Bargi Dam 
ದೇಶ

Bargi Dam ಕ್ರೂಸ್ ದುರಂತ: ಸಾವು ಗೆದ್ದ ಮಗುವಿನ ಮೊದಲ ಹುಟ್ಟುಹಬ್ಬ ಆಚರಣೆ!

ಭೋಪಾಲ್: ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಬಾರ್ಗಿ ಅಣೆಕಟ್ಟಿನಲ್ಲಿ ಸಂಭವಿಸಿದ ಭೀಕರ ಕ್ರೂಸ್ ದೋಣಿ ದುರಂತದಲ್ಲಿ(Bargi Dam) ಬದುಕುಳಿದ ಮಗುವಿಗೆ ಶುಕ್ರವಾರ 1 ವರ್ಷ ತುಂಬಿದೆ.
ಹೌದು, ಶುಕ್ರವಾರ ನಡೆದ ಸಾವು-ಬದುಕಿನ ನಡುವಿನ ಹೋರಾಟದಲ್ಲಿ ಪವಾಡಸದೃಶವಾಗಿ ಬದುಕುಳಿದಿದ್ದ ಅತ್ಯಂತ ಕಿರಿಯ ಮಗು ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತು. ಆದರೆ, ಈ ಸಂಭ್ರಮದ ದಿನವು ಸಡಗರದ ಬದಲು ಆ ಕರಾಳ ರಾತ್ರಿಯ ಮೌನ ಮತ್ತು ಶಾಂತ ಚಿಂತನೆಗೆ ಸಾಕ್ಷಿಯಾಯಿತು.

ಮಗುವನ್ನು ಎತ್ತಿ ಹಿಡಿದು ಜೀವ ಉಳಿಸಿದ ತಂದೆ

ದೋಣಿ ಮುಳುಗುತ್ತಿದ್ದಾಗ ತನ್ನ ಕುಟುಂಬದೊಂದಿಗೆ ಪ್ರವಾಸದಲ್ಲಿದ್ದ ಮಗುವನ್ನು ಅವನ ತಂದೆ, ವಕೀಲ ರೋಶನ್ ಆನಂದ್ ವರ್ಮಾ ಅವರು ಸಾಹಸಮಯವಾಗಿ ರಕ್ಷಿಸಿದ್ದರು. ಹಡಗು ಮುಳುಗುತ್ತಿದ್ದಂತೆ ಅಣೆಕಟ್ಟಿನ ಆಳವಾದ ನೀರಿಗೆ ಜಿಗಿದಿದ್ದ ರೋಶನ್, ಸತತ 30 ನಿಮಿಷಗಳ ಕಾಲ ಮಗುವನ್ನು ನೀರಿನ ಮಟ್ಟಕ್ಕಿಂತ ಮೇಲೆ ಎತ್ತಿ ಹಿಡಿದು ಪ್ರಾಣ ಉಳಿಸಿದ್ದರು. ಅಂದು ಮಗುವಿನ ಜೀವ ಉಳಿಸಿದ ದೈವಶಕ್ತಿಗೆ ಕೃತಜ್ಞತೆ ಸಲ್ಲಿಸಿದ ಕುಟುಂಬ, ದುರಂತದಲ್ಲಿ ಮಡಿದವರಿಗಾಗಿ ಪ್ರಾರ್ಥನೆ ಸಲ್ಲಿಸಿತು.

ಒಂಬತ್ತಕ್ಕೆ ಏರಿದ ಮೃತರ ಸಂಖ್ಯೆ

ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದ್ದ ಕ್ರೂಸ್ ದೋಣಿ ಮಗುಚಿಬಿದ್ದ ಪ್ರಕರಣದಲ್ಲಿ ಶುಕ್ರವಾರ ಐದು ಶವಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಮೃತರ ಸಂಖ್ಯೆ ಒಂಬತ್ತಕ್ಕೆ ಏರಿದೆ. ಇನ್ನೂ ಆರು ಪ್ರವಾಸಿಗರಿಗಾಗಿ ಸೇನೆ, ಎನ್‌ಡಿಆರ್‌ಎಫ್ (NDRF) ಮತ್ತು ಎಸ್‌ಡಿಆರ್‌ಎಫ್ (SDRF) ತಂಡಗಳು ಅಣೆಕಟ್ಟಿನ ಒಡಲಿನಲ್ಲಿ ಹುಡುಕಾಟ ನಡೆಸುತ್ತಿವೆ. ಈವರೆಗೆ 28 ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೃದಯ ವಿದ್ರಾವಕ ದೃಶ್ಯ

ರಕ್ಷಣಾ ಕಾರ್ಯಾಚರಣೆಯಲ್ಲಿದ್ದ ಡೈವರ್‌ಗಳು ಕಂಡ ಒಂದು ದೃಶ್ಯ ಎಲ್ಲರ ಕಣ್ಣನ್ನು ತೇವಗೊಳಿಸಿತ್ತು. ಮಹಿಳೆಯೊಬ್ಬರ ಮೃತದೇಹವು ನೀರಿನ ಅಡಿಯಲ್ಲಿಯೂ ತನ್ನ ಮಗುವನ್ನು ಬಿಗಿಯಾಗಿ ಅಪ್ಪಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಾಯಿಯ ಪ್ರೀತಿ ಸಾವಿನ ನಂತರವೂ ಮಗುವನ್ನು ರಕ್ಷಿಸಲು ಹಂಬಲಿಸಿದ ಪರಿ ಕಂಡು ರಕ್ಷಣಾ ಸಿಬ್ಬಂದಿ ಮೂಕವಿಸ್ಮಿತರಾದರು.

ಸುರಕ್ಷತಾ ಲೋಪ: ಸಿಬ್ಬಂದಿ ವಜಾ

ಪ್ರವಾಸಿಗರಿಗೆ ಲೈಫ್ ಜಾಕೆಟ್ ನೀಡದಿರುವುದು ಮತ್ತು ನಿರ್ಲಕ್ಷ್ಯವೇ ಈ ದುರಂತಕ್ಕೆ ಮೂಲ ಕಾರಣ ಎಂದು ಬದುಕುಳಿದವರು ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ ಹಾಗೂ ದೋಣಿಯಲ್ಲಿದ್ದ ಮೂವರು ಸಿಬ್ಬಂದಿಯನ್ನು ತಕ್ಷಣವೇ ವಜಾಗೊಳಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಾದ್ಯಂತ ಇಂತಹ ಹಡಗುಗಳ ಕಾರ್ಯಾಚರಣೆಯನ್ನು ಸರ್ಕಾರ ತಾತ್ಕಾಲಿಕವಾಗಿ ನಿಷೇಧಿಸಿದೆ,(ಏಜೆನ್ಸೀಸ್​).