TMC ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ
- TMC ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ
- ಕಲ್ಲು, ಮೊಟ್ಟೆಯಿಂದ ದಾಳಿ ನಡೆಸಿದ್ದ ಐವರ ಬಂಧನ
- ಇದು ಬಿಜೆಪಿ ಪ್ರಯೋಜಿತ ದಾಳಿ ಎಂದ ಅಭಿಷೇಕ್ ಬ್ಯಾನರ್ಜಿ
- ಹೆಲ್ಮೆಟ್ ಧರಿಸದಿದ್ದರೆ ಸಂಸದ ಸತ್ತು ಹೋಗುತ್ತಿದ್ದ: ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ: ತ್ರಣಮೂಲ್ ಕಾಂಗ್ರೆಸ್ (TMC) ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಮೇಲೆ ದಕ್ಷಿಣ 24 ಪರಗಣ ಜಿಲ್ಲೆಯ ಸೋನರ್ಪುರ್ನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಶನಿವಾರ (ಮೇ.30) ವಿಧಾನಸಭಾ ಚುನಾವಣಾ ನಂತರ ನಡೆದ ಹಿಂಸಾಚಾರದಲ್ಲಿ ತೊಂದರೆಗೆ ಒಳಗಾದ ಕುಟುಂಬದವರನ್ನು ಭೇಟಿಮಾಡಲು ತೆರಳಿದಾಗ ಸಂಸದನ ಮೇಲೆ ದಾಳಿ ನಡೆದಿತ್ತು.
ಮೊಟ್ಟೆ, ಕಲ್ಲಿನಿಂದ ದಾಳಿ!
ಡೈಮಂಡ್ ಹಾರ್ಬರ್ ಕ್ಷೇತ್ರದ ಸಂಸದನಾಗಿರುವ ಅಭಿಷೇಕ್ ಬ್ಯಾನರ್ಜಿ, ಸೋನರ್ಪುರ್ಗೆ ಆಗಮಿಸುತ್ತಿದ್ದಂತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸಂಸದನ ಮೇಲೆ ಮೊಟ್ಟೆ ಮತ್ತು ಕಲ್ಲುಗಳಿಂದ ದಾಳಿ ಪ್ರಾರಂಭವಾಗಿದ್ದು, ಕೆಲವರು ಕಪಾಳಕ್ಕೆ ಹೊಡೆದಿದ್ದಾಗಿ ತಿಳಿದುಬಂದಿದೆ. ನೆರೆದಿದ್ದ ಜನ ಅಭಿಷೇಕ್ ಬ್ಯಾನರ್ಜಿಯನ್ನು ಕಳ್ಳ-ಕಳ್ಳ ಎಂದು ಕರೆದಿದ್ದಾರೆ.
ಜನರ ಆಕ್ರೋಶ ತೀವ್ರವಾಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಬ್ಯಾನರ್ಜಿಗೆ ತೆಲೆಗೆ ಧರಿಸಲು ಹೆಲ್ಮೆಟ್ ನೀಡಿ, ಸಾಧ್ಯವಾದಷ್ಟು ಬೇಗ ಸ್ಥಳದಿಂದ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.
ಬಿಜೆಪಿ ನನ್ನ ಕೊಲೆಗೆ ಸಂಚು ರೂಪಿಸಿದೆ: ಅಭಿಷೇಕ್
ಘಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಸದ ಅಭಿಷೇಕ್ ಬ್ಯಾನರ್ಜಿ, ಇದು ಬಿಜೆಪಿ ಪ್ರಾಯೋಜಿತ ದಾಳಿಯಾಗಿದ್ದು, ನನ್ನನ್ನು ಕೊಲ್ಲಲು ಆಡಳಿತ ಪಕ್ಷ ರಚಿಸಿದ ವ್ಯವಸ್ಥಿತ ಸಂಚು ಇದಾಗಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆಯ ಸಂಪೂರ್ಣ ವಿಡಿಯೋ ನನ್ನಲ್ಲಿ ಲಭ್ಯವಿದೆ. ನಾನು ಇದನ್ನು ನ್ಯಾಯಾಲಯ ಹಾಗೂ ರಾಜ್ಯಪಾಲರ ಗಮನಕ್ಕೆ ತರಲಿದ್ದೆನೆ. ನಾನು ಹೆಲ್ಮೆಟ್ ಧರಿಸದಿದ್ದರೆ ಖಂಡಿತವಾಗಿ ನಾನು ಸತ್ತು ಹೋಗುತ್ತಿದೆ ಎಂದು ಹೇಳಿದ್ದಾರೆ.
ಕೊಲೆಗಾರರು ಆಡಳಿತದಲ್ಲಿದ್ದಾರೆ: ಮಮತಾ
ತನ್ನ ಅಳಿಯ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ಪಕ್ಷ ಕೊಲೆಗಾರರ ಪಕ್ಷವಾಗಿದೆ ಇಲ್ಲಿ ಅಧಿಕಾರದಲ್ಲಿರುವ ಎಲ್ಲರೂ ಕೊಲೆಗಾರರೇ ಆಗಿದ್ದಾರೆ.
ರಾಜಕೀಯವನ್ನು ರಾಜಕೀಯವಾಗಿ ಮಾಡಬೇಕು, ಅದನ್ನು ಬಿಟ್ಟು ಕೊಲೆ, ಹಲ್ಲೆ, ಆಯುಧಗಳ ಮೂಲಕ ರಾಜಕೀಯ ಮಾಡಬಾರದು. ಒಂದು ವೇಳೆ ಅಭಿಷೇಕ್ ಹೆಲ್ಮೆಟ್ ಧರಿಸದಿದ್ದರೆ ಅವನು ಖಂಡಿತ ಕೊಲೆಯಾಗುತ್ತಿದ್ದ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ, (ಏಜನ್ಸೀಸ್).