ಬಂಗಾಳ ಕದನ: ‘ಏ ದೀದಿ’ ಎಂದು ಗುಡುಗಿದ ಅಮಿತ್ ಷಾ! ದೀದಿ ಓ ದೀದಿ’ ವಿವಾದದ ಮರುಕಳಿಕೆ? ಬಿಜೆಪಿಗೆ ಮಹಿಳಾ ವಿರೋಧಿ ಪಟ್ಟ ಕಟ್ಟಿದ ಟಿಎಂಸಿ!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ 48 ಗಂಟೆಗಳಷ್ಟೇ ಬಾಕಿ ಉಳಿದಿದೆ. ಈ ಹೊತ್ತಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah) ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಮಾಡಿರುವ ಏ ದೀದಿ ಎಂಬ ಸಂಬೋಧನೆ ಹೊಸ ರಾಜಕೀಯ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಇದು 2021ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಬಳಸಿದ್ದ ದೀದಿ ಓ ದೀದಿ ಎಂಬ ವ್ಯಂಗ್ಯದ ಪ್ರತಿಧ್ವನಿಯಂತೆ ಕೇಳಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹರಿಹಾಯ್ದಿದೆ.
ಅಮಿತ್ ಷಾ ಗುಡುಗಿದ್ದೇನು? ಟಾಟಾ.. ಬೈ ಬೈ ದೀದಿ!
ಈ ಬಗ್ಗೆ ಪಶ್ಚಿಮ ಮೇದಿನಿಪುರದಲ್ಲಿ ನಡೆದ ಅಂತಿಮ ಹಂತದ ಪ್ರಚಾರ ಱಲಿಯಲ್ಲಿ ಮಾತನಾಡಿದ ಅಮಿತ್ ಷಾ, ಮಮತಾ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಹಿಂದಿಯಲ್ಲಿ ಅಬ್ಬರಿಸಿದ ಷಾ, ಏ ದೀದಿ, ಕಣ್ಣು ಮತ್ತು ಕಿವಿ ತೆರೆದು ಕೇಳಿಸಿಕೊ.. ಈ ಬಾರಿ ಬಂಗಾಳದ ಮತದಾರರು ನಿಮ್ಮನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ. ನಿಮ್ಮ ಸಮಯ ಮುಗಿದಿದೆ. ಟಾಟಾ, ಬೈ ಬೈ ದೀದಿ ಎಂದು ಲೇವಡಿ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಬಂಗಾಳದ ಜನರನ್ನು ನೀವು ಸಾಕಷ್ಟೂ ಪೀಡಿಸಿದ್ದೀರಿ. ಈಗ ನೀವು ಹೋಗುವ ಕಾಲ ಬಂದಿದೆ, ಬಿಜೆಪಿ ಬರುವ ಕಾಲ ಬಂದಿದೆ ಎಂದು ಷಾ ಗುಡುಗಿದ್ದಾರೆ. ಇದೇ ವೇಳೆ ನುಸುಳುಕೋರರ ವಿಚಾರ ಪ್ರಸ್ತಾಪಿಸಿದ ಅವರು, ಮೇ 4ಕ್ಕೆ ಮತ ಎಣಿಕೆ, 5ಕ್ಕೆ ಬಿಜೆಪಿ ಸರ್ಕಾರ. ನುಸುಳುಕೋರರೇ, ಬೇಗ ಬಾಂಗ್ಲಾದೇಶಕ್ಕೆ ಹೋಗಲು ರೆಡಿಯಾಗಿ ಎಂದು ಎಚ್ಚರಿಸಿದ್ದಾರೆ.
ಮಹಿಳಾ ವಿರೋಧಿ ಬಿಜೆಪಿ: ಟಿಎಂಸಿ ಗಂಭೀರ ಆರೋಪ
ಅಮಿತ್ ಷಾ ಅವರ ಈ ಭಾಷಣಕ್ಕೆ ಟಿಎಂಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯಸಭಾ ಸಂಸದೆ ಸಾಗರಿಕಾ ಘೋಷ್ ಮತ್ತು ಸಚಿವೆ ಚಂದ್ರೀಮಾ ಭಟ್ಟಾಚಾರ್ಯ ಅವರು ಶಾರ ಹೇಳಿಕೆಯನ್ನು ಅಸಭ್ಯ" ಮತ್ತು ಮಹಿಳಾ ವಿರೋಧಿ ಎಂದು ಕರೆದಿದ್ದಾರೆ.
ಸಂಸತ್ತಿನಲ್ಲಿ ನಾರಿ ಶಕ್ತಿಯ ಬಗ್ಗೆ ಮಾತನಾಡುವ ಬಿಜೆಪಿ, ರಿಯಲಿಟಿಯಲ್ಲಿ ನಾರಿಯರನ್ನು ಅವಮಾನಿಸುತ್ತದೆ. ಏಳು ಬಾರಿ ಸಂಸದರಾಗಿ, ಮೂರು ಬಾರಿ ಸಿಎಂ ಆಗಿರುವ ಹಿರಿಯ ನಾಯಕಿಯನ್ನು 'ಏ ದೀದಿ' ಎಂದು ಕರೆಯುವುದು ನಿಮ್ಮ ಸಂಸ್ಕೃತಿಯೇ ಎಂದು ಚಂದ್ರೀಮಾ ಭಟ್ಟಾಚಾರ್ಯ ಪ್ರಶ್ನಿಸಿದ್ದಾರೆ. ಇದು ಅಚಾನಕ್ಕಾಗಿ ಬಂದ ಮಾತಲ್ಲ, ಪ್ರಧಾನಿ ಮೋದಿ ಅವರು ದೀದಿ ಓ ದೀದಿ ಎಂದಿದ್ದರ ಮುಂದುವರಿದ ಭಾಗವಿದು. ಬಂಗಾಳದ ಮಹಿಳೆಯರು ಇದಕ್ಕೆ ಮತದಾನದ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಿಡಿಕಾರಿದ್ದಾರೆ.
2021ರ ಇತಿಹಾಸ ಮರುಕಳಿಸುತ್ತಿದೆಯೇ..?
2021ರ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನು ದೀದಿ ಓ ದೀದಿ ಎಂದು ವ್ಯಂಗ್ಯವಾಗಿ ಕರೆದಿದ್ದು ದೊಡ್ಡ ವಿವಾದವಾಗಿತ್ತು. ಅಂದು ಈ ಹೇಳಿಕೆಯು ಬಿಜೆಪಿಗೆ ತಿರುಗುಬಾಣವಾಗಿತ್ತು ಎಂದು ವಿಶ್ಲೇಷಿಸಲಾಗಿತ್ತು. ಬಂಗಾಳದ ಹೆಣ್ಣುಮಗಳಿಗೆ ಅವಮಾನ ಮಾಡಲಾಗುತ್ತಿದೆ ಎಂಬ ಭಾವನೆಯನ್ನು ಜನರ ಮನಸ್ಸಿನಲ್ಲಿ ಬಿತ್ತಲು ಟಿಎಂಸಿ ಯಶಸ್ವಿಯಾಗಿತ್ತು. ಈಗ ಅಮಿತ್ ಷಾ ಅವರ ಏ ದೀದಿ ಎಂಬ ಮಾತುಗಳು ಮತ್ತೆ ಅದೇ ಸನ್ನಿವೇಶವನ್ನು ನೆನಪಿಸುತ್ತಿವೆ.
ನಾರಿ ಶಕ್ತಿ ವರ್ಸಸ್ ನಾರಾ ಶಕ್ತಿ
ಟಿಎಂಸಿ ನಾಯಕಿ ಸಾಗರಿಕಾ ಘೋಷ್ ಮಾತನಾಡಿ, ಬಿಜೆಪಿಗೆ ನಾರಿ ಶಕ್ತಿ ಎಂಬುದು ಕೇವಲ ಒಂದು ಘೋಷಣೆಯಾಗಿದೆ. ಅವರಿಗೆ ಸ್ತ್ರೀಯರ ಮೇಲೆ ಗೌರವವಿಲ್ಲ. ಅವರದ್ದು 'ನಾರಿ ಶಕ್ತಿ' ಅಲ್ಲ, ಬರಿ 'ನಾರಾ ಶಕ್ತಿ' ಎಂದು ವ್ಯಂಗ್ಯವಾಡಿದ್ದಾರೆ. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಜಾರಿಯ ಬಗ್ಗೆಯೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಣದಲ್ಲಿನ ಪ್ರಮುಖ ಅಂಶಗಳು:
ಮತದಾನದ ದಿನಾಂಕ: ಏಪ್ರಿಲ್ 23 (ಮೊದಲ ಹಂತ), ಏಪ್ರಿಲ್ 29 (ಎರಡನೇ ಹಂತ).
ಪ್ರಮುಖ ಅಸ್ತ್ರ: ಮಹಿಳಾ ಮತದಾರರ ಓಲೈಕೆ.
ಬಿಜೆಪಿ ಅಜೆಂಡಾ: ನುಸುಳುಕೋರರ ಉಚ್ಛಾಟನೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ.
ಟಿಎಂಸಿ ಅಜೆಂಡಾ: ಬಂಗಾಳದ ಅಸ್ಮಿತೆ ಮತ್ತು ಮಹಿಳಾ ಸಬಲೀಕರಣ.
ಮಹಿಳಾ ಮತಗಳು ಯಾರ ಪಾಲಿಗೆ..?
ಪಶ್ಚಿಮ ಬಂಗಾಳದಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಮಮತಾ ಬ್ಯಾನರ್ಜಿ ಅವರ ಪಕ್ಷದಲ್ಲಿ ಶೇ. 40ರಷ್ಟು ಮಹಿಳಾ ಸಂಸದರಿದ್ದಾರೆ, ಆದರೆ ಬಿಜೆಪಿಯಲ್ಲಿ ಇದು ಶೇ. 13ಕ್ಕಿಂತ ಕಡಿಮೆ ಇದೆ ಎಂಬ ಅಂಶವನ್ನು ದೀದಿ ಪದೇಪದೆ ನೆನಪಿಸುತ್ತಿದ್ದಾರೆ. ಅಮಿತ್ ಷಾ ಅವರ ಒಂದು ವ್ಯಂಗ್ಯದ ಮಾತು ಮಹಿಳೆಯರ ಮನಸ್ಸನ್ನು ಬದಲಿಸುತ್ತದೆಯೇ ಅಥವಾ ಅಭಿವೃದ್ಧಿಯ ಭರವಸೆ ಗೆಲ್ಲುತ್ತದೆಯೇ ಎಂಬುದು ಮೇ 4ರಂದು ತಿಳಿಯಲಿದೆ,(ಏಜೆನ್ಸೀಸ್).