Mumbai Man Bites Owner Finger(AI Image)
ಮುಂಬೈ; ಆನ್ಲೈನ್ನಲ್ಲಿ ಹಣಪಾವತಿ ಮಾಡುವ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿದ್ದರಿಂದ, ಗ್ರಾಹಕನೊಬ್ಬ ಅಂಗಡಿ ಮಾಲೀಕನ ಕೈ ಕಚ್ಚಿ, ಗಂಭೀರ ಗಾಯ ಮಾಡಿದ ಘಟನೆ ಮಹಾರಾಷ್ಟ್ರದ ಆರ್ಥಿಕ ನಗರಿ ಮುಂಬೈನ ಮಲಾಡ್ನಲ್ಲಿ ನಡೆದಿದೆ.
ಲಕ್ಷ್ಮೀಧರ್ ಮಂಗಲ್ ಮಲ್ಲಿಕ್ ಎಂಬಾತ ಹೋಟೆಲ್ ಮಾಲೀಕ ರಂಜಿತ್ ಹರಿವಾಂಶ್ ಸಿಂಗ್ರ ಮಧ್ಯದ ಬೆರಳು ಕಚ್ಚಿದ ಆರೋಪಿ ಎಂದು ಗುರುತಿಸಲಾಗಿದೆ. ಸದ್ಯ ಹೋಟೇಲ್ ಮಾಲೀಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಏನಿದು ಘಟನೆ, ನಡೆದಿದ್ದೇನು?
ಶಿವಾಜಿ ಚೌಕ್‌ನಲ್ಲಿರುವ ರಂಜಿತ್ ಹರಿವಾಂಶ್ ಸಿಂಗ್ರ ಹೋಟೆಲ್ನಿಂದ ಲಕ್ಷ್ಮೀಧರ್ ಮಂಗಲ್ ಮಲ್ಲಿಕ್ ಶನಿವಾರ ರಾತ್ರಿ ಸಮೋಸ ಮತ್ತು ಕಟ್ಲೇಟ್ ಖರೀದಿ ಮಾಡಿದ್ದನು. ಎಲ್ಲ ತಿಂದು ಮುಗಿಸಿದ ನಂತರ ಬಿಲ್ ಇಷ್ಟಿದೆ ಎಂದು ಅಂಗಡಿ ಮಾಲೀಕನ ಮಗ ಹೇಳಿದರು. ಲಕ್ಷ್ಮೀಧರ್ ಆನ್ಲೈನ್ನಲ್ಲಿ ಹಣ ಪಾವತಿ ಮಾಡಲು ಮುಂದಾದಾಗ. ಇಲ್ಲಿ ಆನ್ಲೈನ್ ಪಾವತಿ ಮಾಡುವಂತಿಲ್ಲ. ನಗದು ಮಾತ್ರ ಎಂದು ಹೇಳಿದರು.
ಅಂಗಡಿ ಮಾಲೀಕನ ಮಗ ಆನ್ಲೈನ್ ಪಾವತಿಗೆ ಸುತರಾಂ ಒಪ್ಪದೇ ನಗದು ಬೇಕೆಂದು ಕೂಗಾಡಿದನು. ಎಷ್ಟೇ ಕೇಳಿಕೊಂಡರು ಜಗ್ಗದಿದ್ದನ್ನು ಕಂಡ ಮಲ್ಲಿಕ್ ಸಿಟ್ಟಾದ. ಇಬ್ಬರ ಮಧ್ಯೆಯೂ ಮಾತಿನ ಚಕಮಕಿ ಜೋರಾಯಿತು. ಹೋಟೆಲ್ ಮಾಲೀಕನ ಮೇಲಿನ ಸಿಟ್ಟನ್ನು ತೀತರಿಸಿಕೊಳ್ಳಲು ಸಿಬ್ಬಂದಿಯನ್ನು ಬೈಯತೊಡಗಿದ. ಜಗಳ ಶಾಂತಿಗೊಳಿಸುವ ನಿಟ್ಟಿನಲ್ಲಿ ರಂಜಿತ್ ಹರಿವಾಂಶ್ ಸಿಂಗ್ ಮಧ್ಯ ಪ್ರವೇಶಿಸಿ ಮಲ್ಲಿಕ್ ಜೊತೆ ಮಾತನಾಡಿ, ಶಾಂತರೂಪದಲ್ಲಿಯೇ ತಾಳ್ಮೆಯಿಂದ ಮಾತನಾಡಿದರು. ದಯವಿಟ್ಟು ಹೊರಹೋಗಿ ಎಂದು ಹೇಳಿದ್ದಾರೆ.
ಗ್ರಾಹಕ ವಶಕ್ಕೆ
ಇದರಿಂದ ಇನ್ನಷ್ಟು ಕುಪಿತಗೊಂಡ ಲಕ್ಷ್ಮೀಧರ್ ಮಂಗಲ್ ಮಲ್ಲಿಕ್ ಮುಂದೆಯಿದ್ದ ಸಿಂಗ್ರ ಕೈ ಬೆರಳು ಕಚ್ಚಿದ. ನೋವು ತಾಳಲಾರದೆ ಸಿಂಗ್ ಚೀರಾಡಿದಾಗ, ಮತ್ತಷ್ಟು ಬೆರಳು ಕಚ್ಚಲು ಶುರು ಮಾಡಿದ. ಈತನ ಹುಚ್ಚಾಟ ನಿಲ್ಲಿಸಲು ಹೋಟೆಲ್ನಲ್ಲಿದ್ದ ಸಿಬ್ಬಂದಿ ಮುಂದಾದರು. ಕೂಡಲೇ ರಂಜಿತ್ ಹರಿವಾಂಶ್ ಸಿಂಗ್ರನ್ನು ಆಸ್ಪತ್ರೆಗೆ ಸೇರಿಸಿದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬಂದ ಮುಂಬೈ ಪೊಲೀಸರು, ಹುಚ್ಚಾಟ ಮೆರೆದ ಮಲ್ಲಿಕ್ನನ್ನು ವಶಕ್ಕೆ ಪಡೆದುಕೊಂಡರು. ಆತನ ವಿರುದ್ಧ ಹಲವು ಸಕ್ಷನ್ಗಳ ಪ್ರಕರಣ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ, (ಏಜೆನ್ಸೀಸ್).