ಟ್ರಾಫಿಕ್​ ಜಾಮ್​ನ ದೃಶ್ಯಗಳು 
ದೇಶ

ಬದರಿನಾಥ್ ಯಾತ್ರೆ; ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್; 25-30 ಕಿಮೀ ನಿಂತಲ್ಲೇ ನಿಂತ ವಾಹನಗಳು | Badrinath Yatra

ಚಮೋಲಿ: ಚಾರ್ ಧಾಮ್ ಯಾತ್ರೆಯ ಭಾಗವಾಗಿ ಬದರಿನಾಥಕ್ಕೆ(Badrinath Yatra) ಹೋಗುವ ಹೆದ್ದಾರಿಯಲ್ಲೇ ಭಾರಿ ಟ್ರಾಫಿಕ್ ಜಾಮ್​ನಲ್ಲಿ ಉಂಟಾಗಿದ್ದು, ಸುಮಾರು 25 ರಿಂದ 30 ಕಿಮೀ ವಾಹನಗಳು ನಿಂತಲ್ಲೇ ನಿಂತಿದ್ದು, ಭಕ್ತರು ನಡು ರಸ್ತೆಗಳಲ್ಲಿ ಸಿಲುಕಿಕೊಂಡು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಭಾನುವಾರ(ಮೇ 31) ವರದಿಯಾಗಿದೆ.
ಚಾರ್ ಧಾಮ್ ಜೊತೆಗೆ ಹೇಮಕುಂಡ್ ಸಾಹಿಬ್ ಯಾತ್ರೆ ಪ್ರಾರಂಭವಾಗಿರುವುದರಿಂದ, ಕಳೆದ ಮೂರು ದಿನಗಳಿಂದ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಬಳಿಯ ಬೆಟ್ಟ ಪ್ರದೇಶಗಳಲ್ಲಿನ ಕಿರಿದಾದ ಮತ್ತು ಕಡಿದಾದ ರಸ್ತೆಗಳಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸರತಿ ಸಾಲಿನಲ್ಲಿದ್ದು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಬದರಿನಾಥ ಹೆದ್ದಾರಿಯಲ್ಲಿ ಜೋಶಿಮಠ ಬಳಿಯ 'ಝೀರೋ ಬ್ಯಾಂಡ್' ನಿಂದ ಶನಿವಾರ ದಿನವಿಡೀ 8 ಕಿ.ಮೀ.ವರೆಗೆ ಸಂಚಾರ ದಟ್ಟಣೆ ಇತ್ತು. ಜೋಶಿಮಠ ಮತ್ತು ವಿಷ್ಣು ಪ್ರಯಾಗದಂತಹ ಸ್ಥಳಗಳಲ್ಲಿ 20-30 ಕಿ.ಮೀ. ವಾಹನಗಳು ಸಿಲುಕಿಕೊಂಡಿವೆ ಎಂದು ತಿಳಿದುಬಂದಿದೆ. ವಾಹನಗಳು ಮುಂದೆ ಚಲಿಸದಿರುವುದು, ವಿಶ್ರಾಂತಿ ಸ್ಥಳಗಳ ಕೊರತೆ ಮತ್ತು ಗಂಟೆಗಟ್ಟಲೆ ರಸ್ತೆಗಳಲ್ಲಿಯೇ ಇರಬೇಕಾದ ಕಾರಣ ಸಾವಿರಾರು ಯಾತ್ರಿಕರು ಸರಿಯಾದ ಆಹಾರ ಮತ್ತು ನೀರಿನ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. 
ಇನ್ನೂ ಪರ್ವತಗಳಲ್ಲಿನ ಕಿರಿದಾದ ರಸ್ತೆಗಳಲ್ಲಿ ಪರಿಸ್ಥಿತಿ ಹೆಚ್ಚು ಜಟಿಲವಾಗಿದೆ ಎನ್ನಲಾಗಿದೆ. ಸಂಚಾರ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದು,  ಜೋಶಿಮಠ ಪ್ರದೇಶದಲ್ಲಿ ಗೇಟ್ ವ್ಯವಸ್ಥೆ-ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದಾರೆ. ಇದರ ಪ್ರಕಾರ, ಒಂದು ಕಡೆಯಿಂದ ಒಂದು ದಿಕ್ಕಿನಲ್ಲಿ ಸ್ವಲ್ಪ ಸಮಯದವರೆಗೆ ವಾಹನಗಳನ್ನು ಅನುಮತಿಸಲಾಗುತ್ತದೆ ಮತ್ತು ನಂತರ ಇನ್ನೊಂದು ದಿಕ್ಕಿನಲ್ಲಿ ವಾಹನಗಳನ್ನು ಅನುಮತಿಸಲಾಗುತ್ತದೆ. 
ಇನ್ನೂ ಅಧಿಕಾರಿಗಳು ಭಕ್ತರಿಗೆ ಮನವಿ ಮಾಡಿದ್ದು, ಯಾತ್ರೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಯಾತ್ರಿಕರು ತಮ್ಮ ಪ್ರಯಾಣವನ್ನು ಎಚ್ಚರಿಕೆಯಿಂದ ಯೋಜಿಸಲು ವಿನಂತಿಸಿದ್ದಾರೆ (ಏಜೆನ್ಸೀಸ್).