ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ 
ದೇಶ

ಆಸ್ಟ್ರೇಲಿಯಾ ಯುರೇನಿಯಂ ಒಪ್ಪಂದ: ಸರ್ಕಾರಗಳು ಒಪ್ಪಂದಕ್ಕೆ ಸಹಿ ಹಾಕುತ್ತವೆ, ಪಕ್ಷಗಳಲ್ಲ: ಕಾಂಗ್ರೆಸ್​ಗೆ ಬಿಜೆಪಿ ತಿರುಗೇಟು | BJP

ನವದೆಹಲಿ: ಭಾರತಕ್ಕೆ ಯುರೇನಿಯಂ ಪೂರೈಸುವ ಆಸ್ಟ್ರೇಲಿಯಾದ ನಿರ್ಧಾರವನ್ನು ಯುಪಿಎ ಸರ್ಕಾರದ ಅವಧಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ಶುಕ್ರವಾರ(ಜು. 10) ಪ್ರತಿಕ್ರಿಯೆ ನೀಡಿರುವ ಬಿಜೆಪಿ(BJP), ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕುವುದು ಮತ್ತು ಜಾರಿಗೊಳಿಸುವುದು ಸರ್ಕಾರಗಳೇ ಹೊರತು ರಾಜಕೀಯ ಪಕ್ಷಗಳಲ್ಲ ಎಂದು ತಿರುಗೇಟು ನೀಡಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ರ್ಕಾರಗಳು ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕುತ್ತವೆ ಮತ್ತು ಜಾರಿಗೆ ತರುತ್ತವೆ, ರಾಜಕೀಯ ಪಕ್ಷಗಳಲ್ಲ. ಪ್ರತಿಯೊಂದು ಸರ್ಕಾರವೂ ಗಾಂಧಿ-ವಾದ್ರಾ ಕುಟುಂಬದ ಖಾಸಗಿ ಸೀಮಿತ ಉದ್ಯಮದಂತೆ ಕಾರ್ಯನಿರ್ವಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
2011ರಲ್ಲೇ ಒಪ್ಪಂದಕ್ಕೆ ಅನುಮೋದನೆಯಾಗಿದ್ದರೇ 2011 ಮತ್ತು 2014ರ ನಡುವೆ ಆಸ್ಟ್ರೇಲಿಯಾ ಯಾಕೆ ಭಾರತಕ್ಕೆ ಯುರೇನಿಯಂ ಪೂರೈಕೆ ಮಾಡಲಿಲ್ಲ. 2012ರಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಶೀಘ್ರದಲ್ಲೇ ಯುರೇನಿಯಂ ಸರಬರಾಜು ಇರುವುದಿಲ್ಲ ಎಂದು ಹೇಳಿತ್ತು ಎಂದು ಹೇಳಿದ್ದಾರೆ.
2014 ಸೆಪ್ಟೆಂಬರ್​ನಲ್ಲಿ ಮೋದಿ ಸರ್ಕಾರ ಭಾರತ-ಆಸ್ಟ್ರೇಲಿಯಾ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿತು. ಪ್ರಸ್ತುತ ಸರ್ಕಾರವು 2026 ರಲ್ಲಿ ದೀರ್ಘಾವಧಿಯ ಆಸ್ಟ್ರೇಲಿಯಾದ ಯುರೇನಿಯಂ ಪೂರೈಕೆ ಬದ್ಧತೆಗಳನ್ನು ಕಾರ್ಯಗತಗೊಳಿಸಿದೆ. ಕಾಂಗ್ರೆಸ್ ತನ್ನ ಬೆಂಬಲಿಗರನ್ನು ಮೆಚ್ಚಿಸಲು ಇಂತಹ ಹೇಳಿಕೆಗಳನ್ನು ನೀಡಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಹೇಳಿದ್ದೇನು?

ಆಸ್ಟ್ರೇಲಿಯಾದಿಂದ ಭಾರತಕ್ಕೆ ಯುರೇನಿಯಂ ಮಾರಾಟ ನಿರ್ಧಾರವು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಕೊಡುಗೆ ಅಲ್ಲ, 2011ರಲ್ಲಿ ಆಗಿನ ಆಸ್ಟ್ರೇಲಿಯಾದ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರು ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲು ತಮ್ಮ ಪಕ್ಷದ ಅನುಮೋದನೆಯನ್ನು ಪಡೆದುಕೊಂಡಿದ್ದರು ಎಂದು ಪ್ರತಿಪಾದಿಸಿತ್ತು.
ಭಾರತ-ಯುಎಸ್ ಪರಮಾಣು ಒಪ್ಪಂದದ ನಂತರ ಗಿಲ್ಲಾರ್ಡ್ ಭಾರತಕ್ಕೆ ಯುರೇನಿಯಂ ರಫ್ತಿಗೆ ತಮ್ಮ ಪಕ್ಷದ ಬೆಂಬಲವನ್ನು ಪಡೆದುಕೊಂಡಿದ್ದರು. ಈ ನಿರ್ಧಾರವು ಮೋದಿ ಸರ್ಕಾರದ ಅವಧಿಗಿಂತ ಮೊದಲೇ ಇತ್ತು ಎಂದು ತಿಳಿಸಿದೆ (ಏಜೆನ್ಸೀಸ್).