ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಮತ್ತು ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮಂಗಳವಾರ(ನ. 10) ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ.
ಸೋನಿಯಾ ಗಾಂಧಿಯವರ ಆತ್ಮಚರಿತ್ರೆ ' ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ' ಬಿಡುಗಡೆಯಾಗಿದ್ದು, ಅದರಲ್ಲಿ ಬಾಬ್ರಿ ಮಸೀದಿ ಧ್ವಂಸದ ಘಟನೆಗೆ ಸಂಬಂಧಿಸಿದಂತೆ ಕಣ್ಣೀರು ಹಾಕಿದ್ದೆ ಎಂದಿರುವ ಅವರ ಮಾತಿಗೆ ವಿಎಚ್‌ಪಿ ಕೇಂದ್ರ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಹಿಂದೂಗಳ ಮೇಲಿನ ಹಿಂಸಾಚಾರ ಮತ್ತು ಭದ್ರತಾ ಸಿಬ್ಬಂದಿಯ ತ್ಯಾಗದ ಬಗ್ಗೆ ಮೌನವಾಗಿರುವ ಸೋನಿಯಾ ಗಾಂಧಿ, ಮುಸ್ಲಿಮರನ್ನು ಒಳಗೊಂಡ ಘಟನೆಗಳ ಬಗ್ಗೆ ಆಯ್ದ ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಾಬ್ರಿ ಕಟ್ಟಡ ಧ್ವಂಸಗೊಂಡಾಗ ಕಣ್ಣೀರು ಸುರಿಸಿದ್ದ ಸೋನಿಯಾ ಗಾಂಧಿ ಅವರು, ಕಾಶ್ಮೀರದಲ್ಲಿ 350ಕ್ಕೂ ಹೆಚ್ಚು ದೇವಾಲಯಗಳನ್ನು ಧ್ವಂಸಗೊಳಿಸಿದಾಗ ಮತ್ತು ಹಿಂದೂಗಳನ್ನು ಹತ್ಯಾಕಾಂಡ ನಡೆಸಿದಾಗ, ಬಸ್ತಾರ್‌ನಲ್ಲಿ ನಕ್ಸಲರು ಕಾಂಗ್ರೆಸ್ ನಾಯಕರನ್ನು ಕೊಂದಾಗ, ಅಥವಾ 1984ರಲ್ಲಿ ದೆಹಲಿಯಲ್ಲಿ ಸಿಖ್ಖರ ಹತ್ಯಾಕಾಂಡ ನಡೆದಾಗ ಅಂತಹದೇ ನೋವನ್ನು ಏಕೆ ವ್ಯಕ್ತಪಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ತಮ್ಮನ್ನು ಜಾತ್ಯತೀತ ಎಂದು ಕರೆದುಕೊಳ್ಳುವ ಪಕ್ಷಗಳು ಹಿಂದೂ ಸಮುದಾಯಕ್ಕೆ ನೋವುಂಟು ಮಾಡುವ ಹೇಳಿಕೆಗಳನ್ನು ನೀಡುವ ಮೂಲಕ ಮುಸ್ಲಿಂ ಮತಗಳನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ. ಹಿಂದೂ ಸಮಾಜ ಮತ್ತು ಭಾರತವನ್ನು ಅವಮಾನಿಸಲು ಅಥವಾ ಅದರ ಆತ್ಮಕ್ಕೆ ನೋವುಂಟು ಮಾಡಲು ಯಾರೇ ಪ್ರಯತ್ನಿಸಿದ್ರೂ, ಭಯೋತ್ಪಾದಕರ ಜೊತೆ ನಿಂತು ದೇಶದ ಭದ್ರತೆಗೆ ಧಕ್ಕೆ ತಂದ್ರೆ ಹಿಂದೂ ಸಮುದಾಯವು ಜಾತ್ಯತೀತ ಮಾಫಿಯಾಕ್ಕೆ ಪಾಠ ಕಲಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ (ಏಜೆನ್ಸೀಸ್).