Madhya Pradesh Rajgarh domestic violence 
ದೇಶ

ಕುತ್ತಿಗೆಗೆ ಕಬ್ಬಿಣದ ಸರಪಳಿ ಕಟ್ಟಿ, ರಾಡ್​ನಿಂದ ಬರೆ ಎಳೆದು ಚಿತ್ರಹಿಂಸೆ; 6 ಕಿ.ಮೀ ನಡೆದು ಪೊಲೀಸರಿಗೆ ದೂರು ಕೊಟ್ಟ ಪತ್ನಿ..Domestic Violence

ಪ್ರಮುಖ ಮುಖ್ಯಾಂಶಗಳು

  • ಕುಡುಕ ಗಂಡನಿಂದ ಮಹಿಳೆಗೆ ನಿರಂತರ ಕಿರುಕುಳ, ಕುತ್ತಿಗೆಗೆ ಕಬ್ಬಿಣದ ಸರಪಳಿ ಕಟ್ಟಿ ಹಿಂಸೆ
  • ಸರಪಳಿ ಹೊತ್ತು 6 ಕಿ.ಮೀ ನಡೆದು ಬಂದ ಮಧ್ಯಪ್ರದೇಶದ ಮಹಿಳೆ
  • ಚಿತ್ರಹಿಂಸೆ ಕೊಟ್ಟ ಪತಿಯನ್ನು ಬಂಧಿಸಿ ಜೈಲಿಗಟ್ಟಿದ ಪೊಲೀಸರು
ರಾಜಗಢ: ಕುತ್ತಿಗೆಗೆ ಬೀಗ ಹಾಕಿದ ಕೀಲಿ, ಜೊತೆಗೆ ತುಕ್ಕು ಹಿಡಿದ ಕಬ್ಬಿಣದ ಸರಪಳಿ, ದೇಹದ ಹಲವು ಭಾಗದಲ್ಲಿ ಕಾಣಿಸುತ್ತಿರುವ ಸುಟ್ಟ ಗಾಯಗಳನ್ನು ಹೊತ್ತು ನನ್ನ  ಗಂಡನಿಂದ ನನ್ನನ್ನು ಬದುಕಿಸಿ ಎಂದು ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಪೊಲೀಸ್ ಠಾಣೆಗೆ ಬಂದದ್ದು ಸೊಣಕಲು ದೇಹದ ಮಹಿಳೆ.

ಯಾರೀ ಮಹಿಳೆ

ಸಂತ್ರಸ್ತೆ ಮಂಗೀಬಾಯಿ ತನ್ವರ್ ಎಂಬಾಕೆಯೇ ಪತಿ ಸರ್ದಾರ್ ಸಿಂಗ್ ತನ್ವರ್‌ನಿಂದ ದೌರ್ಜನ್ಯಕ್ಕೊಳಗಾದವರು ಎಂದು ಖಿಲ್ಚಿಪುರ ಪೊಲೀಸರು ಮಾಹಿತಿ ನೀಡಿದ್ದಾರೆ. ಕುತ್ತಿಗೆಗೆ ಸರಪಳಿ ಸುತ್ತಿ, ಕಂಬಕ್ಕೆ ಕಟ್ಟಿ ಈಗ ಹೇಗೆ ಪೊಲೀಸರಿಗೆ ದೂರು ಕೊಡ್ತೀಯಾ ಎಂದು ಸವಾಲು ಹಾಕಿದ್ದ ಪತಿಯನ್ನು ಎದುರಿಸಿ  ತಪ್ಪಿಸಿಕೊಂಡು  ಕುತ್ತಿಗೆಯಲ್ಲೇ ಕಬ್ಬಿಣ ಸರಪಳಿಯನ್ನು ಹೊತ್ತುಕೊಂಡು 6 ಕಿಲೋಮೀಟರ್ ನಡೆದು ಬಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಪೊಲೀಸರಿಗೆ ಹೇಗೆ ದೂರು ಕೊಡ್ತೀಯ ನೋಡ್ತೀನಿ

ಸಂತ್ರಸ್ತೆ ಪೊಲೀಸರಿಗೆ ದೂರು ಕೊಟ್ಟ ಪ್ರಕಾರ, ಜೂ.10ರಂದು ಆಕೆಯ ಪತಿ ಸರ್ದಾರ್ ಸಿಂಗ್ ಮದ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಎಣ್ಣೆ ಏಟಲ್ಲಿ ಆಕೆಗೆ ನಿಂಧಿಸಿ, ಒಡೆಯಲು ಮುಂದಾದಾಗ ಮಂಗೀಬಾಯಿ ವಿರೋಧಿಸಿದ್ದಾರೆ. ಇದರಿಂದ ಸಿಟ್ಟಾದ ಆತ ಕೋಲಿನಲ್ಲಿ ಮನಸೋಇಚ್ಛೆ ಥಳಿಸಿದ್ದಾನೆ.
ಪತಿಯ ಹೊಡೆತ ತಡೆಯಲಾರದ ಆಕೆ ಪೊಲೀಸರಿಗೆ ದೂರು ನೀಡಲು ಹೊರಟಾಗ ಮಧ್ಯ ದಾರಿಯಿಂದಲೇ ಆಕೆಯನ್ನು ಹಿಡಿದು ತಂದು ಹಲ್ಲೆ ನಡೆಸಿದ್ದಾನೆ. ಈಗ ಹೇಗೆ ಪೊಲೀಸ್​ ಸ್ಟೇಷನ್​ಗೆ ಹೋಗ್ತೀಯಾ ಅಂತ ನಾನು ನೋಡೆ ಬಿಡ್ತೇನೆ ಎಂದು  ಕುತ್ತಿಗೆಗೆ ಕಬ್ಬಿಣದ ಸರಪಳಿ ಸುತ್ತಿ, ಅದರ ಇನ್ನೊಂದು ತುದಿಯನ್ನು ಮನೆಯ ಕಂಬಕ್ಕೆ ಕಟ್ಟಿ ಬೀಗ ಜಡಿದಿದ್ದಾನೆ.

ಮೈ ಎಲ್ಲ ಸುಟ್ಟ ಗಾಯ

 ಗ್ಯಾಸ್​​ ಹಚ್ಚಿ ಕಬ್ಬಿಣದ ರಾಡ್​  ಸುಟ್ಟಿ ಸೊಂಟ, ಪೃಷ್ಠ ಹಾಗೂ ಬಲ ತೊಡೆಯ ಭಾಗಕ್ಕೆ ಬರೆ ಎಳದೆ ಹಿಂಸೆ ಮಾಡಿದ್ದಾನೆ. ಆಕೆ ಎಷ್ಟೇ ಕಿರುಚಾಡಿದ್ರೂ ಸ್ಥಳೀಯರು ರಕ್ಷಣೆಗೆ ಬರಲೇ ಇಲ್ಲ. ಮುಂದಿನ 24 ಗಂಟೆಗಳ ಕಾಲ ಆಕೆಯನ್ನು ಯಾರಿಗೂ ಸಿಗದಂತೆ ಮನೆಯೊಳಗೆ ಕೂಡಿಹಾಕಲಾಗಿತ್ತು. ಸರ್ದಾರ್ ಸಿಂಗ್ ತನ್ವರ್‌ ಹೊರಗಡೆ ಹೋದಾಗ ಸರಪಳಿಯನ್ನು ಕಷ್ಟಪಟ್ಟು ಬಿಡಿಸಿಕೊಂಡು, ಆರು ಕಿಲೋಮೀಟರ್​ ನಡೆದು ಬಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.  
 ಮುಳ್ಳಿನ ದಾರಿ, ಕಾಡು ರಸ್ತೆ ದಾಟಿ ಬಂದ ಮಹಿಳೆ ಪೊಲೀಸ್​ ಠಾಣೆ ತಲುಪುವ ಹೊತ್ತಿಗೆ ರಾತ್ರಿ ಸುಮಾರು 10 ಗಂಟೆಯಾಗಿತ್ತು. ಮಂಗೀಬಾಯಿ ಅವರ ಸ್ಥಿತಿ ಕಂಡ  ಪೊಲೀಸರಿಗೆ ದಿಗ್ಭ್ರಮೆಯಾಗಿ, ಮೊದಲು ಕುತ್ತಿಗೆಯಲ್ಲಿ  ಬೀಗ ಹಾಕಿದ ಸರಪಳಿ  ತೆಗೆದು ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಆಕೆಯ ದೇಹದ ಮೇಲಿನ ಗಾಯಗಳು ಮತ್ತು ಬರೆ ಎಳೆದ ಗುರುತುಗಳು ದೃಢಪಟ್ಟಿವೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಗ್ರಾಮಕ್ಕೆ ಧಾವಿಸಿ ಆರೋಪಿ ಪತಿ ಸರ್ದಾರ್ ಸಿಂಗ್ ತನ್ವರ್‌ನನ್ನು ಬಂಧಿಸಿದ್ದಾರೆ, (ಏಜೆನ್ಸೀಸ್).