ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ
ದೆಹಲಿ: ಗ್ರಾಮೀಣ ಉದ್ಯೋಗ ಖಾತರಿ ಯೋಜನೆ MGNREGS ಬದಲಿಗೆ ಹೊಸ ಮಸೂದೆ ತರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಈ ಹೊಸ ಮಸೂದೆ ಕಾನೂನನ್ನು ದುರ್ಬಲಗೊಳಿಸುತ್ತದೆ, ಆದ್ದರಿಂದ ಇದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ಲೋಕಸಭೆಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಜಿ ರಾಮ್ ಜಿ ಮಸೂದೆ ಎಂದೂ ಕರೆಯಲ್ಪಡುವ ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆಯನ್ನು ಮಂಡಿಸಲು ಅನುಮತಿ ಕೋರಿದ್ದು, ಈ ಖಾಯ್ದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬದಲಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಇದೇ ವಿಷಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಿಯಾಂಕಾ, ಯಾರದೋ ಹುಚ್ಚಾಟ, ಮಹತ್ವಾಕಾಂಕ್ಷೆ ಮತ್ತು ಪೂರ್ವಾಗ್ರಹದ ಆಧಾರದ ಮೇಲೆ ಯಾವುದೇ ಕಾನೂನನ್ನು ಅಂಗೀಕರಿಸಬಾರದು ಎಂದರು.
ಲೋಕಸಭೆಯಲ್ಲಿ ವ್ಯವಹಾರದ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 72(1) ರ ಅಡಿಯಲ್ಲಿ ಪ್ರಿಯಾಂಕಾ ಗಾಂಧಿ ಈ ಹೊಸ ಮಸೂದೆಯನ್ನು ವಿರೋಧಿಸಿದರು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಭಾರತದ ಹಳ್ಳಿಗಳ ಜನರ ಜೀವನೋಪಾಯವನ್ನು ಒದಗಿಸುವಲ್ಲಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ 20 ವರ್ಷಗಳಿಂದ ಯಶಸ್ವಿಯಾಗಿದೆ. ಇದು ಎಷ್ಟು ಕ್ರಾಂತಿಕಾರಿ ಕಾನೂನೆಂದರೆ, ಇದನ್ನು ತಂದಾಗ, ಸಂಸತ್ತಿನಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಬೆಂಬಲಿಸಿದವು. ಇದು ಈ ದೇಶದ ಬಡವರಿಗೆ ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ಒದಗಿಸುತ್ತದೆ ಎಂದು ಹೇಳಿದರು.
ಶಿವರಾಜ್ ಚೌಹಾಣ್ ತಿರುಗೇಟು..
ಮಸೂದೆಯನ್ನು ಮಂಡಿಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಶಿವರಾಜ್ ಸಿಂಗ್ ಚೌಹಾಣ್, ಸಂಸದೆ ಪ್ರಿಯಾಂಕಾ ಗಾಂಧಿ ಮಾತಿಗೆ ತಿರುಗೇಟು ನೀಡುತ್ತಾ, ನಮ್ಮ ಸರ್ಕಾರವು ಗಾಂಧಿಜೀಯವರ ಮೇಲೆ ನಂಬಿಕೆ ಇಡುವುದಲ್ಲದೆ ಅವರ ತತ್ವಗಳನ್ನು ಸಹ ಅನುಸರಿಸುತ್ತದೆ, ಈ ಶಾಸನವು ದೇಶದ ಹಳ್ಳಿಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮಾತ್ರ ಸಹಾಯ ಮಾಡುತ್ತದೆ ಎಂದು ತಿರುಗೇಟು ನೀಡಿದರು. ನಾವು ಮಹಾತ್ಮ ಗಾಂಧಿಯವರ ಕನಸನ್ನು ನನಸಾಗಿಸುತ್ತೇವೆ ಮತ್ತು ಅವರು ಕಂಡ ರಾಮರಾಜ್ಯವನ್ನು ಸ್ಥಾಪಿಸುತ್ತೇವೆ ಎಂದು ಹೇಳಿದರು.
ಏನಿದು ಹೊಸ ಬಿಲ್..?
ಈ ಮಸೂದೆಯು ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತರಿಯನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದ್ದು, ಅಲ್ಲಿ ವಯಸ್ಕ ಸದಸ್ಯರು ಕೌಶಲ್ಯರಹಿತ ದೈಹಿಕ ಕೆಲಸವನ್ನು ಕೈಗೊಳ್ಳಲು ಸ್ವಯಂಸೇವಕರಾಗುತ್ತಾರೆ. ಕಾಯ್ದೆ ಪ್ರಾರಂಭವಾದ ದಿನಾಂಕದಿಂದ ಆರು ತಿಂಗಳೊಳಗೆ, ರಾಜ್ಯಗಳು ಹೊಸ ಕಾನೂನಿನ ನಿಬಂಧನೆಗಳಿಗೆ ಅನುಗುಣವಾಗಿ ಒಂದು ಯೋಜನೆಯನ್ನು ರೂಪಿಸಬೇಕಾಗುತ್ತದೆ.
ಇದರ ಹಣಕಾಸಿನ ಹೊಣೆಗಾರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೊಳ್ಳಲಾಗುವುದು. ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯನ್ ರಾಜ್ಯಗಳಿಗೆ ಇದು 90:10 ರಷ್ಟಿದ್ದರೆ, ಇತರ ಎಲ್ಲಾ ರಾಜ್ಯಗಳು ಮತ್ತು ಶಾಸಕಾಂಗ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಿಗೆ 60:40 ರಷ್ಟಿರುತ್ತದೆ. ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ, ಸಂಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸುತ್ತದೆ(ಏಜೆನ್ಸೀಸ್).