ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಸುತೇತ್ರಾ ಪವಾರ್ ಅವಿರೋಧ ಆಯ್ಕೆ
- ಬಾರಾಮತಿ ಬೈ ಎಲೆಕ್ಷನ್
- ಕೊನೆ ಕ್ಷಣದಲ್ಲಿ ಅಖಾಡದಿಂದ ಹಿಂಸರಿದ ಕಾಂಗ್ರೆಸ್ ಅಭ್ಯರ್ಥಿ
- ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಸುತೇತ್ರಾ ಪವಾರ್ ಅವಿರೋಧ ಆಯ್ಕೆ
ಮುಂಬೈ: ಮಹಾರಾಷ್ಟ್ರ ರಾಜಕೀಯದ ಪವರ್ ಸೆಂಟರ್ ಎಂದೇ ಕರೆಯಲ್ಪಡುವ ಬಾರಾಮತಿಯಲ್ಲಿ ಈಗ ಹೊಸ ಇತಿಹಾಸ ಸೃಷ್ಟಿಯಾಗಿದೆ. ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ ತೆರವಾಗಿದ್ದ ಸ್ಥಾನಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ, ಅವರ ಪತ್ನಿ ಹಾಗೂ ಈಗಿನ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ (Sunetra Pawar) ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಕೊನೆಯ ಕ್ಷಣದವರೆಗೆ ಸಸ್ಪೆನ್ಸ್ ಉಳಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷ, ತನ್ನ ಅಭ್ಯರ್ಥಿಯನ್ನು ಕಣದಿಂದ ಹಿಂತೆಗೆದುಕೊಳ್ಳುವ ಮೂಲಕ ಸುನೇತ್ರಾ ಪವಾರ್ ಅವರಿಗೆ ದೊಡ್ಡ ಗಿಫ್ಟ್ ನೀಡಿದೆ. ಈ ಬೆಳವಣಿಗೆಯಿಂದಾಗಿ ಬಾರಾಮತಿ ಕೋಟೆಯಲ್ಲಿ ಪವಾರ್ ಫ್ಯಾಮಿಲಿ ಅಧಿಪತ್ಯ ಮತ್ತೆ ಸಾಬೀತಾಗಿದೆ.
ಅಜಿತ್ ಪವಾರ್ ನಿಧನ ಮತ್ತು ಬದಲಾದ ಲೆಕ್ಕಾಚಾರ
ಈ ವರ್ಷದ ಆರಂಭದಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಅವರು ಇಡೀ ಮಹಾರಾಷ್ಟ್ರವನ್ನು ಅಗಲಿದ್ದರು. ಬಾರಾಮತಿಯ ಶಾಸಕರಾಗಿ ಮತ್ತು ಉಪಮುಖ್ಯಮಂತ್ರಿಯಾಗಿ ಜನಪ್ರಿಯರಾಗಿದ್ದ ಅವರ ಸಾವು ರಾಜಕೀಯವಾಗಿ ಶೂನ್ಯ ಭಾವವನ್ನು ಸೃಷ್ಟಿಸಿತ್ತು. ಅವರ ನಿಧನದ ಒಂದು ತಿಂಗಳ ನಂತರ, ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿ ಪಟ್ಟಕ್ಕೇರಿಸುವ ಮೂಲಕ ಪವಾರ್ ಕುಟುಂಬದ ಹಿಡಿತವನ್ನು ಕಾಯ್ದುಕೊಳ್ಳಲಾಯಿತು.
ಶರದ್ ಪವಾರ್ ಮಾಸ್ಟರ್ ಪ್ಲ್ಯಾನ್?
ಬಾರಾಮತಿ ಎಂದರೆ ಅಲ್ಲಿ ಶರದ್ ಪವಾರ್ ಅವರ ಮಾತೇ ಅಂತಿಮ. ಏಪ್ರಿಲ್ 23 ರಂದು ನಡೆಯಲಿರುವ ಈ ಉಪಚುನಾವಣೆಯಲ್ಲಿ ಸುನೇತ್ರಾ ಪವಾರ್ ವಿರುದ್ಧ ಪ್ರಬಲ ಪೈಪೋಟಿ ಇರಬಾರದು ಎಂದು ಎನ್‌ಸಿಪಿ (ಶರದ್ ಪವಾರ್ ಬಣ) ಹಿರಿಯ ನಾಯಕರು ಮೊದಲೇ ಪ್ಲ್ಯಾನ್ ಮಾಡಿದ್ದರು. ಅಜಿತ್ ಪವಾರ್ ಅವರ ಮೇಲಿನ ಗೌರವಾರ್ಥವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹಾಕಲಾಗಿತ್ತು. ಈ ಸಂಧಾನದ ಫಲವಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ವಾಪಸ್ ಕರೆಸಿಕೊಂಡಿದೆ.
ಕಾಂಗ್ರೆಸ್ ಯೂ-ಟರ್ನ್ ಹೊಡೆದಿದ್ದೇಕೆ?
ಮೊದಲಿಗೆ ಕಾಂಗ್ರೆಸ್ ಈ ಚುನಾವಣೆಯನ್ನು ಒಂದು ಸೈದ್ಧಾಂತಿಕ ಯುದ್ಧ ಎಂದು ಘೋಷಿಸಿತ್ತು. ಬಿಜೆಪಿಯ ಬಿ-ತಂಡದಂತೆ ಕಾರ್ಯನಿರ್ವಹಿಸುತ್ತಿರುವ ಶಕ್ತಿಗಳನ್ನು ಎದುರಿಸಲು ಅಮರ್ ಮೋರೆ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಆದರೆ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಗುರುವಾರ, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರು ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಪ್ರಕಟಿಸಿದರು.
ಅಜಿತ್ ಪವಾರ್ ಅವರು ಹಿಂದೆ ಕಾಂಗ್ರೆಸ್ ಸರ್ಕಾರದ ಭಾಗವಾಗಿದ್ದರು. ಅವರ ಮೇಲಿನ ಗೌರವ ಮತ್ತು ಬಾರಾಮತಿಯ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ, ಎಂದು ಸಪ್ಕಲ್ ತಿಳಿಸಿದ್ದಾರೆ.
ಪವಾರ್ ಕುಟುಂಬದ ಅಭೇದ್ಯ ಕೋಟೆ!
1991 ರಿಂದಲೂ ಬಾರಾಮತಿ ಎಂದರೆ ಅದು ಅಜಿತ್ ಪವಾರ್ ಅವರದ್ದೇ ಸಾಮ್ರಾಜ್ಯ. ಅದಕ್ಕೂ ಮೊದಲು ಶರದ್ ಪವಾರ್ ಇಲ್ಲಿ ರಾರಾಜಿಸಿದ್ದರು. ಈಗ ಸುನೇತ್ರಾ ಪವಾರ್ ಶಾಸಕಿಯಾಗಿ ಆಯ್ಕೆಯಾಗುತ್ತಿರುವುದು ಮತ್ತು ಸುಪ್ರಿಯಾ ಸುಲೆ ಅವರು ಈಗಾಗಲೇ ಸಂಸದರಾಗಿರುವುದು ಪವಾರ್ ಕುಟುಂಬದ ಹಿಡಿತವನ್ನು ಮತ್ತಷ್ಟು ಗಟ್ಟಿ ಮಾಡಿದೆ.
ಬಾರಾಮತಿ ಜನರು ತಮ್ಮ ನೆಚ್ಚಿನ ನಾಯಕನ ಪತ್ನಿಯನ್ನು ಅವಿರೋಧವಾಗಿ ಆರಿಸುವ ಮೂಲಕ ಅಜಿತ್ ಪವಾರ್ ಅವರಿಗೆ ಭಾವನಾತ್ಮಕ ಗೌರವ ಸಲ್ಲಿಸಲು ಸಜ್ಜಾಗಿದ್ದಾರೆ. ಸದ್ಯಕ್ಕೆ ಮಹಾರಾಷ್ಟ್ರ ರಾಜಕೀಯದಲ್ಲಿ ಈ ಅವಿರೋಧ ಜಯ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ, (ಏಜನ್ಸೀಸ್).