Baramati By Election | Sunetra Pawar | ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ 
ದೇಶ

ಬಾರಾಮತಿ ಉಪಚುನಾವಣೆ; ಸುನೇತ್ರಾ ವಿರುದ್ಧ 'ಕೈ' ಸ್ಪರ್ಧೆ.. ಇದು ಕಾಂಗ್ರೆಸ್‌ನ ಅಪ್ರಬುದ್ಧತೆ ಎಂದು ಉದ್ಧವ್ ಸೇನೆ ಕಿಡಿ! | Baramati By Election

ಪುಣೆ: ಎನ್‌ಸಿಪಿ ನಾಯಕ ಅಜಿತ್ ಪವಾರ್ ಅಕಾಲಿಕ ನಿಧನದ ಬಳಿಕ ತೆರವಾದ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದೊಳಗೆ ಭಾರಿ ಬಿರುಕು ಮೂಡಿಸಿದ್ದು, ಅಜಿತ್​ ದಾದಾ ಪತ್ನಿ ಸುನೇತ್ರಾ ಪವಾರ್ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಅಜಿತ್ ಪವಾರ್​ಗೆ ಗೌರವ ಸಲ್ಲಿಸುವ ಸಲುವಾಗಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಅಭ್ಯರ್ಥಿಗಳನ್ನು ಹಾಕದಿರಲು ನಿರ್ಧರಿಸಿದ್ದವು. ಆದರೆ, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಮಿತ್ರಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಶಿವಸೇನಾ ಮುಖವಾಣಿ ಸಾಮ್ನಾ ಪತ್ರಿಕೆಯು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇದನ್ನು ಆ ಪಕ್ಷದ ರಾಜಕೀಯ ಅಪ್ರಬುದ್ಧತೆ ಎಂದು ಕರೆದಿದೆ. ಸಂಜಯ್ ರಾವತ್ ಬರೆದಿರುವ ಸಂಪಾದಕೀಯದಲ್ಲಿ, ಕಾಂಗ್ರೆಸ್ ರಾಷ್ಟ್ರೀಯ ಮಟ್ಟದ ನಾಯಕತ್ವ ವಹಿಸಿಕೊಳ್ಳಬೇಕಾದರೆ ಸಣ್ಣಪುಟ್ಟ ಪ್ರಾದೇಶಿಕ ಲಾಭಗಳನ್ನು ಬಿಟ್ಟು ಬಿಗ್ ಬ್ರದರ್ ರೀತಿ ವರ್ತಿಸಬೇಕು ಎಂದು ಸಲಹೆ ನೀಡಲಾಗಿದೆ.
 2022 ರಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಳ್ಳಲು ಅಂದು ಸ್ಪೀಕರ್ ಆಗಿದ್ದ ನಾನಾ ಪಟೋಲೆ ಅವರ ಆತುರದ ರಾಜೀನಾಮೆಯೇ ಕಾರಣ ಎಂದು ಸಾಮ್ನಾ ನೇರವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ್ದು, ಪ್ರಾದೇಶಿಕ ಪಕ್ಷಗಳನ್ನು ಕೇವಲ ಊರುಗೋಲುಗಳಂತೆ ನೋಡದೆ ಸಮಾನ ಪಾಲುದಾರರಾಗಿ ಪರಿಗಣಿಸಬೇಕು ಎಂದು ಶಿವಸೇನೆ ಎಚ್ಚರಿಕೆ ನೀಡಿದೆ.

ಕಾಂಗ್ರೆಸ್​ಗೆ ಇದು ಇಷ್ಟವಿಲ್ಲ

ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಶಾಸಕರನ್ನು ಬೆಂಬಲಿಸುವುದಾಗಿ ಶರದ್ ಪವಾರ್ ಘೋಷಿಸಿರುವುದು ಕಾಂಗ್ರೆಸ್ ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್, ತಮ್ಮ ಪಕ್ಷವು 16 ಶಾಸಕರನ್ನು ಹೊಂದಿದ್ದು, ಅದಕ್ಕೆ ಅನುಗುಣವಾಗಿ ಪ್ರಾತಿನಿಧ್ಯ ಸಿಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಮೈತ್ರಿಕೂಟದೊಳಗೆ ಸಾಮೂಹಿಕ ಚರ್ಚೆ ನಡೆಯಬೇಕು ಎಂಬುದು ಕಾಂಗ್ರೆಸ್ ಆಗ್ರಹವಾಗಿದೆ.

ಕಾಂಗ್ರೆಸ್​​ನಿಂದ ಶಾಯರಿ ಏಟು..

ಶಿವಸೇನೆಯ ಈ ಟೀಕೆಗಳಿಗೆ ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಶಾಯರಿ ಮೂಲಕವೇ ತಿರುಗೇಟು ನೀಡಿದ್ದು, ಸಂಜಯ್ ರಾವತ್ ಪತ್ರಕರ್ತ ಮತ್ತು ಪಕ್ಷದ ವಕ್ತಾರನ ಪಾತ್ರಗಳ ನಡುವೆ ದಾರಿ ತಪ್ಪುತ್ತಾರೆ ಎಂದು ಲೇವಡಿ ಮಾಡಿರುವ ಅವರು, ಯಾರೊಬ್ಬರ ಕಡೆಗೆ ಬೆರಳು ತೋರಿಸಿದರೆ, ನಾಲ್ಕು ಬೆರಳುಗಳು ನಮ್ಮ ಕಡೆಗೆ ತಿರುಗಿರುತ್ತವೆ ಎಂಬುದನ್ನು ಮರೆತುಬಿಡುತ್ತಾರೆ.
 ನಾವು ನಿಟ್ಟುಸಿರು ಬಿಟ್ಟರೂ ಬದ್ನಾಮ್ ಆಗುತ್ತೇವೆ, ಆದರೆ ಅವರು ಕೊಲೆ ಮಾಡಿದರೂ ಚರ್ಚೆಯಾಗುವುದಿಲ್ಲ ಎಂಬ ಅರ್ಥ ಬರುವ ಅಕ್ಬರ್ ಅಲಹಾಬಾದ್​ರ (ಹಮ್ ಆಹ್ ಭಿ ಕರ್ತೇ ಹೈ ತೋ ಹೋ ಜಾತೇ ಹೈ ಬದ್ನಾಮ್, ವೋ ಕತ್ಲ್ ಭಿ ಕರ್ತೇ ಹೈ ತೋ ಚರ್ಚಾ ನಹಿ ಹೋತಾ) ಸಾಲುಗಳನ್ನು ಉಲ್ಲೇಖಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪ್ರಾಮಾಣಿಕ ನಿಲುವು ಹೊಂದಿದೆ ಎಂದು ಸಮರ್ಥಿಸಿಕೊಂಡಿರುವ ಸಾವಂತ್, ಮೈತ್ರಿಕೂಟದಲ್ಲಿ ಇತರರೊಂದಿಗೆ ಚರ್ಚಿಸದೆ ನಿರ್ಧಾರ ತೆಗೆದುಕೊಳ್ಳುವ ಪ್ರವೃತ್ತಿ ಶಿವಸೇನೆಗೆ ಇದೆ ಎಂದು ಟೀಕಿಸಿದ್ದಾರೆ. ಈ ಆರೋಪ-ಪ್ರತ್ಯಾರೋಪ ಮಹಾರಾಷ್ಟ್ರ ರಾಜಕಾರಣದಲ್ಲಿ ಮೈತ್ರಿಕೂಟದ ಭವಿಷ್ಯದ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ(ಏಜೆನ್ಸೀಸ್​​).