Bhadrakali Trident | ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್ ಬರ್ತಿವೆ 3 ಪವಿತ್ರ ವಿಗ್ರಹಗಳು!...  
ದೇಶ

ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್ ಬರ್ತಿವೆ 3 ಪವಿತ್ರ ವಿಗ್ರಹಗಳು!... ಇವುಗಳ ಹಿಂದಿದೆ ನೂರಾರು ವರ್ಷಗಳ ರೋಚಕ ಇತಿಹಾಸ | Bhadrakali Trident

ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ನಡುವಿನ ಸಾಂಸ್ಕೃತಿಕ ಹಾಗೂ ರಾಜತಾಂತ್ರಿಕ ಬಾಂಧವ್ಯಕ್ಕೆ ಮತ್ತೊಂದು ಐತಿಹಾಸಿಕ ಅಧ್ಯಾಯ ಸೇರ್ಪಡೆಯಾಗಿದ್ದು, ಆಸ್ಟ್ರೇಲಿಯಾದ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸಂರಕ್ಷಿಸಲಾಗಿದ್ದ ತಮಿಳುನಾಡಿನ ಅತ್ಯಂತ ಪುರಾತನ ಹಾಗೂ ಪವಿತ್ರವಾದ 3 ಪರಂಪರೆಯ ವಸ್ತುಗಳನ್ನು ಭಾರತಕ್ಕೆ ಮರಳಿ ನೀಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
ಮೆಲ್ಬೋರ್ನ್‌ನಲ್ಲಿ ಗುರುವಾರ (ಜುಲೈ 9) ನಡೆದ 3ನೇ ಇಂಡಿಯಾ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯ ವೇಳೆ ಈ ಪ್ರಮುಖ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ದೇಶಗಳ ಪಾಲುದಾರಿಕೆ 6 ವರ್ಷಗಳನ್ನು ಪೂರೈಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಉಭಯ ನಾಯಕರು, ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಿದರು.
ಸಾಂಸ್ಕೃತಿಕ ಪರಂಪರೆಗೆ ಗೌರವ ನೀಡುವುದು ಮತ್ತು ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವುದು ಎರಡೂ ದೇಶಗಳ ನಡುವಿನ ಬಾಂಧವ್ಯದ ಪ್ರಮುಖ ಭಾಗವಾಗಿದೆ ಎಂದು ಇಬ್ಬರೂ ನಾಯಕರು ಉಲ್ಲೇಖಿಸಿದರು. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಈ ಪುರಾತನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ.

ಭಾರತಕ್ಕೆ ವಾಪಸ್ ಬರಲಿರುವ 3 ಪುರಾತನ ಪರಂಪರೆಯ ವಸ್ತುಗಳು

1. ಭದ್ರಕಾಳಿ ದೇವಿಯ ಲೋಹದ ತ್ರಿಶೂಲ (Metal trident of Goddess Bhadrakali)

ಇದು ಪವಿತ್ರ ಲೋಹದ ತ್ರಿಶೂಲವಾಗಿದ್ದು, ಇದರ ತುದಿಯಲ್ಲಿ ಶಕ್ತಿಯ ಉಗ್ರರೂಪಿ ಭದ್ರಕಾಳಿ ದೇವಿಯ ಕೆತ್ತನೆ ಇದೆ. ಈ ತ್ರಿಶೂಲವು ದೈವಿಕ ಶಕ್ತಿ, ರಕ್ಷಣೆ ಮತ್ತು ದುಷ್ಟಶಕ್ತಿಗಳ ಸಂಹಾರದ ಸಂಕೇತವಾಗಿದೆ. ದಕ್ಷಿಣ ಭಾರತದ ದೇವಸ್ಥಾನಗಳ ಸಾಂಪ್ರದಾಯಿಕ ಲೋಹದ ಕೆತ್ತನೆ ಶೈಲಿಯಲ್ಲಿ ಇದನ್ನು ತಯಾರಿಸಲಾಗಿದೆ. ಇದು ತಮಿಳುನಾಡಿನ ಕೊಲ್ಲುಂಬಂಗುಡಿಯಲ್ಲಿರುವ ಶ್ರೀ ಕಾಶಿವಿಸ್ವನಾಥಸ್ವಾಮಿ ದೇವಾಲಯಕ್ಕೆ ಸೇರಿದ್ದಾಗಿದ್ದು, ಈ ದೇವಾಲಯವನ್ನು 13 ರಿಂದ 16 ನೇ ಶತಮಾನದ ನಡುವೆ ಚೋಳ, ವಿಜಯನಗರ ಮತ್ತು ನಾಯಕ ರಾಜರ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾಗಿತ್ತು.

2. ನಂದಿಯ ಕಲ್ಲಿನ ವಿಗ್ರಹ (Stone statue of Nandi)

ಇದು ಶಿವನ ಪವಿತ್ರ ವಾಹನವಾದ ನಂದಿಯ ಸುಂದರ ಕಲ್ಲಿನ ವಿಗ್ರಹ. ತಮಿಳು ಶೈವ ದೇವಾಲಯ ಪರಂಪರೆಯಂತೆ ಅತ್ಯಂತ ಕಲಾತ್ಮಕ ಕೆತ್ತನೆಯೊಂದಿಗೆ ಇದನ್ನು ನಿರ್ಮಿಸಲಾಗಿದೆ. ಸಾಂಪ್ರದಾಯಿಕವಾಗಿ ದೇವಸ್ಥಾನದ ಗರ್ಭಗುಡಿಯ ಎದುರು ಸ್ಥಾಪಿಸಲಾಗುವ ಈ ನಂದಿ ವಿಗ್ರಹವು ಭಕ್ತಿ, ಶಕ್ತಿ ಮತ್ತು ಧರ್ಮದ ಸಂಕೇತವಾಗಿದೆ. ನಂದಿಯು ಮಲಗಿರುವ ಭಂಗಿಯಲ್ಲಿದ್ದು, ಕೊರಳಲ್ಲಿ ಗಂಟೆಗಳು ಹಾಗೂ ಹಾರಗಳ ಕೆತ್ತನೆ ಇದೆ. 13 ರಿಂದ 16 ನೇ ಶತಮಾನಕ್ಕೆ ಸೇರಿದ ಈ ವಿಗ್ರಹವು ತಮಿಳುನಾಡಿನ ತಿರುವಾರೂರು ಜಿಲ್ಲೆಯ ಕೊಲ್ಲುಂಬಂಗುಡಿಯ ಶ್ರೀ ಕಾಶಿವಿಸ್ವನಾಥಸ್ವಾಮಿ ದೇವಾಲಯಕ್ಕೆ ಸೇರಿದ್ದಾಗಿದೆ.

3. ಷಣ್ಮುಖ ಕಾರ್ತಿಕೇಯನ ಕಲ್ಲಿನ ವಿಗ್ರಹ (Six-faced Kartikeya - Shanmukha)

ಇದು ಆರು ಮುಖಗಳು ಹಾಗೂ ಹನ್ನೆರಡು ಕೈಗಳನ್ನು ಹೊಂದಿರುವ ಮುರುಗನ್/ಕಾರ್ತಿಕೇಯ ದೇವರ ಕಲ್ಲಿನ ವಿಗ್ರಹವಾಗಿದೆ. ಇದು ಜ್ಞಾನ, ಶೌರ್ಯ ಮತ್ತು ದೈವಿಕ ರಕ್ಷಣೆಯನ್ನು ಪ್ರತಿಬಿಂಬಿಸುತ್ತದೆ. ಕಾರ್ತಿಕೇಯನ ಕೈಯಲ್ಲಿ ವೇಲ್ (ಸ್ಪಿಯರ್/ಬರ್ಚಿ) ಇದ್ದು, ಪಕ್ಕದಲ್ಲಿ ನವಿಲನ್ನು ಕೆತ್ತಲಾಗಿದೆ. ತನ್ನ ಸಂಕೀರ್ಣ ಮತ್ತು ಸುಂದರ ಕೆತ್ತನೆಗೆ ಹೆಸರಾದ ಪ್ರಸಿದ್ಧ ಚೋಳರ ಕಾಲದ ಕಲಾಶೈಲಿಯಲ್ಲಿ ಇದನ್ನು ಕೆತ್ತಲಾಗಿದೆ. ಈ ವಿಗ್ರಹವು ತಮಿಳುನಾಡಿನ ತಂಜಾವೂರು ಜಿಲ್ಲೆಯ ಮಣಂಬಾಡಿ ಗ್ರಾಮದಲ್ಲಿರುವ ನಾಗಿನಾಥಸ್ವಾಮಿ ದೇವಾಲಯಕ್ಕೆ ಸೇರಿದ್ದಾಗಿದೆ. ಈ ದೇವಾಲಯವನ್ನು 11 ನೇ ಶತಮಾನದ ಆರಂಭದಲ್ಲಿ ಒಂದನೇ ರಾಜೇಂದ್ರ ಚೋಳನ ಆಡಳಿತಾವಧಿಯಲ್ಲಿ ನಿರ್ಮಿಸಲಾಗಿತ್ತು(ಏಜೆನ್ಸೀಸ್​).