Smriti Irani > ತಡೆಹಿಡಿದ ವಂದೇ ಮಾತರಂ ಸಾಲುಗಳಲ್ಲೇ ಇದೆ ದುರ್ಗಾ ದೇವಿ ಉಲ್ಲೇಖ: ಸ್ಮೃತಿ ಇರಾನಿ ಹೊಸ ಬಾಂಬ್! 
ದೇಶ

ಕಾಂಗ್ರೆಸ್ ಕಚೇರಿಯಲ್ಲಿ ತಡೆಹಿಡಿದ ವಂದೇ ಮಾತರಂ ಸಾಲುಗಳಲ್ಲೇ ಇದೆ ದುರ್ಗಾ ದೇವಿ ಉಲ್ಲೇಖ: ಸ್ಮೃತಿ ಇರಾನಿ ಹೊಸ ಬಾಂಬ್! | Smriti Irani

ಶಾಸನಸಭೆಗಳಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೊಳಿಸುವುದನ್ನು ಬೆಂಬಲಿಸಬೇಕು ಮತ್ತು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡಿಸಬೇಕು ಎಂದು ಬಿಜೆಪಿ ನೂತನ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ (Smriti Irani), ಕೈ ನಾಯಕ ರಾಹುಲ್ ಗಾಂಧಿ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಪುಣೆಯಲ್ಲಿ ನಡೆದ ಛಾತ್ರೋಂ ಕಿ ಗೂಂಜ್ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಪುರುಷಪ್ರಧಾನ ವ್ಯವಸ್ಥೆಯನ್ನು ಧ್ವಂಸ ಮಾಡಿ ಎಂದು ಕರೆ ನೀಡಿದ ಮರುದಿನವೇ ಸ್ಮೃತಿ ಇರಾನಿ ಅವರಿಂದ ಈ ಹೇಳಿಕೆಗಳು ಹೊರಬಿದ್ದಿವೆ. ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸುವುದನ್ನು ಬೆಂಬಲಿಸುವ ಮೂಲಕ ರಾಹುಲ್ ಗಾಂಧಿ ಮಾತಿಗಿಂತ ಕೃತಿ ಲೇಸು ಎಂಬುದನ್ನು ತೋರಿಸಬೇಕು ಎಂದಿದ್ದಾರೆ.
ನವದೆಹಲಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಇರಾನಿ, ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರು ಮಹಿಳೆಯರು ಮತ್ತು ಮಹಿಳಾ ನಾಯಕತ್ವದ ಪರವಾಗಿ ಮಾತನಾಡಿದ್ದಾರೆ. ಹಾಗಾಗಿ, ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ತ್ವರಿತವಾಗಿ ಜಾರಿಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಉಪಕ್ರಮವನ್ನು ಬೆಂಬಲಿಸುವಂತೆ ನಾನು ಅವರಿಗೆ ವಿನಮ್ರವಾಗಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ತಡೆಹಿಡಿದ ವಂದೇ ಮಾತರಂ ಸಾಲುಗಳಲ್ಲೇ ಇದೆ ದುರ್ಗಾ ದೇವಿ ಉಲ್ಲೇಖ

ಇದರೊಂದಿಗೆ, ದುರ್ಗಾ ದೇವಿಯನ್ನು ಸ್ತುತಿಸುವ ಸಾಲುಗಳು ಸೇರಿದಂತೆ ವಂದೇ ಮಾತರಂ ಗೀತೆಯ ಸಂಪೂರ್ಣ ಆವೃತ್ತಿಯನ್ನು ತಮ್ಮ ಪಕ್ಷದ ಕಚೇರಿಯಲ್ಲಿ ಹಾಡಿಸುವಂತೆ ಕಾಂಗ್ರೆಸ್‌ಗೆ ಇರಾನಿ ಸವಾಲು ಹಾಕಿದ್ದಾರೆ. ರಾಹುಲ್ ಗಾಂಧಿ ಅವರು ಧರ್ಮದ ವಿಷಯವನ್ನು ಪ್ರಸ್ತಾಪಿಸಿರುವುದರಿಂದ, ಆ ಪ್ರಮುಖ ನಾಯಕರಲ್ಲಿ ನಾನೊಂದು ವಿನಂತಿ ಮಾಡುತ್ತಿದ್ದೇನೆ. ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಗೀತೆಯ ಅರ್ಧ ಭಾಗವನ್ನು ಹಾಡುವುದನ್ನು ತಡೆಹಿಡಿಯಲಾಗಿದೆ. ಆದರೆ, ತಡೆಹಿಡಿಯಲಾದ ಆ ಸಾಲುಗಳಲ್ಲಿಯೇ ಶಕ್ತಿರೂಪಿ ದುರ್ಗಾ ದೇವಿಯ ಉಲ್ಲೇಖವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಿಂದೂ ಸಂಪ್ರದಾಯವು ಮಹಿಳೆಯರನ್ನು ಗೌರವಿಸುತ್ತದೆ ಎಂದು ಹೇಳಿದ ಇರಾನಿ, ಲಕ್ಷ್ಮಿ, ಸರಸ್ವತಿ ಮತ್ತು ದುರ್ಗಾ ದೇವಿಯರ ಆರಾಧನೆಯನ್ನು ಉದಾಹರಣೆಯಾಗಿ ನೀಡಿದ್ದಾರೆ. ನಾವು ದುರ್ಗಾ ದೇವಿಯನ್ನು ಶಕ್ತಿಯ ಸಾಕ್ಷಾತ್ ರೂಪವೆಂದು ಆರಾಧಿಸುತ್ತೇವೆ. ದುರ್ಗಾ ದೇವಿಯನ್ನು ಸ್ತುತಿಸುವ ಸಾಲುಗಳು ಸೇರಿದಂತೆ ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಹಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಪುಣೆಯಲ್ಲಿ ರಾಹುಲ್​ ಮಾತು!...

ಶನಿವಾರ ಪುಣೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ್ದ ರಾಹುಲ್ ಗಾಂಧಿ, ಮನುಸ್ಮೃತಿ ಮನಸ್ಥಿತಿಯನ್ನು ಟೀಕಿಸಿದ್ದರು. ಈ ಮನಸ್ಥಿತಿಯು ಮಹಿಳೆಯರು ತಮ್ಮ ಇಡೀ ಜೀವನವನ್ನು ಪುರುಷ ಸಂಬಂಧಿಕರ ಆಡಳಿತದಲ್ಲೇ ಕಳೆಯುವಂತೆ ಮಾಡಲು ಬಯಸುತ್ತದೆ ಎಂದು ಅವರು ಆರೋಪಿಸಿದ್ದರು. ಮಹಿಳೆಯರು ಮುನ್ನಡೆಯುವುದನ್ನು ತಡೆಯಲು ಹಿಂಸೆಯನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದ ರಾಹುಲ್, ಶೇಕಡಾ 80 ರಷ್ಟು ಮಹಿಳೆಯರು ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದರು.

ಮಹಿಳಾ ಹಕ್ಕುಗಳ ಕುರಿತು ರಾಹುಲ್ ಗಾಂಧಿ ಮಾಡಿದ ಹೇಳಿಕೆಗಳನ್ನು ರಾಜಕೀಯ ಸವಾಲಾಗಿ ಪರಿವರ್ತಿಸಿದ ಸ್ಮೃತಿ ಇರಾನಿ, ಮಹಿಳಾ ಮೀಸಲಾತಿ ಜಾರಿಯನ್ನು ಬೆಂಬಲಿಸುವಂತೆ ಹಾಗೂ ಕಾಂಗ್ರೆಸ್ ಪಕ್ಷದ ಮೂಲಕ ವಂದೇ ಮಾತರಂ ಸಂಪೂರ್ಣ ಗೀತೆಯನ್ನು ಹಾಡಿಸುವಂತೆ ಅವರಿಗೆ ಆಗ್ರಹಿಸಿದ್ದಾರೆ