Auto rickshaw Driver ಸಾಂದರ್ಭಿಕ ಚಿತ್ರ
Auto rickshaw Driver: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವೀಡಿಯೊಗಳು ಹರಿದಾಡುತ್ತವೆ. ಆದರೆ ಕೆಲವು ವೀಡಿಯೊಗಳು ನಮ್ಮ ಕಣ್ಣಂಚಿನಲ್ಲಿ ನೀರು ತರಿಸುವುದಲ್ಲದೆ, ಜಗತ್ತಿನಲ್ಲಿ ಇನ್ನೂ ಮನುಷ್ಯತ್ವ ಜೀವಂತವಾಗಿದೆ ಎಂಬ ಭರವಸೆಯನ್ನು ಮೂಡಿಸುತ್ತವೆ. ಅಂತಹದ್ದೇ ಒಂದು ಹೃದಯಸ್ಪರ್ಶಿ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಕೇವಲ 50 ರೂಪಾಯಿಯ ಹೆಚ್ಚುವರಿ ಹಣವನ್ನು ಬಳಸಿಕೊಂಡು ಒಬ್ಬ ಸಾಮಾನ್ಯ ಆಟೋ ಚಾಲಕ ತೋರಿದ ಔದಾರ್ಯ ಮತ್ತು ಮಾನವೀಯತೆ ಕೋಟ್ಯಂತರ ಜನರ ಹೃದಯ ಗೆದ್ದಿದೆ.
ಘಟನೆಯ ಹಿನ್ನೆಲೆ
ವೈರಲ್ ಆಗಿರುವ ವೀಡಿಯೊದಲ್ಲಿರುವ ಆಟೋ ರಿಕ್ಷಾ ಚಾಲಕನ ಹೆಸರು ರಾಜೇಂದ್ರ ಟೆಮ್ರೆ. ಅವರು ದಿನದಂತೆಯೇ ತಮ್ಮ ಆಟೋದಲ್ಲಿ ಪ್ರಯಾಣಿಕರೊಬ್ಬರನ್ನು ಕರೆದೊಯ್ಯುತ್ತಿದ್ದರು. ಪ್ರಯಾಣ ಮುಗಿದ ನಂತರ ಅದರ ಬೆಲೆ 50 ರೂ. ಆಗಿತ್ತು. ಆದರೆ, ಪ್ರಯಾಣಿಕ 100 ರೂ ಪಾವತಿಸಿ ಉಳಿದ 50 ರೂ ನಿಮ್ಮ ಬಳಿಯೇ ಇರಲಿ ಎಂದು ಆಟೋ ಇಳಿದು ಹೋದರು.
ಆದಾಗ್ಯೂ, ಚಾಲಕ ಆ ಹಣವನ್ನು ತನ್ನ ಬಳಿ ಇಟ್ಟುಕೊಳ್ಳುವ ಬದಲಿಗೆ ಅದರಿಂದ ದಯೆ ತೋರಲು ನಿರ್ಧರಿಸಿದರು. ಅದೇ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದಾಗ, ಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವೃದ್ಧ ಮಹಿಳೆಯನ್ನು ಗಮನಿಸಿದರು. ನಂತರ ಅವರನ್ನು ತಮ್ಮ ಆಟೋದಲ್ಲಿ ಕೂರಿಸಿಕೊಂಡು ಅವರು ಹೋಗಬೇಕಾದ ಸ್ಥಳಕ್ಕೆ ಉಚಿತವಾಗಿ ತಲುಪಿಸಿ 10 ರೂಪಾಯಿಯನ್ನು ಕೊಟ್ಟು ಕಳುಹಿಸಿದರು.
ಮುಂದೆ ಸಾಗುತ್ತಿದ್ದಂತೆಯೇ ಮತ್ತೊಬ್ಬ ವ್ಯಕ್ತಿಯನ್ನು ಗಮನಿಸಿದ ಚಾಲಕ ತನ್ನ ನೀರಿನ ಬಾಟಲಿಯನ್ನು ಅವರಿಗೆ ನೀಡಿ 10 ರೂಪಾಯಿಯನ್ನು ನೀಡಿ ಮಾನವೀಯತೆ ಮೆರೆದರು. ನಂತರ ಅವರು ವಿಡಿಯೋದಲ್ಲಿ ಮಾತನಾಡುತ್ತಾ, ನಾನು 20 ರೂ. ಈಗಾಗಲೇ ನೀಡಿದ್ದೇನೆ. ಇನ್ನೂ 30 ರೂ. ಉಳಿದಿದೆ ಯಾರಿಗಾದರೂ ಕೊಡಬಹುದೇ ಎಂದು ನೋಡೋಣ ಎಂದರು.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಭಾರೀ ಸಂಚಲನ ಪಡೆಯಿತು. ನೆಟ್ಟಿಗರು ರಾಜೇಂದ್ರ ಅವರ ಮಾನವೀಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಕೆಲವು ಬಳಕೆದಾರರು ನಮಗೆ ಸಿಕ್ಕ ಸೌಭಾಗ್ಯ ಅಥವಾ ಸಹಾಯವನ್ನು ಮತ್ತೊಬ್ಬರಿಗೆ ಹೇಗೆ ಹಂಚಬೇಕು ಎಂಬುದಕ್ಕೆ ಇದೇ ಅತ್ಯುತ್ತಮ ಉದಾಹರಣೆ ಎಂದು ಕಾಮೆಂಟ್ ಮಾಡಿದ್ದಾರೆ. ಕ್ಯಾಮೆರಾದ ಮುಂದೆ ನೀವು ಮಾಡಿದ ಈ ಒಳ್ಳೆಯ ಕೆಲಸ ನಿಜಕ್ಕೂ ಅದ್ಭುತ. ಕ್ಯಾಮೆರಾ ಇಲ್ಲದ ಸಮಯದಲ್ಲೂ ನೀವು ಇದೇ ರೀತಿ ಸಮಾಜಸೇವೆಯನ್ನು ಮುಂದುವರಿಸುತ್ತೀರಿ ಎಂದು ನಂಬಿದ್ದೇನೆ" ಎಂದು ಮತ್ತೊಂದು ಬಳಕೆದಾರರು ಬರೆದಿದ್ದಾರೆ (ಏಜೆನ್ಸೀಸ್).