ಬೆಂಗಳೂರು vs ಲಖನೌ ಸಮರ: ಕ್ರೀಡಾಂಗಣದಲ್ಲಿ ಪೂರನ್ ಕಿರಿಕ್, ಕೃನಾಲ್ ಕಾಲರ್ ಹಿಡಿದು ಆಕ್ರೋಶ!
ಲಖನೌ: ಐಪಿಎಲ್ ಎಂದರೆ ಅಲ್ಲಿ ರನ್ ಮಳೆ ಮಾತ್ರವಲ್ಲ, ರೋಷ-ಆವೇಶಗಳೂ ಮೇಳೈಸುತ್ತವೆ. ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ನಡೆದ ಹೈ-ಡ್ರಾಮಾ(Pooran-Krunal Controversy) ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟರ್ ನಿಕೋಲಸ್ ಪೂರನ್ ಅವರು ಆರ್‌ಸಿಬಿ ಆಟಗಾರ ಕೃನಾಲ್ ಪಾಂಡ್ಯ ಅವರ ಕಾಲರ್ ಹಿಡಿದು ಜಗಳಕ್ಕೆ ನಿಂತ ದೃಶ್ಯಗಳು ಅಭಿಮಾನಿಗಳನ್ನು ಬೆಚ್ಚಿಬೀಳಿಸಿವೆ.
ಪಂದ್ಯದ ಮೈದಾನದಲ್ಲಿ ಶುರುವಾದ ಕಿಡಿ
ಈ ಘಟನೆಯ ಮೂಲ ಪಂದ್ಯದ ಮಧ್ಯಭಾಗದಲ್ಲಿತ್ತು. ಕೃನಾಲ್ ಪಾಂಡ್ಯ ಬೌಲಿಂಗ್ ಮಾಡುವಾಗ ಪೂರನ್ ಅವರಿಗೆ ಸತತವಾಗಿ ಎರಡು ಬೌನ್ಸರ್‌ಗಳನ್ನು ಎಸೆದು ಕೆಣಕಿದ್ದರು. ಒಂದು ಸಿಂಗಲ್ ತೆಗೆದ ನಂತರ ಕೃನಾಲ್ ಪಾಂಡ್ಯ ಅವರು ಪೂರನ್ ಬಳಿ ಹೋಗಿ ಏನೋ ಹೇಳಿದ್ದರು. ವರದಿಗಳ ಪ್ರಕಾರ, ಯಾಕೆ ಸಿಕ್ಸ್ ಹೊಡೆಯಲು ಆಗುತ್ತಿಲ್ಲವೇ ಎಂಬರ್ಥದಲ್ಲಿ ಕೃನಾಲ್ ವ್ಯಂಗ್ಯವಾಡಿದ್ದರು ಎನ್ನಲಾಗಿದೆ. ಇದು ಪೂರನ್ ಅವರ ಆಕ್ರೋಶಕ್ಕೆ ಮೊದಲ ಕಿಡಿ ಹಚ್ಚಿತು.
ಪಂದ್ಯದ ನಂತರ ಸ್ಫೋಟಗೊಂಡ ಆವೇಶ!
ಲಖನೌ ತಂಡವು ಆರ್‌ಸಿಬಿ ವಿರುದ್ಧ 9 ರನ್‌ಗಳ ರೋಚಕ ಜಯ ಸಾಧಿಸಿದ ನಂತರ, ಮೈದಾನದಲ್ಲಿ ಆಟಗಾರರು ಪರಸ್ಪರ ಹಸ್ತಲಾಘವ ಮಾಡುತ್ತಿದ್ದರು. ಈ ವೇಳೆ ನಿಕೋಲಸ್ ಪೂರನ್ ಮತ್ತು ಕೃನಾಲ್ ಪಾಂಡ್ಯ ಮುಖಾಮುಖಿಯಾದರು. ನೋಡನೋಡುತ್ತಿದ್ದಂತೆಯೇ ಪೂರನ್ ಅವರು ಅತ್ಯಂತ ಆಕ್ರಮಣಕಾರಿಯಾಗಿ ಕೃನಾಲ್ ಪಾಂಡ್ಯ ಅವರ ಕುತ್ತಿಗೆ ಮತ್ತು ಕಾಲರ್ ಹಿಡಿದು ಎಳೆದಾಡಲು ಶುರು ಮಾಡಿದರು.
ಬೆಂಗಳೂರಿನ ಅಭಿಮಾನಿಗಳು ಮತ್ತು ಲಕ್ನೋ ತಂಡದ ಸಿಬ್ಬಂದಿ ಈ ದೃಶ್ಯ ನೋಡಿ ಒಂದು ಕ್ಷಣ ಗಾಬರಿಯಾದರು. ಪೂರನ್ ಅವರ ಮುಖದಲ್ಲಿನ ಸಿಟ್ಟು ಮಿತಿ ಮೀರಿತ್ತು. ಮೈದಾನದಲ್ಲಿದ್ದವರು ಜಗಳ ಬಿಡಿಸಲು ಬರುವಷ್ಟರಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು.
ತಿರುವು ನೀಡಿದ 'ನೋ ಲಫಡಾ' ಸಂದೇಶ!
ಆದರೆ, ಕ್ರೀಡಾ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಎಂಬಂತೆ, ಈ ಹೈ-ವೋಲ್ಟೇಜ್ ಡ್ರಾಮಾ ಕೇವಲ ಕೆಲವೇ ನಿಮಿಷಗಳಲ್ಲಿ ಶಾಂತವಾಯಿತು. ಸ್ವಲ್ಪ ಹೊತ್ತಿನ ನಂತರ ಕೃನಾಲ್ ಮತ್ತು ಪೂರನ್ ಇಬ್ಬರೂ ಪರಸ್ಪರ ಮಾತನಾಡುತ್ತಾ, ನಗುತ್ತಾ ಕಾಣಿಸಿಕೊಂಡರು. ನಂತರ ಕೃನಾಲ್ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೂರನ್ ಜೊತೆಗಿನ ಫೋಟೋ ಹಂಚಿಕೊಂಡು, ನೋ ಲಫಡಾ, ಓನ್ಲಿ ಲವ್ ಎಂದು ಬರೆಯುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು. ಪೂರನ್ ಕೂಡ ಈ ಪೋಸ್ಟ್‌ಗೆ ಕಮೆಂಟ್ ಮಾಡಿ, ಇದು ಕೇವಲ ತಮಾಷೆ, ನಾವು ಉತ್ತಮ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಯು ಐಪಿಎಲ್‌ನಲ್ಲಿ ಆಟಗಾರರ ನಡುವಿನ ಸ್ನೇಹ ಮತ್ತು ಸ್ಪರ್ಧಾತ್ಮಕತೆಯ ನಡುವಿನ ತೆಳುವಾದ ಗೆರೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ,(ಏಜೆನ್ಸೀಸ್).