ಅಭಿಷೇಜ್ ಕುಮಾರ್ ಮತ್ತು ಸಿಎಂ ಸಾಮ್ರಾಟ್ ಚೌಧರಿ 
ದೇಶ

ಬಂಕಿಪುರ ಉಪಚುನಾವಣೆ: ಪ್ರಶಾಂತ್ ಕಿಶೋರ್ ಸ್ಪರ್ಧೆ ಹಿನ್ನೆಲೆ ನಾಮಪತ್ರ ಸಲ್ಲಿಸಿದ ಒಂದೇ ದಿನದಲ್ಲಿ ವಾಪಸ್ ಪಡೆದ ಬಿಜೆಪಿ ಅಭ್ಯರ್ಥಿ | BJP candidate

ಪಾಟ್ನಾ: ಜುಲೈ 30 ರಂದು ನಡೆಯುವ ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನಾಮಪತ್ರ ಸಲ್ಲಿಸಿದ ಒಂದು ದಿನದ ಬಳಿಕ ಕೌಟುಂಬಿಕ ಕಾರಣ ನೀಡಿ ಬಿಜೆಪಿ ಅಭ್ಯರ್ಥಿ(BJP candidate) ಅಭಿಷೇಕ್ ಕುಮಾರ್ ಇಂದು(ಜು. 10) ನಾಮಪತ್ರ ವಾಪಸ್ ಪಡೆದಿದ್ದಾರೆ.
ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ತಮ್ಮ ಜನ್ ಸುರಾಜ್ ಪಕ್ಷದಿಂದ ಮೊದಲ ಬಾರಿಗೆ ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಚುನಾವಣೆ ದೇಶದ ಗಮನ ಸೆಳೆದಿದೆ. ಅಭಿಷೇಕ್ ಕುಮಾರ್ ಈ ಚುನಾವಣೆಯಲ್ಲಿ ಅವರನ್ನು ಎದುರಿಸಬೇಕಿತ್ತು.
ಪಾಟ್ನಾದ ಬಿಜೆಪಿಯ ರಾಜ್ಯ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿದ ಅಭಿಷೇಕ್ ಕುಮಾರ್, ಬಂಕಿಪುರ ವಿಧಾನಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಗೆ ಬಿಜೆಪಿ ನನ್ನನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಮಾಡಿತ್ತು. ತಮ್ಮನ್ನು ಆಯ್ಕೆ ಮಾಡಿದ ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕತ್ವಕ್ಕೆ ಧನ್ಯವಾದ. ಆದರೆ ಕೌಟುಂಬಿಕ ಕಾರಣಗಳಿಂದಾಗಿ ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನಿರ್ಧಾರ ಪ್ರಕಟಿಸಿದರು.
ಅಭಿಷೇಕ್ ಕುಮಾರ್ ನಾಮಪತ್ರ ಹಿಂಪಡೆದ ಕೂಡಲೇ ಬಿಜೆಪಿ ನೀರಜ್ ಕುಮಾರ್ ಸಿನ್ಹಾ ಅವರನ್ನು ತನ್ನ ಹೊಸ ಅಭ್ಯರ್ಥಿಯಾಗಿ ಘೋಷಿಸಿತು. 32 ವರ್ಷದ ನಾಯಕ ನೀರಜ್ ಕುಮಾರ್ ಸಿನ್ಹಾ ಈ ಹಿಂದೆ ಭಾರತೀಯ ಜನತಾ ಯುವ ಮೋರ್ಚಾನ ಬೂತ್ ಅಧ್ಯಕ್ಷರಾಗಿ ಮತ್ತು ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಬಂಕಿಪುರ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆ ಉಪಚುನಾವಣೆ ನಡೆಯುತ್ತಿದೆ. ಇದು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ನಿತಿನ್ ನವೀನ್ ಬಂಕಿಪುರ ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದಾರೆ.
ಕ್ಷೇತ್ರವನ್ನು ಬಹಳ ಹಿಂದಿನಿಂದಲೂ ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗಿದೆ, ಇನ್ನೂ ಈ ಉಪಚುನಾವಣೆಯಲ್ಲಿ ಆರ್‌ಜೆಡಿ ರೇಖಾ ಗುಪ್ತಾ ಅವರನ್ನು ಕಣಕ್ಕಿಳಿಸಿದೆ. ಪ್ರಶಾಂತ್ ಕಿಶೋರ್ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆ ನಡೆಯಲಿದೆ. ಜುಲೈ 30ರಂದು ಉಪಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜುಲೈ 13, ಆಗಸ್ಟ್ 03ರಂದು ಮತ ಎಣಿಕೆ ನಡೆಯಲಿದೆ (ಏಜೆನ್ಸೀಸ್).