ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಕ್ರಿಕೆಟಿಗ ಎಂ.ಡಿ.ಅಜರುದ್ದೀನ್ ಅವರ ಸಚಿವ ಸ್ಥಾನ ಅಬಾಧಿತವಾಗಿದ್ದು, ಕೊನೆಗೂ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರು ಅವರನ್ನೂ ಎಂಎಲ್‌ಸಿಗಳಾಗಿ ನಾಮನಿರ್ದೇಶನ ಮಾಡಿದ್ದಾರೆ.
ಶನಿವಾರ(ಏ. 25) ಟಿಜೆಎಸ್ ಅಧ್ಯಕ್ಷ ಪ್ರೊ. ಎಂ. ಕೋದಂಡರಾಮ್ ಮತ್ತು ಮೊಹಮ್ಮದ್ ಅಜರುದ್ದೀನ್ ಅವರನ್ನು ರಾಜ್ಯಪಾಲರ ಕೋಟಾದಡಿಯಲ್ಲಿ ಎಂಎಲ್‌ಸಿಗಳಾಗಿ ನಾಮನಿರ್ದೇಶನ ಮಾಡಲು ಅನುಮೋದನೆ ನೀಡಿದ್ದಾರೆ.
2025 ಅಕ್ಟೋಬರ್ 31ರಂದು ಅಜರುದ್ದೀನ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಧಿಕಾರ ವಹಿಸಿಕೊಂಡ ಬಳಿಕ ನಿಗದಿತ 6 ತಿಂಗಳೊಳಗೆ ಯಾವುದೇ ವಿಧಾನಸಭೆ ಅಥವಾ ವಿಧಾನ ಪರಿಷತ್ನ ಸದಸ್ಯರಾಗಿ ಆಯ್ಕೆಯಾಗಬೇಕಿತ್ತು. ಆದರೆ ಈವರೆಗೆ ಅವರು ಯಾವುದೇ ಸದನದ ಸದಸ್ಯರಾಗಿ ಆಯ್ಕೆಯಾಗಿಲ್ಲ ಮತ್ತು ನಾಮನಿರ್ದೇಶನಗೊಂಡಿದ್ದಿಲ್ಲ.
ಕಳೆದ ವಾರ ರಾಜ್ಯಪಾಲರನ್ನು ಭೇಟಿಯಾಗಿದ್ದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಮತ್ತು ಶಾಸಕಾಂಗ ವ್ಯವಹಾರಗಳ ಸಚಿವ ಡಿ ಶ್ರೀಧರ್ ಬಾಬು, ರಾಜ್ಯಪಾಲರ ಕೋಟಾದಡಿಯಲ್ಲಿ ಎಂಎಲ್‌ಸಿಗಳಾಗಿ ಮೊಹಮ್ಮದ್ ಅಜರುದ್ದೀನ್ ಮತ್ತು ಪ್ರೊಫೆಸರ್ ಎಂ ಕೋದಂಡರಾಮ್ ಅವರ ನಾಮನಿರ್ದೇಶನವನ್ನು ಪರಿಗಣಿಸುವಂತೆ ಒತ್ತಾಯಿಸಿದರು. ಈ ಹಿನ್ನೆಲೆ ಇಂದು ಪರಿಷತ್ ಶಾಸಕರಾಗಿ ನೇಮಕವಾಗಿದ್ದಾರೆ (ಏಜೆನ್ಸೀಸ್).