ಸಿಎಂ ದೇವೇಂದ್ರ ಫಡ್ನವೀಸ್ 
ದೇಶ

ಮಹಾರಾಷ್ಟ್ರದಲ್ಲಿ ಮೇ 01ರಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಮಾತಾಡೋದು ಕಡ್ಡಾಯ; ಸಿಎಂ ಫಡ್ನವೀಸ್ ಸಮರ್ಥನೆ | Marathi

ಮುಂಬೈ: ಮಹಾರಾಷ್ಟ್ರದಲ್ಲಿ ಮೇ 01ರಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಕಡ್ಡಾಯವಾಗಿ ಮರಾಠಿ(Marathi) ಮಾತನಾಡೋದನ್ನು ಜಾರಿಗೆ ತರುವ ರಾಜ್ಯ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಸಿಎಂ ದೇವೇಂದ್ರ ಫಡ್ನವೀಸ್, ಆದರೆ ಈ ವಿಷಯದಲ್ಲಿ ಹಿಂಸಾಚಾರವನ್ನು ಸಹಿಸಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕಾರ್ಯನಿರ್ವಹಿಸುವ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಮಾತನಾಡೋದು ಕಡ್ಡಾಯ ಮಾಡಿ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಒಂದು ವೇಳೆ ಮರಾಠಿಯನ್ನು ಕಲಿಯಲಿಲ್ಲ ಅಂದ್ರೆ, ತಮ್ಮ ಲೈಸನ್ಸ್ ನವೀಕರಣದ ಸಮಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಮಾತನಾಡಿರುವ ಸಿಎಂ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರದಲ್ಲಿ ವಾಸಿಸುವವರು ಮತ್ತು ಕೆಲಸ ಮಾಡುವವರು ಸ್ಥಳೀಯ ಭಾಷೆಯನ್ನು ತಿಳಿದುಕೊಳ್ಳಬೇಕು. ಇದು ಅಸಮಂಜಸವಾದ ಬೇಡಿಕೆಯಲ್ಲ. ಕೆಲವು ಆಟೋ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಮಾತನಾಡಲು ಸಾಧ್ಯವಾಗದಿದ್ದರೆ, ಅವರು ಚಿಂತಿಸಬಾರದು. ಸರ್ಕಾರ ಅವರಿಗೆ ಭಾಷೆಯನ್ನು ಕಲಿಯಲು ಸಹಾಯ ಮಾಡುತ್ತದೆ. ಯಾರಿಗೂ ಅನ್ಯಾಯವಾಗುವುದಿಲ್ಲ, ಆದರೆ ಭಾಷೆಯ ಹೆಸರಿನಲ್ಲಿ ಹಿಂಸಾಚಾರವನ್ನು ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿರುವ ಶಿಂಧೆ ನೇತೃತ್ವದ ಶಿವಸೇನಾ ನಾಯಕ ಸಂಜಯ್ ನಿರುಪಮ್, ಇದು ಮರಾಠಿಯೇತರ ಭಾಷಿಕರ ಜೀವನೋಪಾಯವನ್ನು ಕಸಿದುಕೊಳ್ಳಬಹುದು. ಅವರ ಮೇಲೆ ಹಲ್ಲೆ ಮಾಡಲು ಪ್ರೋತ್ಸಾಹಿಸಬಹುದು. ಹಾಗಾಗಿ ಇದನ್ನು ಕಡ್ಡಾಯಗೊಳಿಸಬಾರದು ಎಂದು ಹೇಳಿದ್ದಾರೆ. ಆದರೆ ರಾಜ್​ ಠಾಕ್ರೆಸ ಮತ್ತು ಉದ್ಧವ್ ಠಾಕ್ರೆ ರಾಜ್ಯ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದಾರೆ (ಏಜೆನ್ಸೀಸ್).