ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
- ಕಾನೂನು ಮೀರಿದರೆ ಏಳು ತಲೆಮಾರು ನೆನಪಿಡುವ ಶಿಕ್ಷೆ: ಯುಪಿ ಸಿಎಂ ವಾರ್ನಿಂಗ್
- ಹೇಳಿದ್ದನ್ನು ಮಾಡಿದ್ದೇವೆ, ಮಾಡಿದ್ದನ್ನೇ ಹೇಳುತ್ತೇವೆ: ರಾಮ ಮಂದಿರದ ಬಗ್ಗೆ ಯೋಗಿ ಮಾತು
- "ಅವಕಾಶವಾದಿಗಳಿಗೆ ರಾಮನ ಕೃಪೆಯಿಲ್ಲ; ಯುಪಿಯಲ್ಲಿ ಇನ್ನು ದಂಗೆಕೋರರ ಆಟ ನಡೆಯಲ್ಲ
ಲಖನೌ: ಅಯೋಧ್ಯೆಯಲ್ಲಿ ಬಾಬರಿ ಕಟ್ಟಡವನ್ನು ಮರುನಿರ್ಮಾಣ ಮಾಡುವ ಕನಸು ಕಾಣುತ್ತಿರುವವರು ಭ್ರಮೆಯಲ್ಲಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(CM Yogi) ಅವರು ಮಂಗಳವಾರ (ಫೆ.10) ವಿರೋಧಿಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಪ್ರಳಯದ ದಿನದವರೆಗೂ ಬಾಬರಿ ಕಟ್ಟಡ ಮರುನಿರ್ಮಾಣವಾಗುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ಹೇಳಿದ್ದನ್ನು ಸಾಧಿಸಿ ತೋರಿಸಿದ್ದೇವೆ: ಸಿಎಂ ಯೋಗಿ
ಬಾರಾಬಂಕಿಯ ಶ್ರೀ ರಾಮ್ ಜಾನಕಿ ಮಂದಿರದಲ್ಲಿ ನಡೆದ 10ನೇ ಶ್ರೀ ಹನುಮಾನ್ ವಿರಾಟ್ ಮಹಾಯಾಗ ಮತ್ತು ಶ್ರೀ ರಾಮಾರ್ಚಾ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಯೋಗಿ, ತಮ್ಮ ಸರ್ಕಾರವು ಕೇವಲ ಮಾತುಗಳಿಗೆ ಸೀಮಿತವಾಗಿಲ್ಲ, ಕೃತಿಯಲ್ಲಿ ನಂಬಿಕೆ ಇಟ್ಟಿದೆ ಎಂದು ಯೋಗಿ ಪ್ರತಿಪಾದಿಸಿದ್ದಾರೆ. ನಮ್ಮ ಸರ್ಕಾರ ಏನು ಹೇಳುತ್ತದೋ ಅದನ್ನೇ ಮಾಡುತ್ತದೆ. ರಾಮ ಲಲ್ಲಾ, ನಾವು ಬರುತ್ತೇವೆ, ಮಂದಿರವನ್ನು ಅಲ್ಲಿಯೇ ಕಟ್ಟುತ್ತೇವೆ ಎಂದು ನಾವು ಹೇಳಿದ್ದೆವು. ಇಂದು ಭವ್ಯವಾದ ರಾಮ ಮಂದಿರ ತಲೆ ಎತ್ತಿ ನಿಂತಿದೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಹೆಮ್ಮೆಯಿಂದ ನುಡಿದಿದ್ದಾರೆ.
ಕಯಾಮತ್ ವರೆಗೂ ಕಾಯಬೇಡಿ, ಕಾನೂನು ಗೌರವಿಸಿ
ಬಾಬರಿ ರಚನೆಯ ಮರುನಿರ್ಮಾಣದ ಬಗ್ಗೆ ಮಾತನಾಡಿದ ಸಿಎಂ ಯೋಗಿ, ನಾವು ಇಂದೂ ಹೇಳುತ್ತಿದ್ದೇವೆ, ಕಯಾಮತ್ ಬರುವವರೆಗೂ ಅಂತಹ ಯಾವುದೇ ರಚನೆ ಸಾಧ್ಯವಿಲ್ಲ. ಆ ದಿನ ಕಯಾಮತ್ ಎಂದೂ ಬರುವುದಿಲ್ಲ. ಹಾಗಾಗಿ ಮರುನಿರ್ಮಾಣದ ಪ್ರಶ್ನೆಯೇ ಇಲ್ಲ. ಯಾರು ಕಾನೂನು ಮುರಿಯುತ್ತಾರೋ ಅವರಿಗೆ ಶಿಕ್ಷೆ ಖಚಿತ. ಕಾನೂನು ಮೀರಿದ ಸ್ವರ್ಗದ ಕನಸು ಕಾಣುವವರು ಫ್ಯಾಂಟಸಿ ಲೋಕದಲ್ಲಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಅವಕಾಶವಾದಿಗಳ ಮೇಲೆ ವಾಗ್ದಾಳಿ
ಸಂಕಷ್ಟ ಬಂದಾಗ ಮಾತ್ರ ರಾಮನನ್ನು ನೆನೆಯುವ ಅವಕಾಶವಾದಿಗಳ ವಿರುದ್ಧ ಸಿಎಂ ಯೋಗಿ ಕಿಡಿಕಾರಿದ್ದಾರೆ. ರಾಮ ಭಕ್ತರ ಮೇಲೆ ಹಿಂದೆ ಗುಂಡು ಹಾರಿಸಿದವರಿಗೆ ಅಥವಾ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಪಡಿಸಿದವರಿಗೆ ಇಲ್ಲಿ ಜಾಗವಿಲ್ಲ. ಅಂತಹವರನ್ನು ಸ್ವತಃ ಶ್ರೀರಾಮನೇ ಮರೆತಿದ್ದಾನೆ ಎಂದು ಯೋಗಿ ಪರೋಕ್ಷವಾಗಿ ವಿರೋಧ ಪಕ್ಷಗಳನ್ನು ಕುಟುಕಿದ್ದಾರೆ.
2017ರ ಮೊದಲಿನ ಯುಪಿ ಮತ್ತು ಇಂದಿನ ಬದಲಾವಣೆ
ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತನಾಡಿದ ಯುಪಿ ಸಿಎಂ, 2017ಕ್ಕಿಂತ ಮೊದಲು ಉತ್ತರ ಪ್ರದೇಶದಲ್ಲಿ ದಂಗೆಗಳು ಮತ್ತು ಕರ್ಫ್ಯೂಗಳು ಸರ್ವೇಸಾಮಾನ್ಯವಾಗಿದ್ದವು ಎಂದು ನೆನಪಿಸಿಕೊಂಡರು.
ಹಳೆಯ ಪರಿಸ್ಥಿತಿ: ಹೆಣ್ಣುಮಕ್ಕಳು, ವ್ಯಾಪಾರಿಗಳು ಮತ್ತು ರೈತರು ಅಸುರಕ್ಷಿತರಾಗಿದ್ದರು. ಪ್ರತಿ ಮೂರ್ನಾಲ್ಕು ದಿನಕ್ಕೊಮ್ಮೆ ಕರ್ಫ್ಯೂ ಇರುತ್ತಿತ್ತು.
ಇಂದಿನ ಸ್ಥಿತಿ: ಇಂದು ರಾಜ್ಯದಲ್ಲಿ ಭಯಮುಕ್ತ ವಾತಾವರಣವಿದೆ. ಅಪರಾಧಿಗಳಿಗೆ ಕಾನೂನಿನ ಭಯವಿದೆ. ಕಾನೂನು ಮುರಿಯುವವರು ಏಳು ತಲೆಮಾರುಗಳ ಕಾಲ ನೆನಪಿಟ್ಟುಕೊಳ್ಳುವಂತಹ ಶಿಕ್ಷೆಯನ್ನು ಅನುಭವಿಸಲಿದ್ದಾರೆ ಎಂದು ಯೋಗಿ ಎಚ್ಚರಿಸಿದ್ದಾರೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ಹಾರಾಡುತ್ತಿರುವ ಕೇಸರಿ ಧ್ವಜವು ಭಾರತದ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿದೆ ಎಂದು ಹೇಳುತ್ತಾ, ಸನಾತನ ಪರಂಪರೆಯನ್ನು ಎತ್ತಿ ಹಿಡಿಯುವ ಸಂಕಲ್ಪದೊಂದಿಗೆ ಯುಪಿ ಸಿಎಂ ಭಾಷಣ ಮುಕ್ತಾಯಗೊಳಿಸಿದರು,(ಏಜೆನ್ಸೀಸ್).