Ban social media 
ದೇಶ

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್​ ಮೀಡಿಯಾ ಬ್ಯಾನ್​ ಮಾಡಿ! ಮದ್ರಾಸ್ ಹೈಕೋರ್ಟ್ ಸಲಹೆ

ಚೆನ್ನೈ: ಮಕ್ಕಳು ಸಾಮಾಜಿಕ ಮಾಧ್ಯಮಗಳಲ್ಲಿ ಸುಲಭವಾಗಿ ಅಶ್ಲೀಲ ವಿಷಯಗಳಿಗೆ ಒಡ್ಡಿಕೊಳ್ಳುತ್ತಿರುವುದನ್ನು ತಡೆಗಟ್ಟಲು, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಆಸ್ಟ್ರೇಲಿಯಾ ಮಾದರಿಯ ಕಾನೂನನ್ನು ಭಾರತದಲ್ಲಿ ಜಾರಿಗೊಳಿಸುವ ಸಾಧ್ಯತೆಯನ್ನು ಪರಿಗಣಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಕೆ.ಕೆ. ರಾಮಕೃಷ್ಣನ್ ಅವರಿದ್ದ ವಿಭಾಗೀಯ ಪೀಠವು, ಮಧುರೈಯ ಎಸ್. ವಿಜಯಕುಮಾರ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿತು. ಇನ್ನೂ ಅರ್ಜಿಯಲ್ಲಿ, ಅಂತರ್ಜಾಲ ಸೇವಾ ಒದಗಿಸುವವರು ಪೋಷಕರ ನಿಯಂತ್ರಣ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು ಮತ್ತು ಮಕ್ಕಳಿಗೆ ಅಶ್ಲೀಲ ವಿಷಯಗಳು ಸುಲಭವಾಗಿ ಲಭ್ಯವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು.
ನ್ಯಾಯಾಲಯ, ಮಕ್ಕಳ ಅಂತರ್ಜಾಲ ಬಳಕೆಯಲ್ಲಿನ ಅಪಾಯಗಳನ್ನು ಒಪ್ಪಿಕೊಂಡು, ಪೋಷಕರ ಜವಾಬ್ದಾರಿ ಹೆಚ್ಚು ಎಂದು ಹೇಳಿತು. ಕಾನೂನು ಜಾರಿಗೆ ಬರುವವರೆಗೂ ಅಧಿಕಾರಿಗಳು ಜಾಗೃತಿ ಅಭಿಯಾನಗಳನ್ನು ಹೆಚ್ಚಿಸಬೇಕು ಮತ್ತು ದುರ್ಬಲ ಗುಂಪುಗಳಿಗೆ ಸಂದೇಶ ತಲುಪಿಸಬೇಕು ಎಂದು ಸೂಚಿಸಿದೆ.

ಆಸ್ಟ್ರೇಲಿಯಾದಲ್ಲಿ ಬ್ಯಾನ್​​

ಆಸ್ಟ್ರೇಲಿಯಾ ಇತ್ತೀಚೆಗೆ 16 ವರ್ಷದೊಳಗಿನ ಮಕ್ಕಳಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್, ಟಿಕ್‌ಟಾಕ್, ಎಕ್ಸ್ (ಟ್ವಿಟರ್) ಮುಂತಾದ ಪ್ರಮುಖ ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ಹೊಂದುವುದನ್ನು ನಿಷೇಧಿಸುವ ಕಾನೂನು ಜಾರಿಗೆ ತಂದಿದೆ. ಈ ಕಾನೂನು ಡಿಸೆಂಬರ್ 10ರಿಂದ ಜಾರಿಯಲ್ಲಿದ್ದು, ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ,(ಏಜೆನ್ಸೀಸ್​).