Yogi Model | ಬಂಗಾಳದಲ್ಲಿ ಯೋಗಿ ಮಾಡೆಲ್ ಅಬ್ಬರ
Yogi Model: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಆಡಳಿತ ಯಂತ್ರ ಚುರುಕುಗೊಂಡಿದ್ದು, ರಾಜ್ಯಾದ್ಯಂತ ಕಠಿಣ ಕಾನೂನು ಕ್ರಮಗಳು ಆರಂಭವಾಗಿವೆ. ವಿಶೇಷವಾಗಿ ಸಿಲಿಗುರಿಯಲ್ಲಿ ಅಕ್ರಮವಾಗಿ ಅತಿಕ್ರಮಿಸಿಕೊಂಡಿರುವ ಮತ್ತು ಅನಧಿಕೃತ ಕಟ್ಟಡಗಳನ್ನು ನೆಲಸಮ ಮಾಡುವ ಕಾರ್ಯಾಚರಣೆಗೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಡಾರ್ಜಿಲಿಂಗ್ ಸಂಸದ ರಾಜು ಬಿಸ್ತಾ, ಸಿಲಿಗುರಿಯಲ್ಲಿ ಅಕ್ರಮ ನಿರ್ಮಾಣಗಳು ಮಿತಿಮೀರಿದ್ದು, ಇದನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ, ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಉತ್ತರ ಪ್ರದೇಶದಿಂದ ಸುಮಾರು 24 ಬುಲ್ಡೋಜರ್‌ಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗುರುವಾರ ಸಿಲಿಗುರಿ ಉಪ-ವಿಭಾಗೀಯ ಕಚೇರಿಯಲ್ಲಿ ಉನ್ನತ ಮಟ್ಟದ ಆಡಳಿತಾತ್ಮಕ ಸಭೆ ನಡೆದಿದ್ದು, ಇದರಲ್ಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM), ಪೊಲೀಸ್ ಆಯುಕ್ತರು, ಡಾರ್ಜಿಲಿಂಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸುವುದು, ಅಕ್ರಮ ಕಟ್ಟಡಗಳ ತೆರವು, ಮಾದಕವಸ್ತು ಕಳ್ಳಸಾಗಣೆ ತಡೆ ಹಾಗೂ ನಿಯಮ ಉಲ್ಲಂಘಿಸುವ ಮದ್ಯದಂಗಡಿ, ಬಾರ್ ಮತ್ತು ಪಬ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಸಿಲಿಗುರಿ ಮಹಾನಗರ ಪಾಲಿಕೆ ವಿರುದ್ಧ ವಾಗ್ದಾಳಿ
ನಗರದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಲು ಸಿಲಿಗುರಿ ಮುನ್ಸಿಪಲ್ ಕಾರ್ಪೊರೇಷನ್‌ನ ವೈಫಲ್ಯವೇ ಕಾರಣ ಎಂದು ಆರೋಪಿಸಿರುವ ಬಿಸ್ತಾ, ಅತಿಕ್ರಮಣ ತಡೆಯುವಲ್ಲಿ ವಿಫಲವಾಗಿರುವ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ ವಿವರಣೆ ಕೇಳಲಾಗುವುದು ಎಂದು ಹೇಳಿದರು. ಸರ್ಕಾರಿ ಭೂಮಿ, ನದಿ ದಂಡೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಅತಿಕ್ರಮಣಗಳನ್ನು ತಕ್ಷಣವೇ ಖಾಲಿ ಮಾಡಬೇಕು, ಇಲ್ಲದಿದ್ದರೆ ಬುಲ್ಡೋಜರ್ ಮೂಲಕ ಧ್ವಂಸಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೇವಲ ಅತಿಕ್ರಮಣ ಮಾತ್ರವಲ್ಲದೆ, ಮಾದಕ ದ್ರವ್ಯ ಜಾಲ, ಅಕ್ರಮ ಮರಳು ಸಾಗಣೆ, ಅನಧಿಕೃತ ಟೋಲ್ ವಸೂಲಿ ಮತ್ತು ಭೂ ಮಾಫಿಯಾಗಳ ವಿರುದ್ಧವೂ ಸಮರ ಸಾರಲಾಗುವುದು ಎಂದು ಬಿಸ್ತಾ ಎಚ್ಚರಿಕೆ ನೀಡಿದ್ದಾರೆ.
ಬಂಗಾಳದಲ್ಲಿ ಯೋಗಿ ಮಾಡೆಲ್...
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ, ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಯೋಗಿ ಮಾದರಿಯನ್ನು ಜಾರಿಗೆ ತರುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪರಾಧ ಜಾಲಗಳು ಮತ್ತು ಭೂ ಮಾಫಿಯಾಗಳ ವಿರುದ್ಧ ಕೈಗೊಂಡ ಬುಲ್ಡೋಜರ್ ಕಾರ್ಯಾಚರಣೆ ದೇಶಾದ್ಯಂತ ಸದ್ದು ಮಾಡಿತ್ತು. ಈಗ ಸಿಲಿಗುರಿಯಲ್ಲಿ ಬುಲ್ಡೋಜರ್‌ಗಳ ಮೂಲಕ ಅಕ್ರಮಗಳನ್ನು ತೆರವುಗೊಳಿಸಲು ಮುಂದಾಗಿರುವುದು, ಬಂಗಾಳದಲ್ಲಿಯೂ ಯೋಗಿ ಮಾದರಿಯ ಕಠಿಣ ಆಡಳಿತ ಜಾರಿಯಾಗುತ್ತಿರುವುದರ ಮೊದಲ ಸೂಚನೆಯಾಗಿ ಕಂಡುಬರುತ್ತಿದೆ(ಏಜೆನ್ಸೀಸ್).