ಆರೋಪಿ ಕೋ ಪೈಲಟ್ ಹಮಾಮ್ ಅಲ್ಹಮ್ಮಮಿ 
ದೇಶ

ಫ್ಲೈದುಬೈ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ; ಸಹ ಪೈಲಟ್ ಹೆಸರು ರಿವೀಲ್; ಸ್ವಂತ ದೇಶದಲ್ಲೇ ವಿಮಾನ ಹಾರಾಟ ನಡೆಸದಂತೆ ನಿಷೇಧಕ್ಕೊಳಗಾಗಿದ್ದ ಆರೋಪಿ | Flydubai

ದುಬೈ-ಟೆಲ್ ಅವಿವ್ ನಡುವಿನ ವಿಮಾನದ ಕಾರ್ಯಾಚರಣೆಗೆ ಅಡ್ಡಿಪಡಿಸಲು ಯತ್ನಿಸಿದ ಮತ್ತು ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ 'ಫ್ಲೈದುಬೈ' ಸಹ-ಪೈಲಟ್ ಹೆಸರು ರಿವೀಲ್ ಆಗಿದ್ದು, ಆರೋಪಿಯನ್ನು ಹಮಾಮ್ ಅಲ್ಹಮ್ಮಮಿ ಎಂದು ಗುರುತಿಸಲಾಗಿದೆ.

Flydubai: ದುಬೈ-ಟೆಲ್ ಅವಿವ್ ನಡುವಿನ ವಿಮಾನದ ಕಾರ್ಯಾಚರಣೆಗೆ ಅಡ್ಡಿಪಡಿಸಲು ಯತ್ನಿಸಿದ ಮತ್ತು ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ 'ಫ್ಲೈದುಬೈ' ಸಹ-ಪೈಲಟ್ ಹೆಸರು ರಿವೀಲ್ ಆಗಿದ್ದು, ಆರೋಪಿಯನ್ನು ಹಮಾಮ್ ಅಲ್ಹಮ್ಮಮಿ ಎಂದು ಗುರುತಿಸಲಾಗಿದೆ. ಮತ್ತು ಇಸ್ರೇಲ್‌ನಲ್ಲಿ ವಿಮಾನವನ್ನು ಅಪಘಾತಕ್ಕೀಡುಮಾಡುವ ಉದ್ದೇಶ ಹೊಂದಿದ್ದ ಎಂದು ಬಹಿರಂಗಗೊಂಡಿದೆ.

ಆರೋಪಿ ಹೆಸರು ರಿವೀಲ್ ಮಾಡಿ ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ್ದು, ಹಮಾಮ್ ಅಲ್ಹಮ್ಮಮಿ ಯುಎಇ ಮೂಲದ ಒಮಾನಿ ತಂದೆ ಮತ್ತು ಸಿರಿಯನ್ ತಾಯಿಗೆ ಜನಿಸಿದ ಒಮಾನ್ ಪ್ರಜೆಯಾಗಿದ್ದಾನೆ. ಅವನು ತನ್ನ ಹೆಚ್ಚಿನ ಸಮಯವನ್ನು ಒಮಾನ್‌ನ ಹೊರಗೆ, ವಿಶೇಷವಾಗಿ ಸಿರಿಯಾದಲ್ಲಿ ಕಳೆದಿದ್ದು, ಅಲ್ಲಿಯೇ ತೀವ್ರಗಾಮಿ ವಿಚಾರಗಳಿಂದ ಪ್ರಭಾವಿತನಾಗಿದ್ದನು ಎಂದು ತಿಳಿಸಿದೆ.

ಅಷ್ಟೇ ಅಲ್ಲದೇ ತೀವ್ರಗಾಮಿ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದಾನೆ ಎಂಬ ಕಳವಳದ ಹಿನ್ನೆಲೆಯಲ್ಲಿ ತಮ್ಮ ತಾಯ್ನಾಡಾದ ಒಮಾನ್‌ನಲ್ಲಿ ವಿಮಾನ ಹಾರಾಟ ನಡೆಸದಂತೆ ನಿರ್ಬಂಧಕ್ಕೊಳಗಾಗಿದ್ದನು ಎಂದು ಹೇಳಲಾಗಿದೆ.

2024ರಲ್ಲಿ ಒಮಾನ್ ಏರ್​​ನಲ್ಲಿ ಸಹ-ಪೈಲಟ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾಗ ಅಲ್ಹಮ್ಮಮಿ ಬಳಿ ತೀವ್ರಗಾಮಿ ಸಿದ್ಧಾಂತಕ್ಕೆ ಸಂಬಂಧಿಸಿದ ಸಾಮಗ್ರಿಗಳು ಪತ್ತೆಯಾಗಿದ್ದವು ಎಂದು ವರದಿ ತಿಳಿಸಿದೆ. ಈ ಹಿನ್ನೆಲೆ ಅವನನ್ನು ಆಡಳಿತಾತ್ಮಕ ಹುದ್ದೆಯಲ್ಲಿ ಮುಂದುವರಿಯಲು ಅನುಮತಿಸಲಾಯಿತಾದರೂ, ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ ಎಂದು ಪರಿಗಣಿಸಿ ವಿಮಾನ ಹಾರಾಟ ನಡೆಸದಂತೆ ನಿರ್ಬಂಧಿಸಲಾಯಿತು ಎನ್ನಲಾಗಿದೆ.

ಈ ನಿರ್ಬಂಧದ ಹೊರತಾಗಿಯೂ, ಎಂಟು ತಿಂಗಳ ಹಿಂದೆ ಯಾವುದೇ ಸರಿಯಾದ ಪರಿಶೀಲನೆ ನಡೆಸದೇ ದುಬೈ ಮೂಲದ ವಿಮಾನಯಾನ ಸಂಸ್ಥೆಯಾದ 'ಫ್ಲೈದುಬೈ' ಅವರನ್ನು ತನ್ನಲ್ಲಿ ಹುದ್ದೆಗೆ ನೇಮಿಸಿಕೊಂಡಿತು. ಮತ್ತು ಯುಎಇ ಹಾಗೂ ಇಸ್ರೇಲ್ ಅನ್ನು ಸಂಪರ್ಕಿಸುವ ಸೂಕ್ಷ್ಮ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲು ಅವಕಾಶ ನೀಡಿತು ಎಂದು ವಾಲ್ ಸ್ಟ್ರೀಟ್ ವರದಿ ಉಲ್ಲೇಖಿಸಿದೆ.

ಘಟನೆಯ ಹಿನ್ನಲೆ!

ಸೆಪ್ಟೆಂಬರ್ 30 ರಂದು ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಭದ್ರತಾ ಬಿಕ್ಕಟ್ಟು ಸಂಭವಿಸಿತ್ತು. ಒಮಾನ್ ಮೂಲದ ಸಹ-ಪೈಲಟ್ ಹಮಾಮ್ ಅಲ್ಹಮ್ಮಮಿ ವಿಮಾನವನ್ನು ಅಪಘಾತ ಮಾಡುವ ಉದ್ದೇಶದಿಂದ ಕಮಾಂಡರ್ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದರಿಂದ ವಿಮಾನವು ಕೇವಲ ಎರಡು ನಿಮಿಷಗಳಲ್ಲಿ ಸರಿಸುಮಾರು 16,000 ಅಡಿಗಳಷ್ಟು ಕೆಳಗೆ ಧುಮುಕಿತ್ತು. ತೀವ್ರ ಗಾಯಗಳಾಗಿದ್ದರೂ ಮಚ್ಚಾರ್ ದಾಳಿಕೋರನನ್ನು ಪ್ರತಿರೋಧಿಸಿದರು. ತಕ್ಷಣ ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ ದಾಳಿಕೋರನನ್ನು ನಿಯಂತ್ರಿಸಿದರು.

ಬಳಿಕ ಕರ್ತವ್ಯದಲ್ಲಿಲ್ಲದ ಇಬ್ಬರು ವಾಯುಯಾನ ತಜ್ಞರ ಸಹಾಯದಿಂದ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಇದರಿಂದ ವಿಮಾನದಲ್ಲಿದ್ದ ಎಲ್ಲಾ 180 ಮಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದರು. ದಾಳಿಕೋರನನ್ನು ಯುಎಇಗೆ ಕರೆತರಲಾಗಿದ್ದು, ಘಟನೆಯ ಕುರಿತು ಅಂತರರಾಷ್ಟ್ರೀಯ ತನಿಖೆ ಮುಂದುವರಿದೆ (ಏಜೆನ್ಸೀಸ್).