Bahraich Crime 
ದೇಶ

Bahraich Crime: ವಿಚ್ಛೇದಿತ ಪತ್ನಿಯನ್ನು ಬೈಕ್‌ಗೆ ಕಟ್ಟಿ ರಸ್ತೆಯಲ್ಲೇ ಎಳೆದೊಯ್ದ ಮಾಜಿ ಪತಿ!

ಬಹ್ರೈಚ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ(Bahraich Crime) ಮನುಷ್ಯ ಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿಯನ್ನು ಬೈಕ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದು ಕೊಲೆಗೆ ಯತ್ನಿಸಿದ ಭೀಕರ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಬಹ್ರೈಚ್ ಜಿಲ್ಲೆಯ ರಾಮಗಾಂವ್ ನಿವಾಸಿ ರಹೀಸ್ ಎಂಬಾತ ಈ ಕೃತ್ಯ ಎಸಗಿದ ಆರೋಪಿ. ಈತ ನಾನಪಾರಾ ನಿವಾಸಿ ರೇಷ್ಮಾ ಎಂಬಾಕೆಯನ್ನು ಒಂದು ವರ್ಷದ ಹಿಂದೆ ವಿವಾಹವಾಗಿದ್ದ. ಆದರೆ, ದಾಂಪತ್ಯ ಜೀವನದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಕಳೆದ ಜನವರಿಯಲ್ಲಿ ಇವರಿಬ್ಬರು ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದರು. ಅಂದಿನಿಂದ ರೇಷ್ಮಾ ತನ್ನ ತವರು ಮನೆಯಲ್ಲೇ ವಾಸವಿದ್ದರು.

ರಸ್ತೆಯಲ್ಲೇ ನಡೆದ ಹೈಡ್ರಾಮಾ

ಬುಧವಾರ ರೇಷ್ಮಾ ಅವರು ಲಕ್ಷ್ಮಣಪುರ ಮಟೇಹಿ ಗ್ರಾಮದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಾದ ರಹೀಸ್, ಆಕೆಯೊಂದಿಗೆ ಜಗಳವಾಡಿದ್ದಾನೆ. ವಾಗ್ವಾದ ವಿಕೋಪಕ್ಕೆ ತಿರುಗುತ್ತಿದ್ದಂತೆ ರಹೀಸ್ ಮೊದಲು ತನ್ನ ಬೈಕ್‌ನಿಂದ ಆಕೆಗೆ ಗುದ್ದಿದ್ದಾನೆ. ನಂತರ ಆಕೆ ಕೆಳಗೆ ಬೀಳುತ್ತಿದ್ದಂತೆ ಬೈಕ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆರೋಪಿಗೆ ಧರ್ಮದೇಟು

ಮಹಿಳೆಯ ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ. ರೊಚ್ಚಿಗೆದ್ದ ಸಾರ್ವಜನಿಕರು ಆರೋಪಿ ರಹೀಸ್‌ಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ರೇಷ್ಮಾ ಮತ್ತು ಗಾಯಗೊಂಡಿರುವ ಆರೋಪಿ ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಆರೋಪಿ ವಿರುದ್ಧ ಕೊಲೆ ಯತ್ನ (Attempt to Murder) ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ,(ಏಜೆನ್ಸೀಸ್).