂಕ ಶುರುವಾಗಿದೆ. ಅಕ್ರಮ ನುಸುಳುಕೋರರ ವಿರುದ್ಧ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೈಗೊಂಡಿರುವ ಕಠಿಣ ಕ್ರಮಗಳು ಬಾಂಗ್ಲಾದೇಶದ ಬಿಎನ್‌ಪಿ (BNP) ಸರ್ಕಾರಕ್ಕೆ ನಿದ್ದೆಗೆಡಿಸಿವೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ಬಾಂಗ್ಲಾ ಸಂಸತ್ತಿನಲ್ಲಿ ಅಲ್ಲಿನ ಸಂಸದರು, ಯಾವುದೇ ಬೆಲೆ ತೆತ್ತಾದರೂ ಸುವೇಂದು ಬಾಬು(Suvendu Adhikari) ಅವರನ್ನು ತಡೆಯಿರಿ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಮನವಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ, ಅವರ ಹೆಸರನ್ನು ದಾಖಲೆಗಳಿಂದ ತೆಗೆದುಹಾಕಿ, ದೇಶದಿಂದ ಗಡಿಪಾರು ಮಾಡುವ ಡಿಟೆಕ್ಟ್, ಡಿಲೀಟ್ ಮತ್ತು ಡಿಪೋರ್ಟ್ ನೀತಿಯನ್ನು ಸಿಎಂ ಸುವೇಂದು ಅಧಿಕಾರಿ ಅತ್ಯಂತ ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಈ ಬಿಗಿ ಕ್ರಮವೇ ಈಗ ಢಾಕಾದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ.
ಬಾಂಗ್ಲಾ ಸಂಸತ್ತಿನಲ್ಲಿ ಸುವೇಂದು ಅಧಿಕಾರಿ ವಿರುದ್ಧ ಆಕ್ರೋಶ!
ಬಾಂಗ್ಲಾದೇಶದ ಸಂಸತ್ತಿನಲ್ಲಿ 2026-27ರ ಸಾಲಿನ ಆಯವ್ಯಯ (ಬಜೆಟ್) ಮೇಲಿನ ಚರ್ಚೆಯ ಸಂದರ್ಭದಲ್ಲಿ ಬಿಎನ್‌ಪಿ ಪಕ್ಷದ ಸಂಸದ ಜಿ.ಎಂ. ಸಿರಾಜ್ ಭಾರತ-ಬಾಂಗ್ಲಾ ಸಂಬಂಧದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅತ್ಯಂತ ಆವೇಶಭರಿತವಾಗಿ ಮಾತನಾಡಿದ ಅವರು, ಗೌರವಾನ್ವಿತ ಸಭಾಪತಿಗಳೇ, ನಿಮ್ಮ ಮೂಲಕ ನಾನು ಭಾರತದ ಮೋದಿ ಸರ್ಕಾರಕ್ಕೆ ಅತ್ಯಂತ ಗೌರವಪೂರ್ವಕವಾಗಿ ಒಂದು ವಿನಂತಿ ಮಾಡಲು ಬಯಸುತ್ತೇನೆ. ನಮ್ಮ ನೆರೆಯ ಪಶ್ಚಿಮ ಬಂಗಾಳದ ನಾಯಕ ಸುವೇಂದು ಬಾಬು ಅವರನ್ನು ದಯವಿಟ್ಟು ತಡೆಯಿರಿ ಎಂದು ಕೂಗಾಡಿದ್ದಾರೆ.
ಸುವೇಂದು ಅಧಿಕಾರಿ ಅವರು ನಿರಂತರವಾಗಿ ನೀಡುತ್ತಿರುವ ಬಾಂಗ್ಲಾ ವಿರೋಧಿ ಹೇಳಿಕೆಗಳು ಉಭಯ ದೇಶಗಳ ನಡುವಿನ ಐತಿಹಾಸಿಕ ಸ್ನೇಹ ಸಂಬಂಧಕ್ಕೆ ದೊಡ್ಡ ಅಡ್ಡಿಯಾಗಿವೆ ಎಂದು ಸಿರಾಜ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಸುವೇಂದು ಅವರ ಅಭಿಯಾನಕ್ಕೆ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಕೇವಲ ಒಂದು ತಿಂಗಳಲ್ಲಿ 4,800 ನುಸುಳುಕೋರರ ಗಡಿಪಾರು!
ಸಿಎಂ ಸುವೇಂದು ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಕೇವಲ ಒಂದೇ ತಿಂಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಅಡಿ ಬರದ ಸುಮಾರು 4,800 ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರನ್ನು ಪತ್ತೆಹಚ್ಚಿ ವಾಪಸ್ ಬಾಂಗ್ಲಾದೇಶಕ್ಕೆ ಕಳುಹಿಸಿಕೊಟ್ಟಿದೆ. ಇದರೊಂದಿಗೆ ಗಡಿ ಜಿಲ್ಲೆಗಳಲ್ಲಿ ಅಕ್ರಮ ವಲಸಿಗರಿಗಾಗಿ ವಿಶೇಷ ತಡೆಹಿಡಿಯುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಅಷ್ಟೇ ಅಲ್ಲದೆ, ಗಡಿಯಲ್ಲಿ ಅಕ್ರಮ ನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಯಲು ಸುಮಾರು 100 ಕಿಲೋಮೀಟರ್ ಉದ್ದದ ಭೂಮಿಯನ್ನು ತಂತಿಬೇಲಿ ನಿರ್ಮಾಣಕ್ಕಾಗಿ ಗಡಿ ಭದ್ರತಾ ಪಡೆಗೆ (BSF) ಹಸ್ತಾಂತರಿಸಲಾಗಿದೆ. ಜೂನ್ 2026 ರಲ್ಲಿ ಕೋಲ್ಕತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಈ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದ್ದರು. ಸುವೇಂದು ಅವರ ಈ ಬುಲೆಟ್ ವೇಗದ ಕ್ರಮಗಳೇ ಈಗ ಬಾಂಗ್ಲಾ ಸಂಸದರ ನಡುಕಕ್ಕೆ ಕಾರಣವಾಗಿದೆ.
"ಗಂಡ-ಹೆಂಡತಿ ವಿಚ್ಛೇದನ ಪಡೆಯಬಹುದು, ಆದರೆ ಭಾರತ-ಬಾಂಗ್ಲಾ ಅಲ್ಲ!"
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಭೌಗೋಳಿಕ ಅನಿವಾರ್ಯತೆಯನ್ನು ವಿವರಿಸಲು ಸಂಸದ ಜಿ.ಎಂ. ಸಿರಾಜ್ ಅವರು ನೀಡಿದ ವಿಶಿಷ್ಟ ಉದಾಹರಣೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಯಾವ ದೇಶವೂ ತನ್ನ ನೆರೆಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ. ಇಬ್ಬರು ಸ್ನೇಹಿತರ ನಡುವಿನ ಸ್ನೇಹ ತಾತ್ಕಾಲಿಕವಾಗಿರಬಹುದು. ಅಷ್ಟೇ ಏಕೆ, ಗಂಡ-ಹೆಂಡತಿಯ ಸಂಬಂಧ ಕೂಡ ಮುರಿದುಬಿದ್ದು ವಿಚ್ಛೇದನ ಆಗಬಹುದು. ಆದರೆ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ನೆರೆಹೊರೆಯ ಸಂಬಂಧಕ್ಕೆ ಎಂದಿಗೂ ವಿಚ್ಛೇದನ ನೀಡಲು ಸಾಧ್ಯವಿಲ್ಲ. ನಾವು ಸದಾ ಜೊತೆಯಾಗಿಯೇ ಬಾಳಬೇಕಿರುವುದರಿಂದ ಕಹಿ ಹರಡುವ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದರು.
ಇದೇ ವೇಳೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಯುಗ ಮುಗಿದಿದೆ ಎಂದ ಸಿರಾಜ್, ಹಸೀನಾ ಈಗ ಬಾಂಗ್ಲಾ ರಾಜಕಾರಣದಲ್ಲಿ ಪ್ರಸ್ತುತರಾಗಿ ಉಳಿದಿಲ್ಲ. ಆದ್ದರಿಂದ ಭಾರತವು ಯಾವುದೇ ಒಬ್ಬ ವ್ಯಕ್ತಿಯನ್ನು ನಂಬುವ ಬದಲು ಬಾಂಗ್ಲಾದೇಶದ ಸಾಮಾನ್ಯ ಜನರ ಹೃದಯ ಗೆಲ್ಲಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಇದರೊಂದಿಗೆ ಗಡಿಯ ಸಮೀಪವಿರುವ ಅಕ್ರಮ ಡ್ರಗ್ಸ್ ಕಾರ್ಖಾನೆಗಳನ್ನು ಮುಚ್ಚುವಂತೆಯೂ ಅವರು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ,(ಏಜೆನ್ಸೀಸ್).