Worship in Train: ಚಲಿಸುತ್ತಿರುವ ಎಸಿ ರೈಲಿನ ಬೋಗಿಯೊಳಗೆ ಅಯ್ಯಪ್ಪ ಮಾಲಾಧಾರಿಯೊಬ್ಬರು ದೀಪ ಹಚ್ಚಿ ಪೂಜೆ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೈಲಿನೊಳಗೆ ಈ ರೀತಿ ದೀಪ ಬೆಳಗಿಸಿರುವುದು ಪ್ರಯಾಣಿಕರ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದ್ದು, ಘಟನೆಗೆ ರೈಲ್ವೆ ಇಲಾಖೆಯೂ ಪ್ರತಿಕ್ರಿಯಿಸಿದೆ.
ವೈರಲ್ ವಿಡಿಯೋದಲ್ಲಿ ಪ್ರಯಾಣಿಕರೊಬ್ಬರು ಎಸಿ ಕೋಚ್ನ ಒಳಗೆ ದೀಪ ಹಚ್ಚಿ, ಶಂಖ ಊದುತ್ತಾ ಪೂಜೆ ಮಾಡುತ್ತಿರುವುದು ಕಂಡುಬಂದಿದೆ. ರೈಲಿನ ಒಳಗೆ ದೀಪ ಹಚ್ಚಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟುಮಾಡಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತೀಯ ರೈಲ್ವೆ ಇಲಾಖೆ ಈ ಘಟನೆ ಬಗ್ಗೆ ಮಾಹಿತಿ ಕೇಳಿದೆ. ಯಾವ ರೈಲಿನಲ್ಲಿ ಘಟನೆ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ ಪ್ರಯಾಣದ ದಿನಾಂಕ, ರೈಲು ಸಂಖ್ಯೆ ಹಾಗೂ ಪಿಎನ್ಆರ್ ವಿವರಗಳನ್ನು ಹಂಚಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.
ರೈಲಿನೊಳಗೆ ಬೆಂಕಿ ಹಚ್ಚುವುದು ಮತ್ತು ದಹ್ಯ ವಸ್ತುಗಳನ್ನು ಬಳಸುವುದು ಅಪಾಯಕಾರಿ. ಇದರಿಂದ ಹೊಗೆ ಆವರಿಸುವುದು, ಬೆಂಕಿ ಅವಘಡ ಸಂಭವಿಸುವುದು ಸೇರಿದಂತೆ ಹಲವು ಅಪಾಯಗಳಿವೆ. ಮುಚ್ಚಿದ ಎಸಿ ಬೋಗಿಯಲ್ಲಿ ಇಂತಹ ಘಟನೆಗಳು ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರಬಹುದು.
ವಿಡಿಯೋ ನೋಡಿದ ನೆಟ್ಟಿಗರು, ಪೂಜೆ ಮಾಡಲು ಮನೆ ಅಥವಾ ದೇವಸ್ಥಾನಗಳಿವೆ. ಸಾರ್ವಜನಿಕ ಸಾರಿಗೆಯಲ್ಲಿ ಈ ರೀತಿ ದೀಪ ಹಚ್ಚುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನಂಬಿಕೆ ಮತ್ತು ಭಕ್ತಿ ವೈಯಕ್ತಿಕ ವಿಚಾರವಾದರೂ, ಸಾರ್ವಜನಿಕ ಸ್ಥಳಗಳಲ್ಲಿ ಇತರ ಪ್ರಯಾಣಿಕರ ಸುರಕ್ಷತೆ ಹಾಗೂ ನೆಮ್ಮದಿಗೆ ಆದ್ಯತೆ ನೀಡಬೇಕು. ಶಂಖ ಊದುವುದರಿಂದ ಸಹಪ್ರಯಾಣಿಕರಿಗೆ ತೊಂದರೆಯಾಗಬಹುದು ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ನೆಲಕ್ಕೆ ಬಿದ್ದ ಊಟ ತಿಂದ ಜನ! ಅನಂತ್ ಸಿಂಗ್ ಪುತ್ರಿ ಮದುವೆಯಲ್ಲಿ ನೂಕುನುಗ್ಗಲು | Viral Wedding
ರೈಲಿನಲ್ಲಿ ಇಂತಹ ಘಟನೆ ಕಂಡುಬಂದರೆ ಪ್ರಯಾಣಿಕರು RailMadad ಪೋರ್ಟಲ್ ಮೂಲಕ ದೂರು ನೀಡಬಹುದು ಅಥವಾ ರೈಲ್ವೆ ಸಹಾಯವಾಣಿ 139ಕ್ಕೆ ಕರೆ ಮಾಡಬಹುದು. ರೈಲಿನಲ್ಲಿ ಬೆಂಕಿ ಅವಘಡಕ್ಕೆ ಕಾರಣವಾಗುವ ಯಾವುದೇ ಚಟುವಟಿಕೆ ಮಾಡದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗಿದೆ.