10, 20, 50 Rupee 
ದೇಶ

ಚಿಲ್ಲರೆ ಸಮಸ್ಯೆ ನೀಗಿಸಲು ಬ್ಯಾಂಕ್‌ಗಳ ಹೊಸ ಪ್ಲ್ಯಾನ್ : ಇನ್ನು ಎಟಿಎಂಗಳಲ್ಲಿ ಸಿಗಲಿವೆ 10, 20, 50 ರೂ. ನೋಟುಗಳು!

ಮುಂಬೈ: ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಮಾನ್ಯ ಜನರಿಗೆ ದೊಡ್ಡ ಸಿಹಿಸುದ್ದಿ ಸಿಗುವ ದಿನಗಳು ಹತ್ತಿರವಾಗಿವೆ. ಇದುವರೆಗೆ ಎಟಿಎಂ (ATM) ಎಂದರೆ ಕೇವಲ 100, 200 ಅಥವಾ 500 ರೂ. ನೋಟುಗಳನ್ನಷ್ಟೇ ಪಡೆಯುವ ಯಂತ್ರಗಳಾಗಿದ್ದವು. ಆದರೆ, ಇನ್ನು ಮುಂದೆ ನಿಮ್ಮ ಹತ್ತಿರದ ಎಟಿಎಂಗಳಲ್ಲಿ 10, 20 ಮತ್ತು 50 ರೂ. ಮುಖಬೆಲೆಯ ಸಣ್ಣ ನೋಟುಗಳೂ ಲಭ್ಯವಾಗಲಿವೆ.
ಹೌದು, ಈ ಕುರಿತು ಪ್ರಾಯೋಗಿಕ ಯೋಜನೆಯು ವಾಣಿಜ್ಯ ನಗರಿ ಮುಂಬೈನಲ್ಲಿ ಈಗಾಗಲೇ ಆರಂಭವಾಗಿದೆ ಎಂದು ಮಂಗಳವಾರ (ಜನವರಿ 27) ವರದಿಯಾಗಿದೆ.
ಸಣ್ಣ ಪುಟ್ಟ ಖರ್ಚುಗಳಿಗಾಗಿ ಚಿಲ್ಲರೆ ಹಣದ ಕೊರತೆ ಎದುರಿಸುತ್ತಿರುವ ಜನರಿಗಾಗಿ ಈ ವಿಶೇಷ ಯೋಜನೆಯನ್ನು ರೂಪಿಸಲಾಗಿದೆ. ಇದರಲ್ಲಿ ಎರಡು ರೀತಿಯ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದೆ. ಈ ಎಟಿಎಂಗಳು ವಿಶೇಷವಾಗಿ 10 ರಿಂದ 50 ರವರೆಗಿನ ನೋಟುಗಳನ್ನು ಡಿಸ್ಪೆನ್ಸ್ (ವಿತರಣೆ) ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಈ ಯೋಜನೆಯ ಅತ್ಯಂತ ಆಕರ್ಷಕ ಭಾಗ. ಈ ಯಂತ್ರಗಳಲ್ಲಿ ನಿಮ್ಮಲ್ಲಿರುವ ದೊಡ್ಡ ಮುಖಬೆಲೆಯ ನೋಟುಗಳನ್ನು (ಉದಾಹರಣೆಗೆ 500) ನೀಡಿ, ಅದಕ್ಕೆ ಬದಲಾಗಿ ಸಣ್ಣ ನೋಟುಗಳನ್ನು (10, 20) ಪಡೆಯುವ 'ಎಕ್ಸ್‌ಚೇಂಜ್' ಸೌಲಭ್ಯ ಇರಲಿದೆ ಎಂದು ವರದಿ ಉಲ್ಲೇಖಿಸಿದೆ.

ಎಲ್ಲಿ ಲಭ್ಯವಿರಲಿವೆ ಈ ಎಟಿಎಂಗಳ ಸೇವೆ?

ಮುಂಬೈನಲ್ಲಿ ನಡೆಯುತ್ತಿರುವ ಪೈಲಟ್ ಪ್ರಾಜೆಕ್ಟ್ ಯಶಸ್ವಿಯಾದ ನಂತರ, ಈ ವ್ಯವಸ್ಥೆಯನ್ನು ದೇಶಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ಜನದಟ್ಟಣೆ ಇರುವ ಈ ಕೆಳಗಿನ ಸ್ಥಳಗಳಿಗೆ ಆದ್ಯತೆ ನೀಡಲಾಗುವುದು ಎನ್ನಲಾಗಿದೆ.
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳು. ಮಾರುಕಟ್ಟೆಗಳು, ಆಸ್ಪತ್ರೆಗಳು ಮತ್ತು ಸರ್ಕಾರಿ ಕಚೇರಿಗಳು. ಕಾಲೇಜು ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಲಾಂಚ್​ ಮಾಡಲಾಗುವುದು ಎಂದು ಹೇಳಲಾಗಿದೆ.

ಈ ಬದಲಾವಣೆ ಏಕೆ ಮುಖ್ಯ?

ಭಾರತದಂತಹ ದೊಡ್ಡ ಮಾರುಕಟ್ಟೆಯಲ್ಲಿ ಸಣ್ಣ ಮುಖಬೆಲೆಯ ನೋಟುಗಳ ಅಗತ್ಯತೆ ಸದಾ ಇರುತ್ತದೆ. ಡಿಜಿಟಲ್ ಪಾವತಿ ಹೆಚ್ಚಾಗುತ್ತಿದ್ದರೂ, ಗ್ರಾಮೀಣ ಪ್ರದೇಶಗಳು ಮತ್ತು ಬೀದಿ ಬದಿ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸಲು ಚಿಲ್ಲರೆ ಹಣದ ಅನಿವಾರ್ಯತೆ ಇದೆ. "ಈ ಸೌಲಭ್ಯವು ಮಧ್ಯಮ ಮತ್ತು ಕೆಳವರ್ಗದ ಜನರ ದೈನಂದಿನ ಜೀವನವನ್ನು ಸುಲಭಗೊಳಿಸಲಿದೆ. ಬ್ಯಾಂಕ್‌ಗಳಿಗೆ ಹೋಗಿ ಚಿಲ್ಲರೆ ಪಡೆಯುವ ಕಷ್ಟ ತಪ್ಪಲಿದೆ," ಎಂದು ಬ್ಯಾಂಕಿಂಗ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್​).