ಸಿಎಂ ವಿಜಯ್ ಸರ್ಕಾರ ಉರುಳಿಸಲು ಪಿತೂರಿ: 15 ಶಾಸಕರಿಗೆ ಕೋಟಿ ಕೋಟಿ ಆಮಿಷ, ಡಿಎಂಕೆ ವಿರುದ್ಧ ಗಂಭೀರ ಆರೋಪ! CM Vijay  
ದೇಶ

ಸಿಎಂ ವಿಜಯ್ ಸರ್ಕಾರ ಉರುಳಿಸಲು ಪಿತೂರಿ: 15 ಶಾಸಕರಿಗೆ ಕೋಟಿ ಕೋಟಿ ಆಮಿಷ, ಡಿಎಂಕೆ ವಿರುದ್ಧ ಗಂಭೀರ ಆರೋಪ! CM Vijay

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಟಿವಿಕೆ ಸರ್ಕಾರ ಉರುಳಿಸಲು ಭಾರಿ ಕಸರತ್ತು
  • ಟಿವಿಕೆ ಸರ್ಕಾರ ಬೀಳಿಸಲು ಡಿಎಂಕೆ ಪ್ಲಾನ್? ಶಾಸಕ ಇಳಯರಾಜ ದೂರ ಬೆನ್ನಲ್ಲೇ ಬಿರುಗಾಳಿ
  • ತಮಿಳುನಾಡು ಇಂಟೆಲಿಜೆನ್ಸ್ ತನಿಖೆಯಲ್ಲಿ ಬಯಲಾಯ್ತು ಸೀಕ್ರೆಟ್ ಆಪರೇಷನ್
  • ನಮ್ಮ ಸರ್ಕಾರ ಉರುಳಿಸಲು ಅಷ್ಟೊಂದು ಆತುರ ಏಕೆ? ಸಚಿವ ನಿರ್ಮಲ್ ಕುಮಾರ್ ತೀಕ್ಷ್ಣ ಪ್ರಶ್ನೆ!
ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ವಿಜಯ ( CM Vijay ) ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಅಧಿಕಾರಕ್ಕೆ ಬಂದ ಕೇವಲ ಎರಡೇ ತಿಂಗಳಲ್ಲಿ ಆಡಳಿತಾರೂಢ ಸರ್ಕಾರವನ್ನು ಉರುಳಿಸಲು ವಿಪಕ್ಷಗಳು ಭಾರಿ ಸಂಚು ರೂಪಿಸಿವೆ ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ.
15 ಟಿವಿಕೆ ಶಾಸಕರನ್ನು ಸೆಳೆದು ಸಿಎಂ ವಿಜಯ ನೇತೃತ್ವದ ತಮಿಳುನಾಡು ಸರ್ಕಾರನ್ನು ಕೆಳಗೆ ಬೀಳಿಸಲು ಯತ್ನಿಸಲಾಗಿದೆ ಎಂದು ದೂರು ದಾಖಲಾಗಿದ್ದು, ಈ ಒಂದು ಆರೋಪ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ತಂದು ಸರ್ಕಾರ ಬೀಳಿಸಲು ತಮಗೆ ಕೋಟಿ ಕೋಟಿ ರೂಪಾಯಿಗಳ ಆಮಿಷ ಒಡ್ಡಲಾಗಿತ್ತು ಎಂದು ಟಿವಿಕೆ ಶಾಸಕರೊಬ್ಬರು ನೀಡಿದ ಗಂಭೀರ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಈಗಾಗಲೇ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಅದರಲ್ಲಿ ಒಬ್ಬನನ್ನು ಬಂಧಿಸಿದ್ದಾರೆ. ಈ ಕುದುರೆ ವ್ಯಾಪಾರದ ಹಿಂದೆ ಪ್ರಮುಖ ವಿಪಕ್ಷವಾದ ಡಿಎಂಕೆ ನಾಯಕರ ಕೈವಾಡ ಹಾಗೂ ಸಂಪರ್ಕವಿದೆ ಎಂಬ ಆರೋಪ ಕೇಳಿಬಂದಿರುವುದು ತಮಿಳುನಾಡು ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.
ತಮಿಳುನಾಡು ಪೊಲೀಸ್ ಗುಪ್ತಚರ ವಿಭಾಗದ ತನಿಖೆಯಲ್ಲೂ ಸಹ ವಿಜಯ ನೇತೃತ್ವದ ಸರ್ಕಾರವನ್ನು ಉರುಳಿಸಲು ಒಟ್ಟು 15 ಟಿವಿಕೆ ಶಾಸಕರು ಏಕಕಾಲದಲ್ಲಿ ರಾಜೀನಾಮೆ ನೀಡುವಂತೆ ಮಾಡಲು ದೊಡ್ಡ ಮಟ್ಟದ ಪಿತೂರಿ ನಡೆದಿರುವುದು ಪತ್ತೆಯಾಗಿದೆ. ಈ ಆಪರೇಷನ್ ಹಾರ್ಸ್ ಟ್ರೇಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ಸಲ್ಟೆನ್ಸಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಬಂಧಿತ ಆರೋಪಿಗಳಿಗೆ ಪ್ರಮುಖ ಡಿಎಂಕೆ ಶಾಸಕ ವಿ. ಸೆಂಥಿಲ್ ಬಾಲಾಜಿ ಅವರೊಂದಿಗೆ ನಿಕಟ ಸಂಪರ್ಕವಿತ್ತು ಎಂಬ ವರದಿಗಳು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಇನ್ನುಳಿದಂತೆ ಈ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಇತರ ಇಬ್ಬರು ವ್ಯಕ್ತಿಗಳು ಕರೂರ್ ಮೂಲದವರು ಎಂದು ತಿಳಿದುಬಂದಿದೆ.
ಟಿವಿಕೆ ಶಾಸಕ ಎನ್. ಇಳಯರಾಜ ಅವರು ತಮಗೆ ಬರೋಬ್ಬರಿ 35 ಕೋಟಿ ರೂಪಾಯಿಗಳ ಆಮಿಷ ಒಡ್ಡಲಾಗಿತ್ತು ಎಂದು ಅಧಿಕೃತ ದೂರು ದಾಖಲಿಸಿದ ಬೆನ್ನಲ್ಲೇ, ನಟ ವಿಜಯ್ ನೇತೃತ್ವದ ಸರ್ಕಾರವನ್ನು ಉರುಳಿಸಲು ತೆರೆಮರೆಯಲ್ಲಿ ನಡೆಯುತ್ತಿದ್ದ ಯತ್ನಗಳ ಸಂಪೂರ್ಣ ಮಾಹಿತಿ ಹೊರಬಿದ್ದಿದೆ.
ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಿದರೆ 35 ಕೋಟಿ ರೂ. ನೀಡುವುದಾಗಿ ಕನ್ಸಲ್ಟೆನ್ಸಿ ಸಂಸ್ಥೆಯ ಪ್ರತಿನಿಧಿಯೊಬ್ಬರು ತಮಗೆ ಆಮಿಷ ಒಡ್ಡಿದ್ದಲ್ಲದೆ, ಬೆದರಿಕೆಯನ್ನೂ ಹಾಕಿದ್ದರು ಎಂದು ಶಾಸಕರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹೈಡ್ರಾಮಾ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, "ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಉದಯನಿಧಿ ಸ್ಟಾಲಿನ್ ಅವರು ಟಿವಿಕೆ ಸರ್ಕಾರವನ್ನು ಉರುಳಿಸಲು ಇಷ್ಟೊಂದು ಉತ್ಸುಕರಾಗಿರುವುದೇಕೆ? ಎಂದು ಟಿವಿಕೆ ಸಚಿವ ಆರ್. ನಿರ್ಮಲ್ ಕುಮಾರ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಟಿವಿಕೆ ಶಾಸಕರನ್ನು ಸೆಳೆಯಲು ಗರಿಷ್ಠ 50 ಕೋಟಿ ರೂಪಾಯಿಗಳವರೆಗೆ ಹಣದ ಆಮಿಷ ಒಡ್ಡಲಾಗಿತ್ತು ಎಂಬ ಗಂಭೀರ ಆರೋಪವನ್ನೂ ಸಚಿವರು ಮಾಡಿದ್ದಾರೆ.
ಮತ್ತೊಂದೆಡೆ, ಆಡಳಿತಾರೂಢ ಟಿವಿಕೆ ವಿರುದ್ಧ ತಿರುಗಿಬಿದ್ದಿರುವ ಡಿಎಂಕೆ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮತ್ತು ಎಂಡಿಎಂಕೆ ಮುಖ್ಯಸ್ಥ ವೈಕೋ ಅವರು ತಮ್ಮ ಇಬ್ಬರು ಶಾಸಕರನ್ನು ಸೆಳೆಯಲು ಯತ್ನಿಸಿದ್ದಾರೆ ಎಂದು ಪ್ರತಿದಾಳಿ ನಡೆಸಿದೆ. ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಪಕ್ಷದ ಶಾಸಕರಿಗೆ ಆಮಿಷ ಒಡ್ಡಿ ಅವರು ರಾಜೀನಾಮೆ ನೀಡುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಡಿಎಂಕೆಯ ಬಲವನ್ನು ಕುಗ್ಗಿಸುವ ಉದ್ದೇಶದಿಂದಲೇ ಈ ತೆರೆಮರೆಯ ಕಸರತ್ತುಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಡಿಎಂಕೆ, ಈ ಕುರಿತು ತಮಿಳುನಾಡು ರಾಜ್ಯಪಾಲರಿಗೂ ಅಧಿಕೃತ ದೂರು ಸಲ್ಲಿಸಿರುವುದು ತಮಿಳುನಾಡು ರಾಜಕೀಯದ ಜಿದ್ದಾಜಿದ್ದಿಯನ್ನು ಮತ್ತಷ್ಟು ತಾರಕಕ್ಕೇರಿಸಿದೆ, (ಏಜೆನ್ಸೀಸ್​).