2ನೇ ಪ್ರಯತ್ನದಲ್ಲಿ ಬದಲಾಯ್ತು ಭವಿಷ್ಯ! 627 ಅಂಕ ಗಳಿಸಿ ಎಂ‌ಬಿಬಿಎಸ್ ಸೀಟು ಪಡೆದ ಆಟೋ ಚಾಲಕನ ಪುತ್ರನ ಯಶಸ್ಸಿದು 
ದೇಶ

2ನೇ ಪ್ರಯತ್ನದಲ್ಲಿ ಬದಲಾಯ್ತು ಭವಿಷ್ಯ! 627 ಅಂಕ ಗಳಿಸಿ MBBS ಸೀಟು ಪಡೆದ ಆಟೋ ಚಾಲಕನ ಪುತ್ರನ ಯಶಸ್ಸಿದು | Success Story

ಈ ವರ್ಷದ ನೀಟ್ ಯುಜಿ 2026ರ (NEET UG 2026) ಪರೀಕ್ಷೆಯ ದ್ವಿತೀಯ ಪ್ರಯತ್ನದಲ್ಲಿ 697 ಅಂಕಗಳನ್ನು ಪಡೆದು, 3864ನೇ ಆಲ್ ಇಂಡಿಯಾ ಶ್ರೇಣಿ ಗಳಿಸಿರುವ ಪ್ರಭಾತ್ ಕುಮಾರ್​ ಯಾದವ್​, ಉತ್ತರ ಪ್ರದೇಶದ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎಂ‌ಬಿಬಿಎಸ್ (MBBS) ಸೀಟು ಪಡೆದಿದ್ದಾರೆ,

ಲಖನೌ: ದೃಢ ಸಂಕಲ್ಪ, ಕಠಿಣ ಹಾಗೂ ನಿರಂತರ ಶ್ರಮವಿದ್ದರೆ ಎಷ್ಟೇ ಬಡತನವಿದ್ದರೂ ಅದನ್ನು ಮೆಟ್ಟಿ ನಿಂತು ಸಾಧಿಸಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಜಾನ್‌ಪುರ ಜಿಲ್ಲೆಯ ದೇವಕೀಪುರ ಗ್ರಾಮದ ಓರ್ವ ಸಾಮಾನ್ಯ ಆಟೋ ಚಾಲಕನ ಪುತ್ರನೇ ಜ್ವಲಂತ ಸಾಕ್ಷಿ. ಈ ವರ್ಷದ ನೀಟ್ ಯುಜಿ 2026ರ (NEET UG 2026) ಪರೀಕ್ಷೆಯ ದ್ವಿತೀಯ ಪ್ರಯತ್ನದಲ್ಲಿ 697 ಅಂಕಗಳನ್ನು ಪಡೆದು, 3864ನೇ ಆಲ್ ಇಂಡಿಯಾ ಶ್ರೇಣಿ ಗಳಿಸಿರುವ ಪ್ರಭಾತ್ ಕುಮಾರ್​ ಯಾದವ್​, ಉತ್ತರ ಪ್ರದೇಶದ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎಂ‌ಬಿಬಿಎಸ್ (MBBS) ಸೀಟು ಪಡೆದಿದ್ದಾರೆ,

2ನೇ ಪ್ರಯತ್ನದಲ್ಲಿ ಬದಲಾಯ್ತು ಭವಿಷ್ಯ

ಪ್ರಭಾತ್ ಅವರ ಮೊದಲ ನೀಟ್ ಪ್ರಯತ್ನದಲ್ಲಿ ಬಂದಿದ್ದು 504 ಅಂಕಗಳು. ಆದರೆ, ಅಲ್ಲಿಗೆ ಧೃತಿಗೆಡದೆ ತಮ್ಮ ಕನಸನ್ನು ಅರ್ಧಕ್ಕೆ ಬಿಡದ ಅವರು, ಮತ್ತೊಂದು ವರ್ಷ ಪೂರ್ಣ ಪ್ರಮಾಣದ ತಯಾರಿ ನಡೆಸಲು ನಿರ್ಧರಿಸಿದರು. ಮನೆಯಲ್ಲಿ ಕಡುಬಡತನವಿದ್ದು, ಮೆಡಿಕಲ್​ ಓದಿಸುವಷ್ಟು ಶಕ್ತಿ ತಂದೆಗೆ ಇಲ್ಲವೆಂಬುದನ್ನು ಅರಿತಿದ್ದರೂ ಸತತ ಪರಿಶ್ರಮದ ಫಲವಾಗಿ ತಮ್ಮ ಅಂಕವನ್ನು 697ಕ್ಕೆ ಕೊಂಡೊಯ್ಯುವ ಮೂಲಕ ಇದೀಗ ಸಾಧನೆಯ ಮೆಟ್ಟಿಲೇರಿ, ಹೆತ್ತವರ ಆನಂದದ ಕಣ್ಣೀರಿಗೆ ಕಾರಣರಾಗಿದ್ದಾರೆ. ಪ್ರಭಾತ್ 10ನೇ ತರಗತಿಯಲ್ಲಿ ಶೇ.89.44 ಮತ್ತು ಪಿಯುಸಿಯಲ್ಲಿ ಶೇ.83.44 ಅಂಕಗಳನ್ನು ಗಳಿಸುವ ಮೂಲಕ ಮೊದಲಿನಿಂದಲೂ ಶೈಕ್ಷಣಿಕ ಪಯಣದಲ್ಲಿ ಉತ್ತಮ ಸಾಧನೆ ಮಾಡಿಕೊಂಡು ಬಂದಿದ್ದಾರೆ.

ಮಾವನಿಂದ ಹಣ ಸಹಾಯ

ಗ್ರಾಮದಲ್ಲಿ ನೀಟ್ ಪರೀಕ್ಷೆಗೆ ಪ್ರಾಥಮಿಕ ಸಿದ್ಧತೆ ನಡೆಸಿದ್ದ ಪ್ರಭಾತ್, ನಂತರ ರಾಜಸ್ಥಾನದ ಕೋಟಾಗೆ ತೆರಳಿ ಅಲೆನ್ (ALLEN) ತರಬೇತಿ ಸಂಸ್ಥೆಗೆ ಸೇರಿಕೊಂಡರು. ಸಂಸ್ಥೆಯು ಅವರ ಪ್ರತಿಭೆಯನ್ನು ಗುರುತಿಸಿ ಶೇ.50ರಷ್ಟು ಶುಲ್ಕ ರಿಯಾಯಿತಿ ನೀಡಿದರೂ ಶಿಕ್ಷಣದ ಬಾಕಿ ಫೀಜ್​ ಮೊತ್ತವನ್ನು ಹೊಂದಿಸುವುದು ಕುಟುಂಬಕ್ಕೆ ದೊಡ್ಡ ಸವಾಲಾಗಿತ್ತು. ಈ ಕಷ್ಟದ ಸಮಯದಲ್ಲಿ ಪ್ರಭಾತ್ ಅವರ ತಾಯಿಯ ಅಣ್ಣ ದಯಾರಾಮ್ ಯಾದವ್ ಅವರು ಧನಸಹಾಯ ನೀಡಿ, ಪ್ರಭಾತ್​ ವೈದ್ಯನಾಗುವ ಕನಸಿಗೆ ಭದ್ರ ಬುನಾದಿ ಹಾಕಿದ್ದು ವಿಶೇಷ.

ತಂದೆಯ 20 ವರ್ಷಗಳ ಕಷ್ಟದ ಬದುಕು

ಪ್ರಭಾತ್ ಅವರ ತಂದೆ ಮಹೇಂದ್ರ ಕುಮಾರ್ ಯಾದವ್ ಕಳೆದ 20 ವರ್ಷಗಳಿಂದ ಮುಂಬೈನಲ್ಲಿ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬೈನ ಸಣ್ಣ ಚಾಲ್‌ನಲ್ಲಿ ವಾಸವಿರುವ ಅವರು, ತಾವು ದುಡಿದ ಸಂಪೂರ್ಣ ಹಣವನ್ನೆಲ್ಲ ಹಳ್ಳಿಯಲ್ಲಿದ್ದ ಪತ್ನಿ, ತಂದೆ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಕಳುಹಿಸುತ್ತಿದ್ದರು. ಆಟೋ ಚಾಲನೆಯಿಂದ ಬಂದ ಅಲ್ಪ ಆದಾಯದಲ್ಲೇ ಇಡೀ ಕುಟುಂಬದ ನಿರ್ವಹಣೆ ಹಾಗೂ ಮಕ್ಕಳ ಓದಿನ ವೆಚ್ಚವನ್ನು ಭರಿಸಿದ ತಂದೆಯ ತ್ಯಾಗ, ಶ್ರಮಕ್ಕೆ ಇಂದು ಪ್ರಭಾತ್​ ಎಂ‌ಬಿಬಿಎಸ್ ಸೀಟು ಪಡೆಯುವ ಮೂಲಕ ಗೌರವ ತಂದುಕೊಟ್ಟಿದ್ದಾರೆ. ಬಡತನ, ಕಷ್ಟಗಳು ಮತ್ತು ಸವಾಲುಗಳನ್ನು ಮೆಟ್ಟಿ ನಿಂತು ಹೆತ್ತವರ ಮುಖದಲ್ಲಿ ಮಂದಹಾಸ ಮೂಡಿಸಿರುವ ಪ್ರಭಾತ್ ಅವರ ಈ ಯಶೋಗಾಥೆಯು ಇಂದಿನ ಯುವಜನತೆಗೆ ಸ್ಪೂರ್ತಿದಾಯಕ ಎಂದೇ ಹೇಳಬಹುದು,(ಏಜೆನ್ಸೀಸ್).