Bangladesh  
ದೇಶ

ಮತ್ತೆ ಪೂರ್ವ ಪಾಕಿಸ್ತಾನವಾಗುತ್ತಿರುವ ಬಾಂಗ್ಲಾದೇಶ

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ಅರಸ ತ್ರಿಭುವನ್​ 1955ರಲ್ಲಿ ನಿಧನರಾಗುವುದರೊಂದಿಗೆ ಭಾರತದ ಬಗ್ಗೆ ನೇಪಾಳದ ಸದ್ಭಾವನೆಯೂ ಸತ್ತುಹೋಯಿತು. ಹೊಸ ಅರಸ ಮಹೇಂದ್ರ ತನ್ನ ದೇಶವನ್ನು ಚೀನಾಗೆ ಹತ್ತಿರವಾಗಿಸಿದರು. ಜತೆಗೆ, 1962ರ ಯುದ್ಧದಲ್ಲಿ ಚೀನಾ ವಿರುದ್ಧ ಭಾರತ ಪರಾಭವ ಅನುಭವಿಸಿದ್ದನ್ನು ದಾಳವಾಗಿಸಿಕೊಂಡು ನವದೆಹಲಿಯನ್ನು ಬ್ಲಾಕ್​ಮೇಲ್​ ಮಾಡಿ ತನ್ನ ದೇಶಕ್ಕೆ ರಿಯಾಯಿತಿಗಳನ್ನು ಪಡೆದುಕೊಳ್ಳಲೂ ಕಸರತ್ತು ನಡೆಸಿದರು. ನೇಪಾಳದ ಈ ಹೊಸ ವರಸೆಯಿಂದಾಗಿ ಕಾಠ್ಮಂಡು ಅಧಿಪತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ನೇಪಾಳದ ಆಗ್ನೇಯ ತುದಿಯ ನೆಲದ ಮೂಲಕ ಪೂವೋರ್ತ್ತರ ರಾಜ್ಯಗಳಿಗೆ ಹೆಚ್ಚುವರಿ ರಸ್ತೆ ಹಾಗೂ ರೈಲುಮಾರ್ಗಗಳನ್ನು ನಿರ್ಮಿಸುವ, ಅಂದರೆ ಒಂದರ್ಥದಲ್ಲಿ ಸಿಲಿಗುರಿ ಕಾರಿಡಾರ್​ಅನ್ನು ಅಗಲೀಕರಿಸಿಕೊಳ್ಳುವ ಅವಕಾಶ ನಮಗೆ ದೂರವಾಗಿಹೋಯಿತು.
ಈ ಬೆಳವಣಿಗೆಗಳಿಂದ ಎಚ್ಚ್ಚೆತ್ತ ಪ್ರಧಾನಿ ಇಂದಿರಾ ಗಾಂಧಿ ನೇಪಾಳದ ಹಾದಿಯನ್ನು ಸಿಕ್ಕಿಂ ಮತ್ತು ಭೂತಾನ್​ ಹಿಡಿಯದಂತೆ ನೋಡಿಕೊಳ್ಳುವುದು ಭಾರತದ ಹಿತಾಸಕ್ತಿಗಳ ದೃಷ್ಟಿಯಿಂದ ಅತ್ಯಗತ್ಯ ಎಂದು ತೀರ್ಮಾನಿಸಿದರು. ತಮ್ಮ ಈ ವಿವೇಕಪೂರ್ಣ ಹಾಗೂ ವಾಸ್ತವವಾದಿ ನೀತಿಗಳನ್ನು ಜಾಣತನದಿಂದ ಕಾರ್ಯರೂಪಕ್ಕಿಳಿಸಿದ ಅವರು ಸಿಕ್ಕಿಂ ಅನ್ನು ಭಾರತದೊಂದಿಗೆ ವಿಲೀನಗೊಳಿಸಿದರು ಮತ್ತು ಭೂತಾನ್​ ಅನ್ನು ರಣಾತ್ಮವಾಗಿ ಮತ್ತು ಆರ್ಥಿಕವಾಗಿ ಭಾರತದೊಂದಿಗೆ ಗಾಢವಾಗಿ ಬಂಧಿಸಿದರು. ಈ ಎರಡು ಕ್ರಮಗಳಿಂದಾಗಿ ಕೂಚ್​ಬಿಹಾರ್​ ಮೂಲಕ ಪೂವೋರ್ತ್ತರ ರಾಜ್ಯಗಳಿಗೆ ಭಾರತದ ಮುಖ್ಯ ಭೂಭಾಗದಿಂದ ಸಾಗುವ ಸಂಪರ್ಕ ವ್ಯವಸ್ಥೆಗಳಿಗೆ ಹಾನಿ ಒದಗುವ ಸಾಧ್ಯತೆ ಕಡಿಮೆಯಾಯಿತು. ಆ ಸುಮಾರಿಗೇ ಪೂರ್ವ ಪಾಕಿಸ್ತಾನವನ್ನು ವಿಮೋಚನೆಗೊಳಿಸಿ ಬಾಂಗ್ಲಾದೇಶವನ್ನು ನಿರ್ಮಿಸಿದ ಕಾರಣ ಚೀನಾ ಮತ್ತು ಪಾಕಿಸ್ತಾನಗಳು ಒಟ್ಟುಗೂಡಿ ಕೂಚ್​ಬಿಹಾರ್​ ಮೇಲೆ ಹತೋಟಿ ಸ್ಥಾಪಿಸಿ ಪೂವೋರ್ತ್ತರ ರಾಜ್ಯಗಳನ್ನು ನಮ್ಮಿಂದ ದೂರವಾಗಿಸುವ ಅಪಾಯ ಇಲ್ಲವಾಯಿತು.
ಇಷ್ಟಾಗಿಯೂ ನೇಪಾಳ ಮಾತ್ರ ಸಮಸ್ಯೆಯಾಗಿಯೇ ಮುಂದುವರಿಯಿತು. ಅದಕ್ಕೆ ಕಾರಣವಾದದ್ದು ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರ್ಕಾರದ ನೀತಿಗಳು. ಯುಪಿಎ ಸರ್ಕಾರದ ಕುಖ್ಯಾತ ಯೆಚೂರಿ ಪ್ಲಾನ್​ನಿಂದಾಗಿಯೇ ನೇಪಾಳದಲ್ಲಿ ಅರಸೊತ್ತಿಗೆ ಸುಲಭವಾಗಿ ಅಂತ್ಯಗೊಂಡು ಗಣರಾಜ್ಯ ಸ್ಥಾಪನೆಯಾಗುವುದರೊಂದಿಗೆ ಹಿಂದೂ ರಾಷ್ಟ್ರ ಎಂಬ ಹಣೆಪಟ್ಟಿಯೂ ಇತಿಹಾಸ ಸೇರಿತ್ತು. ಪ್ರಜಾಪ್ರಭುತ್ವದ ನೆಪದಲ್ಲಿ ಸೃಷ್ಟಿಯಾದ ಹೊಸ ವ್ಯವಸ್ಥೆ ದೇಶದ ರಾಜಕೀಯ ಅಧಿಕಾರವನ್ನು ಭಾರತ&ವಿರೋಧಿ ಕಮ್ಯೂನಿಷ್ಟರು ಹಾಗೂ ಮಾವೋವಾದಿಗಳ ಕೈಗೆ ಹಾಕಲಾಯಿತು.
ಒಟ್ಟಾರೆಯಾಗಿ ಹೇಳುವುದಾದರೆ ವಿವೇಕಿ ಇಂದಿರಾ 19 ವರ್ಷ ತಡವಾಗಿ ದೇಶದ ಪ್ರಧಾನಿಯಾದದ್ದು ಮತ್ತು ದೇಶದ ಜನತೆ ಹೊಸ ಶತಮಾನದ ಆರಂಭದಲ್ಲಿ ಸೋನಿಯಾ ನೇತೃತ್ವದ ಯುಪಿಎ ಕೈಗೆ ಅಧಿಕಾರವನ್ನಿತ್ತದ್ದು ಭಾರತದ ಹಿತಾಸಕ್ತಿಗಳ ದೃಷ್ಟಿಯಿಂದ ಅತ್ಯಂತ ದೌರ್ಭಾಗ್ಯದ ಸಂಗತಿಗಳು.
ನೆಹರು ಅವರ ಅವಿವೇಕಿ ನೀತಿಗಳಿಂದಾಗಿ ದೇಶದ ರಣಾ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ತಟ್ಟಿದ ಹಾನಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಿಪಡಿಸಲು ಇಂದಿರಾ ಪ್ರಯತ್ನಿಸಿದ್ದು ಈಗ ಇತಿಹಾಸ. ಅವರ ಕ್ರಮಗಳಿಂದಾಗಿ ಸಿಲಿಗುರಿ ಕಾರಿಡಾರ್​ ಮತ್ತು ಕೂಚ್​ಬಿಹಾರ್​ನಲ್ಲಿ ನಮ್ಮ ಸಂಪರ್ಕ ವ್ಯವಸ್ಥೆ ಸುಗಮವಾಗಿ ಸಾಗುತ್ತಿದ್ದುದೂ ಈಗ ಇತಿಹಾಸವಾಗಬಹುದೇ ಎನ್ನುವ ಸನ್ನಿವೇಶ ಕಳೆದ ಒಂದೂಕಾಲು ವರ್ಷದಲ್ಲಿ ತಲೆಯೆತ್ತಿದೆ. ಹಿಂದೆ 1977&91ರ ನಡುವೆ ಢಾಕಾದಲ್ಲಿದ್ದ ಜಿಯಾ&ಉರ್​&ರಹಮಾನ್​ ಹಾಗೂ ಮಹಮದ್​ ಇರ್ಷಾದ್​ರ ಸೇನಾ ಸರ್ಕಾರಗಳು ಭಾರತವಿರೋಧಿ ನೀತಿಗಳನ್ನು ನಿರಂತರವಾಗಿ ಅನುಸರಿಸಿದವೇನೋ ನಿಜ.
ಆ ಮಾತು 1991&96 ಹಾಗೂ 2001&06ರ ಎರಡು ಅವಧಿಗಳಲ್ಲಿ ಅಧಿಕಾರ ನಡೆಸಿದ ಬೇಗಂ ಖಲೀದಾ ಜಿಯಾ ಅವರ ನಾಗರಿಕ ಸರ್ಕಾರದ ನೀತಿನಿಲುವುಗಳಿಗೂ ಅನ್ವಯಿಸುತ್ತದೆ. ಆದರೆ ಕಳೆದ ವರ್ಷದ ಆಗಸ್ಟ್​ನಿಂದ ಢಾಕಾದಲ್ಲಿ ಅಧಿಕಾರ ನಡೆಸುತ್ತಿರುವ ಮಹಮದ್​ ಯೂನುಸ್​ ಮತ್ತವರ ಸಹಯೋಗಿಗಳ ಭಾರತವಿರೋಧಿ ನೀತಿಗಳು ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದುಹಾಕುತ್ತಿವೆ ಮತ್ತು 1996&2001 ಹಾಗೂ 2008&24ರ ಅವಧಿಗಳಲ್ಲಿ ಶೇಖ್​ ಹಸೀನಾ ವಾಜಿದ್​ ಮೂಡಿಸಿದ್ದ ಅಗಾಧ ಭರವಸೆಗಳನ್ನು ನುಚ್ಚುನೂರು ಮಾಡುತ್ತಿವೆ. 1971ಕ್ಕೆ ಮೊದಲು ಪೂರ್ವ ಪಾಕಿಸ್ತಾನದಿಂದ ಸಿಲಿಗುರಿ ಕಾರಿಡಾರ್​ ಮತ್ತು ಕೂಚ್​ಬಿಹಾರ್​ಗಳಿಗೆ ಯಾವ ಅಪಾಯವಿತ್ತೋ ಅದು ಇನ್ನಷ್ಟು ಉಗ್ರವಾಗಿ ಈಗ ತಲೆಯೆತ್ತಿ ನಿಂತಿದೆ. ಪಾಕಿಸ್ತಾನ ಮತ್ತು ಚೀನಾಗಳ ಜತೆಗೆ ಸೇರಿ ಭಾರತಕ್ಕೆ ಹಾನಿಯೆಸಗುವ ಋಣಾತ್ಮಕ ಕಾರ್ಯದಲ್ಲಿ ಯೂನುಸ್​ ತೊಡಗಿದ್ದಾರೆ. ಅವರ ಮಾತು ಮತ್ತು ಕೃತಿಗಳನ್ನು ನೋಡಿದರೆ ಅವರು ಢಾಕಾದಲ್ಲಿ ಅಧಿಕಾರದಲ್ಲಿರುವುದು ಭಾರತಕ್ಕೆ ಹಾನಿಯೆಸಗುವ ಏಕೈಕ ಉದ್ದೇಶದಿಂದ ಎನ್ನುವಂತೆ ಕಾಣುತ್ತಿದೆ. ಇದೇ ವರ್ಷದ ಮಾರ್ಚ್​ 26ರಂದು ಅವರು ಬೀಜಿಂಗ್​ನಲ್ಲಿ ಆಡಿದ ಮಾತುಗಳು ಮತ್ತು ಅ. 27ರಂದು ಪಾಕಿಸ್ತಾನದ ಲೆ.ಜ. ಶಾಹಿದ್​ ಶಂಸಾದ್​ ಮಿರ್ಜಾ ಅವರಿಗೆ ನೀಡಿದ ಪುಸ್ತಕದ ಮುಖಪುಟದಲ್ಲಿನ ಭೂಪಟಗಳ ಬಗ್ಗೆ ಲೇಖನದ ಮೊದಲ ಭಾಗದಲ್ಲಿ ಹೇಳಿದ್ದೇನೆ.
ತಿರುಕನ ಕನಸಿನಂತೇ ಕಾಣುವ ತಮ್ಮ ಭಾರತವಿರೋಧಿ ಲೆಕ್ಕಾಚಾರಗಳನ್ನು ಸಾಧಿಸಿಕೊಳ್ಳಲು ಅವರು ಹೂಡುತ್ತಿರುವ ಯೋಜನೆಗಳು ಅಚ್ಚರಿ ಹುಟ್ಟಿಸುತ್ತವೆ.
ಸಿಲಿಗುರಿ ಕಾರಿಡಾರ್​ಗೆ ಹತ್ತಿರದ ಲಾಲ್​ ಮುನೀರ್​ಹಾಟ್​ನಲ್ಲಿ ದ್ವೀತಿಯ ಮಹಾಯುದ್ಧದ ದಿನಗಳಲ್ಲಿ ಬ್ರಿಟಿಷರು ನಿರ್ಮಿಸಿದ್ದ ಸಣ್ಣ ಪ್ರಮಾಣದ ವಾಯುನೆಲೆಯನ್ನು ಭರದಿಂದ ಅಭಿವೃದ್ಧಿಪಡಿಸುವ ಕೆಲಸದಲ್ಲಿ ಯೂನುಸ್​ ಈಗ ತೊಡಗಿದ್ದಾರೆ. ಅಲ್ಲಿ ಇಂಧನ ಸಂಗ್ರಹಾಗಾರ ಮತ್ತು 14 ಯುದ್ಧವಿಮಾನಗಳನ್ನು ನೆಲೆಗೊಳಿಸಲು ಅಗತ್ಯವಾದ ವ್ಯವಸ್ಥೆಗಳು ನಿರ್ಮಾಣವಾಗುತ್ತಿವೆ. ಅವುಗಳ ಗುರಿ ಭಾರತವಲ್ಲದೆ ಬೇರಾವ ದೇಶವೂ ಆಗಿರಲು ಸಾಧ್ಯವಿಲ್ಲ. ಯಾಕೆಂದರೆ ಬಾಂಗ್ಲಾದೇಶದ ನೆಲದ ಮೇಲೆ ಕಣ್ಣಿಟ್ಟಿರುವ ಏಕೈಕ ದೇಶ ಮ್ಯಾನ್ಮಾರ್​. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅರಕಾನ್​ ಸೇನೆ ಇರುವುದು ವಾಯವ್ಯ ಬಾಂಗ್ಲಾದೇಶಕ್ಕೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿರುವ ಆಗ್ನೇಯದ ಚಿತ್ತಗಾಂಗ್​ ಜಿಲ್ಲೆಯಾಚೆ.
ಯೂನುಸ್​ ಸರ್ಕಾರದ ಈ ನಡೆ ಸಹಜವಾಗಿಯೇ ಭಾರತದಲ್ಲಿ ಪ್ರಶ್ನೆಗಳನ್ನು ಮೂಡಿಸಿದೆ. ಈ ಕುರಿತಾಗಿ ಇದೇ ಆ. 8ರಂದು ಲೋಕಸಭೆಯಲ್ಲಿ ಪ್ರಶ್ನೆಯೂ ಬಂದದ್ದುಂಟು. ಅದಕ್ಕೆ ಉತ್ತರಿಸಿದ ಉಪ ವಿದೇಶಾಂಗ ಮಂತ್ರಿ ಕೀರ್ತಿವರ್ಧನ್​ ಸಿಂಗ್​, ಲಾಲ್​ ಮುನೀರ್​ಹಾಟ್​ ವಾಯುನೆಲೆಯ ಅಭಿವೃದ್ಧಿ ಭಾರತದ ವಿರುದ್ಧವಲ್ಲ ಎಂದು ಬಾಂಗ್ಲಾದೇಶಿ ಸರ್ಕಾರ ತಿಳಿಸಿರುವುದಾಗಿ ಹೇಳಿದರು. ಯೂನುಸ್​ ಸರ್ಕಾರದ "ಆಶ್ವಾಸನೆ' ನಂಬರ್ಲಹವಲ್ಲ, ಮತ್ತದನ್ನು ಮೋದಿ ಸರ್ಕಾರ ಸರಿಯಾಗಿಯೇ ಗ್ರಹಿಸಿದೆ ಎನ್ನುವುದಕ್ಕೆ ನಂತರದ ದಿನಗಳಲ್ಲಿ ಅದು ಆ ವಲಯದಲ್ಲಿ ನಡೆಸುತ್ತಿರುವ ಚಟುವಟಿಕೆಗಳು ತೋರಿಸುತ್ತಿವೆ.
ಸೇನಾ ಭಾಷೆಯಲ್ಲಿ ಗ್ಯಾರಿಸನ್​ ಎಂದು ಕರೆಯಲಾಗುವ ಮೂರು ಬೃಹತ್​ ಸೇನಾ ಠಿಕಾಣಿಗಳನ್ನು ಭಾರತ ಸಿಲಿಗುರಿ ಕಾರಿಡಾರ್​ಗೆ ಸನಿಹದಲ್ಲಿ ಸ್ಥಾಪಿಸತೊಡಗಿದೆ. ಸಿಲಿಗುರಿ, ಕೂಚ್​ಬಿಹಾರ್​, ಸಿಕ್ಕಿಂ ಮತ್ತು ಭೂತಾನ್​ನಲ್ಲಿ ಈಗಾಗಲೇ ಇರುವ ಸೇನೆಯ ಜತೆಗೆ ಇನ್ನೂ ಸುಮಾರು 90,000 ಭಾರತೀಯ ಸೈನಿಕರು ಈ ಹೊಸ ಗ್ಯಾರಿಸನ್​ಗಳಲ್ಲಿ ಜಮಾವಣೆಗೊಳ್ಳಲಿದ್ದಾರೆ. ಜತೆಗೆ ದೇಶದ ಪೂರ್ವ ಭಾಗದಲ್ಲಿರುವ ಏಳು ವಾಯುನೆಲೆಗಳಲ್ಲಿ ಸುಖೋಯ್​ ಹಾಗೂ ರೈಲ್​ ಯುದ್ಧವಿಮಾನಗಳ ಸಂಖ್ಯೆ ಹೆಚ್ಚಳಗೊಂಡಿದೆ. ಅಷ್ಟೇ ಅಲ್ಲ, ಎಸ್​&400 ಹಾಗೂ ಆಕಾಶ್​ ತೀರ್​ ವಾಯು ಸುರಾ ವ್ಯವಸ್ಥೆಗಳೂ ಗುಪ್ತ ಸ್ಥಳಗಳಲ್ಲಿ ಸಜ್ಜುಗೊಂಡಿವೆ. ಇದೆಲ್ಲದರ ಅರ್ಥ ಪೂವೋರ್ತ್ತರದಲ್ಲಿ ಯಾವುದೇ ದಾಳಿಯನ್ನು ಎದುರಿಸಿ ಹಿಮ್ಮೆಟ್ಟಿಸಲು ಭಾರತೀಯ ಭೂಸೇನೆ ಹಾಗೂ ವಾಯುಸೇನೆಗಳೆರಡೂ ಸಜ್ಜುಗೊಂಡಿವೆ! ಇನ್ನು ಕೊಲ್ಕತಾ ಮತ್ತು ಅಂಡಮಾನ್​ನಲ್ಲಿರುವ ಭಾರತೀಯ ನೌಕಾದಳದ ತಯಾರಿಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಇದಕ್ಕೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳ ಪ್ರತಿಕ್ರಿಯೆ ಏನು? ಪಾಕಿಸ್ತಾನಿ ಸೇನೆಯ ಉಪನಾಯಕ ಲೆ.ಜ. ಶಾಹಿದ್​ ಶಂಶಾದ್​ ಮಿರ್ಜಾ ಅಕ್ಟೋಬರ್​ ಕೊನೆಯ ವಾರದಲ್ಲಿ ಲಾಲ್​ ಮುನೀರ್​ಹಾಟ್​ ವಾಯುನೆಲೆಗೆ ಭೇಟಿ ನೀಡಿದ್ದಾರೆ. ಅದರ ಉದ್ದೇಶ ಅಲ್ಲಿ ನಡೆಯುತ್ತಿರುವ ಕೆಲಸಕಾರ್ಯಗಳು ಪಾಕಿಸ್ತಾನದ ನಿಗಾದಲ್ಲಿ ಎನ್ನುವುದು ಸ್ಪಷ್ಟವಾಗುತ್ತದೆ. ಕಳೆದ ತಿಂಗಳು ಪಶ್ಚಿಮದ ಸರ್​ ಕ್ರೀಕ್​ ಪ್ರದೇಶದಲ್ಲಿ ಭಾರತವನ್ನು ಹೆದರಿಸುವ ಮಾತುಗಳನ್ನಾಡಿದ ಪಾಕಿಸ್ತಾನಿ ನೌಕಾದಳದ ಮುಖ್ಯಸ್ಥ ಅಡ್ಮಿರಲ್​ ನಾವಿದ್​ ಮಿರ್ಜಾ ನವೆಂಬರ್​ 10ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದಾರೆ. ಅದೇ ಸಮಯದಲ್ಲಿ ಪಾಕಿಸ್ತಾನಿ ನೌಕಾದಳದ ಯುದ್ಧನೌಕೆ ಪಿಎನ್​ಎಸ್​ ಸೈಫ್​ 4 ದಿನಗಳ "ಸದ್ಭಾವನಾ ಭೇಟಿ'ಗೆಂದು ಚಿತ್ತಗಾಂಗ್​ ಬಂದರಿನಲ್ಲಿತ್ತು! ಪಾಕಿಸ್ತಾನಿ ಯುದ್ಧನೌಕೆಯೊಂದು ಬಾಂಗ್ಲಾದೇಶಕ್ಕೆ ಬಂದುದು 1971ರ ನಂತರ ಇದೇ ಮೊದಲ ಬಾರಿ! ಇದೆಲ್ಲದರ ಅರ್ಥ ಇಂದಿನ ಬಾಂಗ್ಲಾದೇಶ ಪಾಕಿಸ್ತಾನದ ಜತೆ ಸೇನಾ ಸಹಕಾರವನ್ನು ದೊಡ್ಡ ಪ್ರಮಾಣದಲ್ಲಿ, ವೇಗವಾಗಿ ವೃದ್ಧಿಸಿಕೊಳ್ಳುತ್ತಿದೆ. ಢಾಕಾದ ಈ ನಡವಳಿಕೆಗಳು ಬಾಂಗ್ಲಾದೇಶವನ್ನು ಪಾಕಿಸ್ತಾನಕ್ಕೆ ಹತ್ತಿರಾಗಿಸುತ್ತಿವೆ ಎಂದಷ್ಟೇ ಹೇಳಿದರೆ ಅರ್ಧ ಸತ್ಯವನ್ನಷ್ಟೇ ಹೇಳಿದಂತಾಗುತ್ತದೆ.
ಬಾಂಗ್ಲಾದೇಶಿ ಸರ್ಕಾರ ವಿದೇಶಿ ಗಣ್ಯರನ್ನು ಶಿಖಾ ಅನೀರ್​ಬಾನ್​ಗೆ ಕರೆದೊಯ್ಯುತ್ತದೆ. ಶಿಖಾ ಅನೀರ್​ಬಾನ್​ 1971ರ ಸ್ವಾತಂತ್ರ್ಯ ಯುದ್ಧದಲ್ಲಿ ಹುತಾತ್ಮರಾದವರ ನೆನಪಿನಲ್ಲಿ ನಿರ್ಮಿಸಲಾದ ಸ್ಮಾರಕ. ಅಡ್ಮಿರಲ್​ ನಾವಿದ್​ ಅಶ್ರಫ್​ ಅವರನ್ನೂ ಯೂನುಸ್​ ಸರ್ಕಾರ ಅಲ್ಲಿಗೆ ಕರೆದೊಯ್ದಿತು. ಆದರೆ ಈ ಬಾರಿ ಒಂದು ವ್ಯತ್ಯಾಸವಿತ್ತು. ಹಿಂದೆ ವಿದೇಶಿ ಗಣ್ಯರಿಗೆ ಬಾಂಗ್ಲಾದೇಶೀಯರು ಹೇಳುತ್ತಿದ್ದುದು ಪಾಕಿಸ್ತಾನಿ ಹತ್ಯಾಕಾರಿಗಳ ವಿರುದ್ಧ ಸೆಣಸಿ ತಾವು ಸ್ವಾತಂತ್ರ್ಯ ಪಡೆದುಕೊಂಡುದು ಎಂದು. ಆದರೆ ಈಗ ವರಸೆ ಬದಲಾಗಿದೆ. ನಾವು ಮತ್ತು ಪಾಕಿಸ್ತಾನಿಯರ ನಡುವೆ ಯಾವ ಸಮಸ್ಯೆಯಾಗಲೀ, ವೈರವಾಗಲೀ ಇರಲಿಲ್ಲ; ಭಾರತದ ಕುಪ್ರಚೋದನೆಯಿಂದಾಗಷ್ಟೇ ತಮ್ಮ ನಡುವೆ ಕದನವಾಯಿತು ಎಂದು ಇಂದಿನ ಬಾಂಗ್ಲಾದೇಶೀಯರು ಹೇಳುತ್ತಿದ್ದಾರೆ! ಅಂದರೆ ಪಾಕಿಸ್ತಾನಿಯರು ಮತ್ತು ಬಾಂಗ್ಲಾದೇಶೀಯರು ಒಂದೇ ಎಂದು ೂಷಿಸುವ ಮೊದಲ ಹೆಜ್ಜೆ ಇದಾಗಿರುವಂತಿದೆ.

ಮುಂದೇನು?

ಬಾಂಗ್ಲಾದೇಶೀಯರ ಈ ಪಾಕಿಸ್ತಾನಿ ಪ್ರೀತಿ ಮತ್ತು ಭಾರತ&ದ್ವೇಷ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾಗಿ ಬೆಳೆಯಲಿದೆ. ಭಾರತದ ಬಗ್ಗೆ ಸದ್ಭಾವನೆ ಹೊಂದಿರುವ ಶೇಖ್​ ಹಸೀನಾ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ. ಜತೆಗೆ ಅವರ ಅವಾಮಿ ಲೀಗ್​ ಪವನ್ನು ಚುನಾವಣಾ ರಾಜಕಾರಣದಿಂದಲೇ ಹೊರಗೆ ಹಾಕುವ ಪಿತೂರಿಯನ್ನೂ ಯೂನುಸ್​ ಮಾಡುತ್ತಿದ್ದಾರೆ. ಮುಂದಿನ ಫೆಬ್ರವರಿಯಲ್ಲಿ ಚುನಾವಣೆಗಳು ನಡೆದರೆ ಭಾರತ&ವಿರೋಧಿ ಬೇಗಂ ಖಲೀದಾ ಜಿಯಾರ ಬಾಂಗ್ಲಾದೇಶ್​ ನ್ಯಾಷನಲಿಸ್ಟ್​ ಪಾರ್ಟಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಈಗಿನ ಯೂನುಸ್​ ಸರ್ಕಾರ ಮುಂದುವರಿದರೂ ಸರಿ, ಖಲೀದಾ ಪ್ರಧಾನಿಯಾದರೂ ಸರಿ, ಅವರ ಜುಟ್ಟು ಮೂಲಭೂತವಾದಿ ಯುವಜನರ ಕೈಯಲ್ಲಿರುತ್ತದೆ. ಅವರ ಮನಸ್ಸೀಡಿ ತುಂಬಿರುವುದು ಭಾರತ&ದ್ವೇಷ, ಹಿಂದೂ&ದ್ವೇಷ. ಬದಲಿಗೆ ಅವರು ಸಖ್ಯ, ಸಹಕಾರ ಬಯಸುವುದು ಪಾಕಿಸ್ತಾನದ ಜಿಹಾದಿ ಸೇನೆಯೊಂದಿಗೆ, ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ! ಇದೆಲ್ಲದರ ಅರ್ಥ ಬಾಂಗ್ಲಾದೇಶ ಮತ್ತೆ ಪೂರ್ವ ಪಾಕಿಸ್ತಾನವಾಗುತ್ತಿದೆ! ಭಾರತ ಈ ವಾಸ್ತವವನ್ನು ಒಪ್ಪಿಕೊಳ್ಳಬೇಕಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ತನ್ನ ನೀತಿಗಳನ್ನು ಮಾರ್ಪಡಿಸಿಕೊಳ್ಳಬೇಕಾಗಿದೆ.