- ಕೇಂದ್ರ ಬಜೆಟ್ 2026ರ ಮೇಲೆ ದೇಶದ ಜನತೆಯ ಕಣ್ಣು
- ಟಾಟಾ ಮೋಟಾರ್ಸ್ ಆರಂಭಿಕ ಹಂತದ ವಿದ್ಯುತ್ ವಾಹನಗಳಿಗೆ ವಿಶೇಷ ಪ್ರೋತ್ಸಾಹಧನಕ್ಕೆ ಮನವಿ ಸಲ್ಲಿಸಿದೆ
- ಆಮದು ಮಾಡಿಕೊಂಡ ಲಕ್ಸುರಿ ಕಾರುಗಳ ಮೇಲಿನ ಕಸ್ಟಮ್ಸ್ ಸುಂಕ ಕಡಿತಗೊಳಿಸಲು ಮರ್ಸಿಡಿಸ್-ಬೆನ್ಜ್ ಇಂಡಿಯಾ ಒತ್ತಾಯ
ನವದೆಹಲಿ: ಕೇಂದ್ರ ಬಜೆಟ್ 2026ಕ್ಕೆ ಈಗಾಗಲೇ ದಿನಗಣನೆ ಆರಂಭಗೊಂಡಿದೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ, ಐಟಿ ಉದ್ಯಮ, ಇವಿ ಸಂಸ್ಥೆಗಳು ಸೇರಿದಂತೆ ಹಲವು ಸೆಕ್ಟರ್ಗೆ ಎಷ್ಟು ಹಾಗೂ ಏನೆಲ್ಲ ಸಿಗಲಿವೆ ಎಂಬ ಕುತೂಹಲ ದೇಶದ ಜನರಲ್ಲಿ ಕಾಡತೊಡಗಿದೆ. ರಾಷ್ಟ್ರದ ಯಾವೆಲ್ಲ ರಾಜ್ಯಗಳಿಗೆ ಮತ್ತು ವಲಯಗಳಿಗೆ ಬಂಪರ್ ಕೊಡುಗೆಗಳು ಲಭಿಸಲಿವೆ ಹಾಗೂ ಮದ್ಯಮ ವರ್ಗದವರು, ವೇತನ ತೆರಿಗೆದಾರರ ಆಸೆಗೆ ತಕ್ಕಂತೆ ಬಜೆಟ್ ಮಂಡನೆ ಆಗಲಿದೆಯೇ ಎಂಬ ನಿರೀಕ್ಷೆಗಳು ಸದ್ಯ ದುಪ್ಪಟ್ಟಾಗಿವೆ.
ಆಟೋಮೊಬೈಲ್ ಉದ್ಯಮದಿಂದ ಒಂದಷ್ಟು ಬೇಡಿಕೆಗಳು
ಯೂನಿಯನ್ ಬಜೆಟ್ ಮೇಲೆ ಭಾರೀ ನಿರೀಕ್ಷೆ ಹೊಂದಿರುವ ಆಟೋಮೊಬೈಲ್ ಉದ್ಯಮವು, ಕೇಂದ್ರ ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿವೆ ಎಂದು ವರದಿಯಾಗಿದೆ. ಉದ್ಯಮವು ಆರಂಭಿಕ ಹಂತದ ಇವಿ ವಾಹನಗಳಿಗೆ (ವಿದ್ಯುತ್ ಚಾಲಿತ) ವಿಶೇಷ ಪ್ರೋತ್ಸಾಹ ಧನ ಮತ್ತು ಆಮದು ಮಾಡಿಕೊಂಡ ಕಾರುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಪರಿಷ್ಕರಿಸುವಂತೆ ಕೇಳಿಕೊಂಡಿದೆ. ಇದು ಬೇಡಿಕೆಯನ್ನು ಹೆಚ್ಚಿಸುವುದಲ್ಲದೆ, ಭಾರತವು ಇವಿ ಲೋಕಕ್ಕೆ ವೇಗವಾಗಿ ಸಾಗಲು ದೊಡ್ಡ ಮಟ್ಟದ ಕೊಡುಗೆಯಾಗಲಿದೆ ಎಂದು ಕಂಪನಿಗಳು ಅಭಿಪ್ರಾಯಪಟ್ಟಿವೆ.
ಈ ಮಧ್ಯೆ, ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶೈಲೇಶ್ ಚಂದ್ರ ಮಾತನಾಡಿ, "2026-27ರ ಬಜೆಟ್‌ನಲ್ಲಿ ಆರಂಭಿಕ ಹಂತದ ವಿದ್ಯುತ್ ವಾಹನಗಳಿಗೆ ವಿಶೇಷ ಪ್ರೋತ್ಸಾಹ ಧನ (ಇನ್ಸೆಂಟೀವ್) ಮತ್ತು 'ಪಿಎಂ ಇ-ಡ್ರೈವ್' ಯೋಜನೆಯಡಿಯಲ್ಲಿ ವಾಣಿಜ್ಯ ವಿದ್ಯುತ್ ಕಾರುಗಳಿಗೆ ಬೆಂಬಲವನ್ನು ನೀಡುವಂತೆ ಸರ್ಕಾರ ಕೋರಿದೆ ಎಂದು ಹೇಳಿದರು. ಸರ್ಕಾರದ ಜಿಎಸ್‌ಟಿ ಸುಧಾರಣೆಗಳು, ರೆಪೊ ದರ ಕಡಿತ ಮತ್ತು ತೆರಿಗೆ ನೀತಿಗಳಲ್ಲಿನ ಬದಲಾವಣೆಗಳು ಪ್ರಯಾಣಿಕ ವಾಹನ ವಲಯದಲ್ಲಿ ಬೇಡಿಕೆಯನ್ನು ಪುನರುಜ್ಜೀವನಗೊಳಿಸಿವೆ. ಆದರೆ, ಆರಂಭಿಕ ಹಂತದ ವಿದ್ಯುತ್ ವಾಹನಗಳ ಮಾರಾಟವು ಇನ್ನೂ ಒತ್ತಡದಲ್ಲಿದೆ" ಎಂದಿದ್ದಾರೆ.
ಇವಿ ವಾಹನಗಳಿಗೆ ಪ್ರೋತ್ಸಾಹ ಧನ ಅಗತ್ಯ
ಜಿಎಸ್‌ಟಿ ಸುಧಾರಣೆಗಳಿಂದಾಗಿ ಪೆಟ್ರೋಲ್ ಕಾರುಗಳ ಬೆಲೆಯಲ್ಲಿ ಇಳಿಕೆಯಾಗಿರುವುದರಿಂದ, ಕಡಿಮೆ ಬೆಲೆಯ ಎಲೆಕ್ಟ್ರಿಕ್ ವಾಹನಗಳಿಗೆ ಪೈಪೋಟಿ ಹೆಚ್ಚಾಗಿದೆ ಎಂದು ಶೈಲೇಶ್ ಚಂದ್ರ ಅಭಿಪ್ರಾಯಿಸಿದ್ದಾರೆ. "ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ನಾವು ಪ್ರಶಂಸಿಸುತ್ತೇವೆ. ಆದರೆ, ಈ ಬಾರಿಯ ಬಜೆಟ್‌ನಲ್ಲಿ ಎರಡು ಪ್ರಮುಖ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಮೊದಲನೆಯದು ಆರಂಭಿಕ ಹಂತದ ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಪ್ರೋತ್ಸಾಹ ನೀಡುವುದು ಮತ್ತು ಎರಡನೆಯದು ವಾಣಿಜ್ಯ ಎಲೆಕ್ಟ್ರಿಕ್ ವಾಹನಗಳಿಗೆ ಬೆಂಬಲ ಬೆಲೆಗಳನ್ನು ಒದಗಿಸುವುದು" ಎಂದು ತಿಳಿಸಿದ್ದಾರೆ.
ಕಸ್ಟಮ್ಸ್ ಸುಂಕ ಪರಿಷ್ಕರಣೆ
ಇನ್ನು ಮರ್ಸಿಡಿಸ್-ಬೆನ್ಜ್ ಇಂಡಿಯಾ ಸರ್ಕಾರಕ್ಕೆ ಪ್ರಮುಖ ಸಲಹೆಗಳನ್ನೇ ಹಂಚಿಕೊಂಡಿದೆ. ಆಮದು ಮಾಡಿಕೊಂಡ ಲಕ್ಸುರಿ ಕಾರುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಪರಿಷ್ಕರಿಸುವ ಅವಶ್ಯಕತೆಯಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂತೋಷ್ ಅಯ್ಯರ್ ಹೇಳಿದ್ದಾರೆ. ಹೀಗೆ ಮಾಡುವುದರಿಂದ ಪ್ರೀಮಿಯಂ ವಿಭಾಗದಲ್ಲಿ ಬೇಡಿಕೆ ದ್ವಿಗುಣಗೊಳ್ಳುತ್ತದೆ ಮತ್ತು ತೆರಿಗೆಗಳ ರೂಪದಲ್ಲಿ ಸರ್ಕಾರದ ಆದಾಯವೂ ಹೆಚ್ಚಾಗುತ್ತದೆ ಎಂದಿದ್ದಾರೆ.
ಪ್ರಸ್ತುತ, 40,000 ಡಾಲರ್ಗಿಂತಲೂ ಕಡಿಮೆ ಬೆಲೆಯ ಆಮದು ಮಾಡಿಕೊಂಡ ಕಾರುಗಳ ಮೇಲೆ ಶೇ.70ರಷ್ಟು ಮೂಲ ಕಸ್ಟಮ್ಸ್ ಸುಂಕವಿದೆ. ಆದರೆ, 40 ಸಾವಿರ ಡಾಲರ್ಗಿಂತ ಹೆಚ್ಚಿನ ಬೆಲೆಯ ಕಾರುಗಳ ಮೇಲೆ ಶೇ.110ರಷ್ಟು ಕಸ್ಟಮ್ಸ್ ಸುಂಕ ವಿಧಿಸಲಾಗುತ್ತಿದೆ ಎಂಬುದನ್ನು ನೆನಪಿಸಿದರು. ಈ ಎರಡು ಸ್ಲ್ಯಾಬ್‌ಗಳನ್ನು ತೆಗೆದುಹಾಕಿ, ಒಂದೇ ಸ್ಲ್ಯಾಬ್ ಅಡಿಯಲ್ಲಿ ತರುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಪ್ರಮುಖ ಬೇಡಿಕೆಗಳು ಈಡೇರಲಿದ್ಯಾ?
ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಕಂಪನಿಗಳು ಬೆಲೆಗಳನ್ನು ಏರಿಸುವ ಅನಿವಾರ್ಯತೆ ಎದುರಾಗಿದೆ. ಇದು ಬೇಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಒಟ್ಟಾರೆಯಾಗಿ, 2026ರ ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ಆರಂಭಿಕ ಮಟ್ಟದ ವಿದ್ಯುತ್ ವಾಹನಗಳಿಗೆ ವಿಶೇಷ ಪ್ರೋತ್ಸಾಹ, ವಾಣಿಜ್ಯ ವಿದ್ಯುತ್ ವಾಹನಗಳಿಗೆ ಬೆಂಬಲ ಬೆಲೆ ಮತ್ತು ಆಮದು ಮಾಡಿಕೊಂಡ ಕಾರುಗಳ ಮೇಲಿನ ಕಸ್ಟಮ್ಸ್ ಸುಂಕದ ಪರಿಷ್ಕರಣೆಯಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರೆ, ಆಟೋಮೊಬೈಲ್ ವಲಯವು ಹೊಸ ಉತ್ತೇಜನವನ್ನು ಪಡೆಯುತ್ತದೆ ಎಂದು ಉದ್ಯಮವು ಆಶಿಸಿದೆ,(ಏಜೆನ್ಸೀಸ್).