ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
ಗುವಾಹಟಿ: ನೆರೆಯ ದೇಶ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆ ಅಸ್ಸಾಂ ಹೈ ಅಲರ್ಟ್‌ನಲ್ಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Biswa Sharma) ಸೋಮವಾರ (ಡಿ.22) ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳನ್ನು ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದಿದ್ದಾರೆ. ಅಲ್ಲದೆ, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿ ಜೀವಂತವಾಗಿ ಸುಡುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ, ಪ್ರಸ್ತುತ ಬಾಂಗ್ಲಾದೇಶದಲ್ಲಿ ಅಧಿಕಾರದಲ್ಲಿರುವವರು ಈಶಾನ್ಯ ಭಾರತವನ್ನು ತಮ್ಮ ದೇಶದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬಾಂಗ್ಲಾದ ಜನರು ವಿಭಿನ್ನ ಸಮಯಗಳಲ್ಲಿ ಅಸ್ಸಾಂಗೆ ಪ್ರವೇಶಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಮತ್ತು ರಾಜ್ಯವು ಈ ಜನರಿಂದ ತುಂಬಿದೆ ಎಂದು ಶರ್ಮಾ ಪ್ರತಿಪಾದಿಸಿದ್ದಾರೆ. ಈ ಸಮಯದಲ್ಲಿ ನಾವು ಜಾಗರೂಕರಾಗಿರಬೇಕು ಮತ್ತು ಆ ದೇಶದಲ್ಲಿನ ಬೆಳವಣಿಗೆಗಳ ಮೇಲೆ ತೀಕ್ಷ್ಣವಾದ ನಿಗಾ ಇಡಬೇಕು. ಬಾಂಗ್ಲಾದಲ್ಲಿನ ನಾಯಕರು ಈಶಾನ್ಯ ಭಾರತವನ್ನು ನೆರೆಯ ದೇಶದೊಂದಿಗೆ ವಿಲೀನಗೊಳಿಸಬೇಕೆಂದು ಪದೇಪದೆ ಹೇಳುತ್ತಿದ್ದಾರೆ. ಅದು ಬೇಜವಾಬ್ದಾರಿ ಮತ್ತು ಅಪಾಯಕಾರಿಯಾಗುತ್ತದೆ ಎಂದು ತಿಳಿಯಬೇಕು. ಭಾರತ ಈ ಬಗ್ಗೆ ಮೌನವಾಗಿರುವುದಿಲ್ಲ ಎಂದು ಶರ್ಮಾ ಕಳೆದ ವಾರ ಹೇಳಿಕೊಂಡಿದ್ದರು.
ಭಾರತವು ಬಹಳ ದೊಡ್ಡ ದೇಶವಾಗಿದ್ದು, ಪರಮಾಣು ರಾಷ್ಟ್ರ ಮತ್ತು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಬಾಂಗ್ಲಾವು ಅದರ ಬಗ್ಗೆ ಹೇಗೆ ಯೋಚಿಸಲು ಸಾಧ್ಯ?'' ಎಂದು ಶರ್ಮಾ ಹೇಳಿದ್ದರು.
ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿಯ ಮರಣದ ನಂತರ ಬಾಂಗ್ಲಾದೇಶವು ಹೊಸ ಅಶಾಂತಿಯ ಅಲೆಯನ್ನು ಆರಂಭವಾಗಿದೆ. ಅಲ್ಲದೆ, ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದನು. ಅಕ್ರಮ ವಲಸೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಬೆದರಿಕೆಗಳನ್ನು ತಡೆಗಟ್ಟಲು ಅಸ್ಸಾಂನ ಕ್ಯಾಚರ್ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಿಷೇಧಾಜ್ಞೆಗಳು ಜಾರಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾ ಹಿಂದೂಗಳ ಮೇಲಿನ ದಾಳಿಗೆ ಯೂನಸ್ ಕಾರಣ: ಹಸೀನಾ
ಬಾಂಗ್ಲಾ ಹಿಂದೂಗಳ ಮೇಲಿನ ದಾಳಿಗೆ ಬಗ್ಗೆ ಮಾತನಾಡಿರುವ ಮಾಜಿ ಪ್ರಧಾನಿ ಹಸೀನಾ, ಕೆಲವು ಮೂಲಭೂತವಾದಿ ಶಕ್ತಿಗಳು ಬಹಿರಂಗವಾಗಿ ಹಿಂಸಾಚಾರದಲ್ಲಿ ತೊಡಗಿದ್ದು, ಭಾರತೀಯ ರಾಯಭಾರ ಕಚೇರಿ, ಮಾಧ್ಯಮ ಕಚೇರಿಗಳು ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಿವೆ. ಯೂನಸ್ ಸರ್ಕಾರ ಈ ವ್ಯಕ್ತಿಗಳನ್ನು ರಕ್ಷಿಸುತ್ತಿದೆ ಮತ್ತು ಶಿಕ್ಷೆಗೊಳಗಾದ ಭಯೋತ್ಪಾದಕರನ್ನು ಬಿಡುಗಡೆ ಮಾಡುತ್ತಿದೆ ಎಂದಿದ್ದಾರೆ. ಮಧ್ಯಂತರ ಸರ್ಕಾರ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದೆ ಮತ್ತು ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ವಿಫಲವಾಗಿದ್ದು, ಯೂನಸ್ ಸರ್ಕಾರದ ನೀತಿಗಳು ಉಭಯ ದೇಶಗಳ ನಡುವಿನ ಸಂಬಂಧವನ್ನು ಹದಗೆಡಿಸಿವೆ ಎಂದು ಹೇಳಿದ್ದಾರೆ.
ಬಾಂಗ್ಲಾದಲ್ಲಿ ಬೆಳೆಯುತ್ತಿರುವ ಮೂಲಭೂತವಾದ ದಕ್ಷಿಣ ಏಷ್ಯಾಕ್ಕೆ ಮಾರಕ
ಬಾಂಗ್ಲಾದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಮತ್ತು ಹಿಂಸಾಚಾರ ಸಾಮಾನ್ಯವಾಗಿದೆ ಎಂದ ಹಸೀನಾ, ಮೂಲಭೂತ ಇಸ್ಲಾಮಿಕ್ ಸಂಘಟನೆಗಳ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಸೀನಾ ಇದು ಕೇವಲ ಬಾಂಗ್ಲಾದೇಶಕ್ಕೆ ಮಾತ್ರವಲ್ಲದೆ ಇಡೀ ದಕ್ಷಿಣ ಏಷ್ಯಾಕ್ಕೆ ಅಪಾಯವನ್ನು ಉಂಟುಮಾಡುತ್ತವೆ. ಅಲ್ಲದೆ, ಯೂನಸ್ ಸರ್ಕಾರವು ದೇಶದೊಳಗಿನ ಉಗ್ರಗಾಮಿಗಳಿಗೆ ಅಧಿಕಾರ ನೀಡಿ ಅವರನ್ನು ಪೋಷಿಸುತ್ತಿದ್ದಾರೆ ಎಂದು ಹಸೀನಾ ಕಿಡಿಕಾರಿದ್ದಾರೆ.
ಸದ್ಯಕ್ಕೆ ಬಾಂಗ್ಲಾದೇಶಕ್ಕೆ ಹಿಂತಿರುಗುವುದಿಲ್ಲ
ಹಸೀನಾ ಅವರು ತಮ್ಮ ದೇಶಕ್ಕೆ ತಕ್ಷಣ ಹಿಂತಿರುಗುವುದಿಲ್ಲ ಎಂದು ಹೇಳಿದ್ದು, ತಮ್ಮ ವಿರುದ್ಧದ ಪ್ರಸ್ತುತ ಕ್ರಮಗಳು ನ್ಯಾಯದಿಂದಲ್ಲ ಬದಲಾಗಿ ರಾಜಕೀಯ ಪ್ರೇರಿತವಾಗಿವೆ ಎಂದು ಹೇಳಿದರು. ಬಾಂಗ್ಲಾದೇಶದಲ್ಲಿ ಸರಿಯಾದ ಸರ್ಕಾರ ರಚನೆಯಾಗುವವರೆಗೆ ಮತ್ತು ನ್ಯಾಯಾಲಯಗಳು ಸ್ವತಂತ್ರವಾಗುವವರೆಗೆ ಅವರ ಮರಳುವಿಕೆ ಅಸಾಧ್ಯ ಎಂದು ಹೇಳಿದರು.
ಯೂನಸ್ ಸರ್ಕಾರಕ್ಕೆ ಯಾವುದೇ ನ್ಯಾಯಸಮ್ಮತೆ ಇಲ್ಲ
ನನಗೆ ಇದೆಲ್ಲದರ ಹೊರತಾಗಿಯೂ ದೇಶದ ಸಂವಿಧಾನದಲ್ಲಿ ನಂಬಿಕೆಯಿದೆ. ಪ್ರಜಾಪ್ರಭುತ್ವ ಮರಳಿ, ನ್ಯಾಯಾಲಯಗಳು ಸ್ವತಂತ್ರವಾದಾಗ ಮಾತ್ರ ನಿಜವಾದ ನ್ಯಾಯವನ್ನು ಪೂರೈಸಲಾಗುತ್ತದೆ ಎಂದು ಅವರು ಹೇಳಿದರು. ಪ್ರಸ್ತುತ ಇರುವ ಮಧ್ಯಂತರ ಸರ್ಕಾರದ ಜನರಿಂದ ಆಯ್ಕೆಯಾಗಿಲ್ಲದ ಕಾರಣ ಅದಕ್ಕೆ ಯಾವುದೇ ಪ್ರಜಾಪ್ರಭುತ್ವದ ನ್ಯಾಯಸಮ್ಮತತೆ ಇಲ್ಲ, ಈ ಸರ್ಕಾರ ದೇಶವನ್ನು ಅಸ್ಥಿರತೆಯತ್ತ ಕೊಂಡೊಯ್ಯುತ್ತಿದೆ ಎಂದರು,(ಏಜನ್ಸೀಸ್).