Assam UCC Bill | ಅಸ್ಸಾಂನಲ್ಲಿ ಏಕರೂಪ ನಾಗರಿಕ ಸಂಹಿತೆ ಬಿಲ್ ಪಾಸ್ 
ದೇಶ

ಅಸ್ಸಾಂನಲ್ಲಿ ಏಕರೂಪ ನಾಗರಿಕ ಸಂಹಿತೆ ಬಿಲ್ ಪಾಸ್; ಬಹುಪತ್ನಿತ್ವ ನಿಷೇಧ, ಲಿವ್-ಇನ್ ರಿಲೇಶನ್‌ಶಿಪ್ ನೋಂದಣಿ ಕಡ್ಡಾಯ! | Assam UCC Bill

Assam UCC Bill: ಪ್ರತಿಪಕ್ಷಗಳ ತೀವ್ರ ವಿರೋಧ ಹಾಗೂ ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕೆಂಬ ಒತ್ತಾಯದ ನಡುವೆಯೂ ಅಸ್ಸಾಂ ವಿಧಾನಸಭೆಯು ಬುಧವಾರದಂದು ಏಕರೂಪ ನಾಗರಿಕ ಸಂಹಿತೆ (UCC) ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆಯ ಅಂಗೀಕಾರದೊಂದಿಗೆ, ಎಲ್ಲಾ ಧರ್ಮಗಳಿಗೂ ಅನ್ವಯವಾಗುವಂತೆ ವಿವಾಹ, ವಿಚ್ಛೇದನ, ಆಸ್ತಿ ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುವ ಸಾಮಾನ್ಯ ಕಾನೂನು ಚೌಕಟ್ಟನ್ನು ಜಾರಿಗೆ ತರಲು ದಾರಿ ಸುಗಮವಾಗಿದೆ.
ಈ ಕಾನೂನನ್ನು ಜಾರಿಗೆ ತರುತ್ತಿರುವ ದೇಶದ ಮೂರನೇ ರಾಜ್ಯ ಎಂಬ ಹೆಗ್ಗಳಿಕೆಗೆ ಅಸ್ಸಾಂ ಪಾತ್ರವಾಗಿದ್ದು, ಇದಕ್ಕೂ ಮುನ್ನ ಉತ್ತರಾಖಂಡ ಮತ್ತು ಗುಜರಾತ್ ರಾಜ್ಯಗಳು ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಜಾರಿಗೊಳಿಸಿದ್ದವು. ಇನ್ನು ಗೋವಾ ರಾಜ್ಯವು ಪೋರ್ಚುಗೀಸ್ ವಸಾಹತುಶಾಹಿ ಕಾಲದಿಂದಲೂ ಬಂದಿರುವ ಸಾಮಾನ್ಯ ನಾಗರಿಕ ಕಾನೂನು ವ್ಯವಸ್ಥೆಯನ್ನು ಈಗಾಗಲೇ ಅನುಸರಿಸುತ್ತಿದೆ.
ವಿಧಾನಸಭೆಯಲ್ಲಿ ದಿ ಯೂನಿಫಾರ್ಮ್ ಸಿವಿಲ್ ಕೋಡ್, ಅಸ್ಸಾಂ, 2026 ಬಿಲ್ ಕುರಿತು ದಿನವಿಡೀ ನಡೆದ ಸುದೀರ್ಘ ಚರ್ಚೆಯ ಬಳಿಕ, ಸ್ಪೀಕರ್ ರಂಜೀತ್ ಕುಮಾರ್ ದಾಸ್ ಅವರು ಮಸೂದೆಯನ್ನು ಅಂಗೀಕಾರಕ್ಕಾಗಿ ಮಂಡಿಸುವಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸೂಚಿಸಿದರು. ಮಸೂದೆಯ ಕುರಿತು ಸುಧೀರ್ಘ ಸಮಾಲೋಚನೆ ನಡೆಸಲು ಅದನ್ನು ಪರಿಶೀಲನಾ ಸಮಿತಿಗೆ ಕಳುಹಿಸಬೇಕು ಎಂದು ವಿರೋಧ ಪಕ್ಷದ ಸದಸ್ಯರು ಸಭಾಧ್ಯಕ್ಷರಿಗೆ ಒತ್ತಾಯಿಸಿದರು. ಆದರೆ ಸ್ಪೀಕರ್ ಈ ಬೇಡಿಕೆಯನ್ನು ತಿರಸ್ಕರಿಸಿದರು. ಇದರಿಂದ ಆಕ್ರೋಶಗೊಂಡ ವಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಮತದಾನದ ಪ್ರಕ್ರಿಯೆ ಮುಗಿಯುವವರೆಗೂ ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಾ ಆಕ್ಷೇಪ ವ್ಯಕ್ತಪಡಿಸಿದರು.
ಆಡಳಿತ ಪಕ್ಷದ ಸದಸ್ಯರು ಭಾರತ್ ಮಾತಾ ಕಿ ಜೈ ಮತ್ತು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿರುವ ಮಧ್ಯೆಯೇ, ಸ್ಪೀಕರ್ ಅವರು ಧ್ವನಿ ಮತದಾನ ಪ್ರಕ್ರಿಯೆಯನ್ನು ನಡೆಸಿ ಮಸೂದೆಯು ಅಂಗೀಕಾರಗೊಂಡಿದೆ ಎಂದು ಘೋಷಿಸಿದರು. ಮಸೂದೆಗೆ ಒಪ್ಪಿಗೆ ಸಿಗುತ್ತಿದ್ದಂತೆ ಇಡೀ ಸದನವು ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿತು. ಕಳೆದ ಸೋಮವಾರದಂದು ಸದನದಲ್ಲಿ ಮಂಡಿಸಲಾಗಿದ್ದ ಈ ಮಸೂದೆಯು ಧರ್ಮದ ಭೇದವಿಲ್ಲದೆ ವಿವಾಹ, ವಿಚ್ಛೇದನ, ಆಸ್ತಿ ಹಕ್ಕು ಮತ್ತು ಲಿವ್-ಇನ್ ಸಂಬಂಧಗಳಂತಹ ವೈಯಕ್ತಿಕ ವಿಷಯಗಳಲ್ಲಿ ಏಕರೂಪದ ಕಾನೂನುಗಳನ್ನು ತರಲು ಉದ್ದೇಶಿಸಿದೆ. ಇದು ಬಹುಪತ್ನಿತ್ವದ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ ಮತ್ತು ಲಿವ್-ಇನ್ ಸಂಬಂಧಗಳ ನೋಂದಣಿಯನ್ನು ಕಡ್ಡಾಯಗೊಳಿಸುತ್ತದೆ.
ಆದಾಗ್ಯೂ, ಅಸ್ಸಾಂನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡಗಳ ಸದಸ್ಯರಿಗೆ ಈ ಪ್ರಸ್ತಾವಿತ ಕಾನೂನಿನ ವ್ಯಾಪ್ತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಎಂದು ವರದಿಯಾಗಿದೆ. ಈ ಹೊಸ ಕಾನೂನು ಕಟ್ಟುನಿಟ್ಟಾದ ಶಿಕ್ಷೆಯ ನಿಬಂಧನೆಗಳನ್ನೂ ಒಳಗೊಂಡಿದೆ. ಅದರಂತೆ, ಮೊದಲ ವಿವಾಹ ಅಸ್ತಿತ್ವದಲ್ಲಿರುವಾಗಲೇ ಮತ್ತೊಂದು ಮದುವೆಯಾಗುವವರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಇದರೊಂದಿಗೆ ಲಿವ್-ಇನ್ ಸಂಬಂಧವನ್ನು ನೋಂದಾಯಿಸಿಕೊಳ್ಳಲು ವಿಫಲರಾಗುವವರಿಗೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಕಠಿಣ ನಿಯಮವನ್ನು ಈ ಮಸೂದೆಯಲ್ಲಿ ಸೇರಿಸಲಾಗಿದೆ(ಏಜೆನ್ಸೀಸ್​​).