Rahul Gandhi | ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಕಣ ರಂಗೇರಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಸಭೆ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಇಂಗ್ಲಿಷ್‌ನಲ್ಲಿ ನಡೆಸಿದ ವಾಗ್ದಾಳಿಯು, ತಮಿಳು ಅನುವಾದದ ವೇಳೆಗೆ ಸಂಪೂರ್ಣವಾಗಿ ಹಳಿ ತಪ್ಪಿ ಹೋದ ಘಟನೆ ನಡೆದಿದೆ.
ಕಾಂಗ್ರೆಸ್‌ನ ತಮಿಳುನಾಡು ಘಟಕದ ಮುಖ್ಯಸ್ಥ ಕೆ. ಸೆಲ್ವಪೆರುಂಥಗೈ ಮಾಡಿದ ಅನುವಾದವು ರಾಹುಲ್ ನೀಡಲು ಬಯಸಿದ ಸಂದೇಶಕ್ಕೇ ವಿರುದ್ಧವಾಗಿ ಕೇಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರಕ್ಕೆ ಸುಳ್ಳು ಹೇಳಿದೆ ಎಂದರೆ, ಅದನ್ನು ತಮಿಳಿಗೆ ಅನುವಾದಿಸಿದ ಸೆಲ್ವಪೆರುಂಥಗೈ, ರಾಷ್ಟ್ರವು ಅಭಿವೃದ್ಧಿ ಹೊಂದುತ್ತದೆ ಎಂದು ಅವರು ಹೇಳುತ್ತಾರೆ ಎಂದು ಅರ್ಥವನ್ನೇ ಬದಲಿಸಿದರು. ಅಂದರೆ, ರಾಹುಲ್ ಮಾಡಿದ ಆರೋಪವು ಅನುವಾದಕರ ಬಾಯಲ್ಲಿ ಪ್ರಧಾನಿಯವರ ಮೇಲಿನ ಮೆಚ್ಚುಗೆಯಂತೆ ಕೇಳಿಸಿತು. ಇದೇ ರೀತಿ ರಾಹುಲ್ ಪ್ರಧಾನಿಗೆ ಆತ್ಮವಿಶ್ವಾಸದ ಕೊರತೆಯಿದೆ ಎಂದು ಹೇಳಿದರೆ, ತಮಿಳಿನಲ್ಲಿ ಅದು ಪೂರ್ಣ ಆತ್ಮವಿಶ್ವಾಸ ಹೊಂದಿದ್ದಾರೆ ಎಂದು ರೂಪಾಂತರಗೊಂಡಿತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿಯವರನ್ನು ನಿಯಂತ್ರಿಸುತ್ತಿದ್ದಾರೆ ಎಂಬ ರಾಹುಲ್ ಆರೋಪವಂತೂ ಅನುವಾದದಲ್ಲಿ ಹದಗೆಟ್ಟು ಹೋಯಿತು. ಅವರು ಅಮೆರಿಕದಿಂದ ನಿಯಂತ್ರಿಸಲ್ಪಡುತ್ತಾರೆ ಎಂಬ ರಾಹುಲ್ ಮಾತಿಗೆ ಸೆಲ್ವಪೆರುಂಥಗೈ, ನಾವು ಸಂಯುಕ್ತ ಭಾರತವನ್ನು ನೋಡುತ್ತೇವೆ ಎಂದು ಹೇಳುವ ಮೂಲಕ ಭಾಷಣದ ಗಂಭೀರತೆಯನ್ನೇ ಗಾಳಿಗೆ ತೂರಿದರು. ಟ್ರಂಪ್ ಪ್ರಧಾನಿಗೆ ಜಿಗಿಯಲು ಹೇಳಿದರೆ ಅವರು ಜಿಗಿಯುತ್ತಾರೆ, ಮಲಗಲು ಹೇಳಿದರೆ ಮಲಗುತ್ತಾರೆ ಎಂಬ ಪಂಚ್‌ಲೈನ್ ಕೂಡ ತಮಿಳಿನಲ್ಲಿ ಗೊಂದಲಮಯವಾಗಿ ವ್ಯಕ್ತವಾಯಿತು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಿಖರವಾದ ಅನುವಾದವು ಅತ್ಯಂತ ಮುಖ್ಯವಾಗಿರುತ್ತದೆ. ಆದರೆ ಇಲ್ಲಿ ರಾಹುಲ್ ಗಾಂಧಿ ತೀಕ್ಷ್ಣ ಟೀಕೆಗಳು ಅನುವಾದಕರ ಎಡವಟ್ಟಿನಿಂದಾಗಿ ಹಾಸ್ಯಾಸ್ಪದವಾಗಿ ಮಾರ್ಪಟ್ಟವು. ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿ ಇರುವಾಗ, ಸ್ವಪಕ್ಷದ ನಾಯಕನಿಂದಲೇ ಆದ ಇಂತಹ ಪ್ರಚಾರದ ದೋಷವು ಕಾಂಗ್ರೆಸ್‌ಗೆ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ. ಇದು ಕೇವಲ ಭಾಷಾಂತರದ ಸಮಸ್ಯೆಯಾಗಿ ಉಳಿಯದೆ, ಒಂದು ಪೂರ್ಣ ಪ್ರಮಾಣದ ರಾಜಕೀಯ ಪ್ರಮಾದವಾಗಿ ಬದಲಾಗಿದೆ(ಏಜೆನ್ಸೀಸ್).