ಕಂಗನಾ ರಣಾವತ್ ಮತ್ತು ಬಾಬಾ ರಾಮದೇವ್
ನವದೆಹಲಿ: ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಇಬ್ಬರ ನಡುವಿನ ವೈಯಕ್ತಿಕ ವಾಗ್ವಾದಕ್ಕೆ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್(Kangana Ranaut) ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು, ರಕ್ಷಾ ಬಂಧನದ ಹಬ್ಬವಾದ ಇಂದು(ಆ. 28) ಪೂರ್ಣ ವಿರಾಮ ಹಾಕಿದ್ದು, ಇಬ್ಬರು ಒಪ್ಪಂದಕ್ಕೆ ಬಂದಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಬಾಬಾ ರಾಮದೇವ್, ಇತ್ತೀಚೆಗೆ ಸಹೋದರಿ ಕಂಗನಾ ಅವರೊಂದಿಗೆ ವಿವಾದವೊಂದು ಪ್ರಾರಂಭವಾಯಿತು. ಈ ವಿವಾದವು ಚರ್ಚೆಯ ಮೂಲಕ ಕೊನೆಗೊಳ್ಳಬೇಕು. ಹಬ್ಬದ ಸಂದರ್ಭದಲ್ಲಿ ಸಹೋದರಿ ಕಂಗನಾ ರನೌತ್ ಅವರಿಗೆ ನಾನು ಈ ಸಿಹಿತಿಂಡಿಗಳು ಮತ್ತು ಉಡುಗೊರೆಗಳನ್ನು ಕಳುಹಿಸುತ್ತಿದ್ದೇನೆ. ನಮ್ಮ ದೇಶದಲ್ಲಿ ದ್ವೇಷಕ್ಕೆ ಸ್ಥಾನವಿರಬಾರದು ಆದ್ದರಿಂದ ರಕ್ಷಾ ಬಂಧನದ ಸಂದರ್ಭದಲ್ಲಿ ನನ್ನ ಸಹೋದರಿಗೆ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಕಂಗನಾ ರಣಾವತ್ ಪ್ರತಿಕ್ರಿಯೆ
ಬಾಬಾ ರಾಮದೇವ್ ಅವರ ಮಾತುಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದೆ ಮತ್ತು ನಟಿ ಕಂಗನಾ ರಣಾವತ್, ಹಬ್ಬಗಳು ತಪ್ಪುಗಳನ್ನು ಮರೆಯಲು ಮತ್ತು ಕ್ಷಮಿಸಲು ಒಳ್ಳೆಯ ಸಂದರ್ಭ. ಸಹೋದರ ರಾಮದೇವ್ ಜೀ ಚರ್ಚೆಗಳನ್ನು ಹೊರತುಪಡಿಸಿ ವಿವಾದಗಳಿಗೆ ಅವಕಾಶವಿಲ್ಲ ಎಂದು ಚೆನ್ನಾಗಿ ಹೇಳಿದ್ದಾರೆ. ಈ ರಕ್ಷಾ ಬಂಧನ ದಿನದಂದು ಸಹೋದರ ಪ್ರೀತಿಯಿಂದ ಸಿಹಿತಿಂಡಿಗಳನ್ನು ಕಳುಹಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ಹೇಳಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆ ಬಳಿಕ ಕಂಗನಾ ರನೌತ್ ಜೆನ್ ಜಿ ಸಮುದಾಯವನ್ನು ಟೀಕಿಸಿದ ಬಳಿಕ ವಿವಾದ ಆರಂಭವಾಗಿತ್ತು. ಜೆನ್ ಜಿಯನ್ನು ಟೀಕಿಸಿದ್ದನ್ನು ರಾಮದೇವ್ ಬಾಬಾ ತೀವ್ರವಾಗಿ ವಿರೋಧಿಸಿದ್ದರು. ಬಳಿಕ ಇಬ್ಬರ ನಡುವೆ ವೈಯಕ್ತಿಕ ಮಟ್ಟದ ಟೀಕೆವರೆಗೂ ತೆರಳಿತ್ತು (ಏಜೆನ್ಸೀಸ್).