ನ್ಯಾ.ಯಶವಂತ್ ವರ್ಮಾ 
ದೇಶ

ನೋಟು ಪತ್ತೆ ಪ್ರಕರಣ: ನ್ಯಾ.ಯಶವಂತ್ ವರ್ಮಾ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್ | Justice Yashwant Verma

ನವದೆಹಲಿ: ಅಗ್ನಿ ಅವಘಡದ ಸಮಯದಲ್ಲಿ ಮನೆಯಲ್ಲಿ ನೋಟು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸಲು ಲೋಕಸಭಾ ಸ್ಪೀಕರ್ ರಚಿಸಿದ್ದ ತನಿಖಾ ಸಮಿತಿಯನ್ನು ಪ್ರಶ್ನಿಸಿ ನ್ಯಾ.ಯಶವಂತ್ ವರ್ಮಾ(Justice Yashwant Verma) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಾಡಲು ಮಂಗಳವಾರ(ಡಿ. 16) ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಅರ್ಜಿಯಲ್ಲಿ ನ್ಯಾ. ಯಶವಂತ್ ವರ್ಮಾ, ತಮ್ಮನ್ನು ಪದಚ್ಯುತಗೊಳಿಸುವ ಲೋಕಸಭೆಯ ನಿರ್ಣಯದ ಅಂಗೀಕಾರವನ್ನು ಕಾನೂನಿಗೆ ವಿರುದ್ಧವಾಗಿದೆ ಎಂದು ಘೋಷಿಸಬೇಕೆಂದು ಕೋರಿದ್ದಾರೆ.
ಅರ್ಜಿ ವಿಚಾರಣೆಯಲ್ಲಿ ನ್ಯಾ. ವರ್ಮಾ ಪರ ವಾದಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, ಲೋಕಸಭಾ ತನಿಖಾ ಸಮಿತಿಯ ರಚನೆಯಲ್ಲಿ ಕಾರ್ಯವಿಧಾನದ ಲೋಪವನ್ನು ಎತ್ತಿ ತೋರಿಸಿದ ಬಳಿಕ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ವಿಚಾರಣೆಗೆ ಒಪ್ಪಿದೆ. ಜೊತೆಗೆ ಲೋಕಸಭಾ ಸ್ಪೀಕರ್ ಕಚೇರಿ ಮತ್ತು ಸಂಸತ್ತಿನ ಉಭಯ ಸದನಗಳ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಾಧೀಶರನ್ನು ಪದಚ್ಯುತಗೊಳಿಸಲು ಸಂಸತ್ತಿನ ಉಭಯ ಸದನಗಳಲ್ಲಿ ನಿರ್ಣಯ ಮಂಡಿಸಲು ಲೋಕಸಭೆ ಮತ್ತು ರಾಜ್ಯಸಭೆ ಜಂಟಿಯಾಗಿ ತನಿಖಾ ಸಮಿತಿಯನ್ನು ರಚಿಸುವ ಅಗತ್ಯವಿದೆ. ಲೋಕಸಭೆಯ ಸ್ಪೀಕರ್ ಏಕಪಕ್ಷೀಯವಾಗಿ ಅದನ್ನು ರಚಿಸಲಾಗುವುದಿಲ್ಲ ಎಂದು ವಾದಿಸಿದ್ದಾರೆ.
ಪ್ರಸ್ತಾವನೆಯ ಸೂಚನೆಗಳನ್ನು ಸದನಗಳಿಗೆ ನೀಡಿದರೆ, ಎರಡೂ ಸದನಗಳಲ್ಲಿ ಪ್ರಸ್ತಾವನೆಯನ್ನು ಅಂಗೀಕರಿಸದ ಹೊರತು ಯಾವುದೇ ಸಮಿತಿಯನ್ನು ರಚಿಸಲಾಗುವುದಿಲ್ಲ. ಮತ್ತು ಅಂತಹ ಪ್ರಸ್ತಾವನೆಯನ್ನು ಎರಡೂ ಸದನಗಳಲ್ಲಿ ಅಂಗೀಕರಿಸಿದರೆ, ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷರು ಜಂಟಿಯಾಗಿ ಸಮಿತಿಯನ್ನು ರಚಿಸುತ್ತಾರೆ ಎಂದಿದ್ದಾರೆ.
ಅರ್ಜಿ ವಿಚಾರಣೆಯನ್ನು ಜ. 07ಕ್ಕೆ ಮುಂದೂಡಲಾಗಿದೆ. ಸದ್ಯ ಅಲಹಬಾದ್ ಹೈಕೋರ್ಟ್​ ನ್ಯಾಯಾಧೀಶರಾಗಿರುವ ವರ್ಮಾ ಅವರ ದೆಹಲಿ ಅಧಿಕೃತ ನಿವಾಸದಲ್ಲಿ ಮಾರ್ಚ್ 14 ರಂದು ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಹಲವು ನೋಟಿನ ಕಂತೆಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು (ಏಜೆನ್ಸೀಸ್).