Road Accident (ಸಾಂದರ್ಭಿಕ ಚಿತ್ರ)
ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ (Road Accident) ಅಪಘಾತವೊಂದು ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕದ ಬಾವಿಗೆ ಉರುಳಿದ ಪರಿಣಾಮ, ಕನಿಷ್ಠ ಒಂಬತ್ತು ಜನರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರೆಲ್ಲರೂ ಒಂದೇ ಕುಟುಂಬದ ಸದಸ್ಯರಾಗಿದ್ದರು ಎಂದು ತಿಳಿದುಬಂದಿದೆ.
ಮೃತರನ್ನು ಸುನಿಲ್ ದರ್ಗೋಡೆ, ರಾಖಿ ಸುನಿಲ್ ದರ್ಗೋಡೆ, ಉಷಾ ಅನಿಲ್ ದರ್ಗೋಡೆ, ಶ್ರದ್ಧಾ ಅನಿಲ್ ದರ್ಗೋಡೆ ಮತ್ತು ಶ್ರಾವಣಿ ಅನಿಲ್ ದರ್ಗೋಡೆ ಎಂದು ಗುರುತಿಸಲಾಗಿದ್ದು, ಉಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕುಟುಂಬದ ಎಲ್ಲಾ ಸದಸ್ಯರು ದಿಂಡೋರಿ ತಾಲ್ಲೂಕಿನ ಇಂದೋರ್ ಗ್ರಾಮದ ನಿವಾಸಿಗಳಾಗಿದ್ದರು. ರಾತ್ರಿ ವೇಳೆಯಲ್ಲಿ ರಸ್ತೆ ಸರಿಯಾಗಿ ಕಾಣಿಸದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಅಲ್ಲೇ ಬದಿಗಿದ್ದ ಬಾವಿಗೆ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ.
ಅಪಘಾತ ಆಗಿದ್ದೇಗೆ?
ಮೃತ ದರ್ಗೋಡ್ ಕುಟುಂಬಸ್ಥರು ಖಾಸಗಿ ಕೋಚಿಂಗ್ ಸೆಂಟರ್ ಆಯೋಜಿಸಿದ್ದ ವಿಶೇಷ ಸಾಮಾಜಿಕ ಕಾರ್ಯಕ್ರಮವೊಂದಕ್ಕೆ ತೆರಳಿದ್ದು, ಅಲ್ಲಿಂದ ವಾಪಾಸ್ಸಾಗುವ ಸಮಯದಲ್ಲಿ ಈ ಘಟನೆ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಎನ್‌ಡಿಆರ್‌ಎಫ್ ಕಾರ್ಯಾಚರಣೆ ನಡೆಸುತ್ತಿದ್ದು, ಬಾವಿಯಲ್ಲಿ ಸಿಲುಕಿರುವ ಮೃತ ದೇಹವನ್ನು ಹೊರ ತೆಗೆಯಲು ಹರಸಾಹಸ ಪಡುತ್ತಿದ್ದಾರೆ.
ರಕ್ಷಣಾ ಕಾರ್ಯಕ್ಕೆ ಜನಸಂದಣಿ ಅಡ್ಡಿ
ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಹಳ್ಳಿಯ ಜನರು ಅಪಘಾತದ ಸ್ಥಳಕ್ಕೆ ಜಮಾಯಿಸಿದರು. ಕಿರಿದಾದ ರಸ್ತೆ ಮತ್ತು ಬಾವಿಯ ಸುತ್ತಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ, ರಕ್ಷಣಾ ವಾಹನಗಳು ಮತ್ತು ಎನ್‌ಡಿಆರ್‌ಎಫ್ ತಂಡದ ಸಲಕರಣೆಗಳನ್ನು ಸ್ಥಳಕ್ಕೆ ತಲುಪಿಸಲು ಭಾರಿ ತೊಂದರೆಯಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನಿಖೆಯ ಹಾದಿ
ಸದ್ಯಕ್ಕೆ ಒಂಬತ್ತೂ ಮಂದಿಯ ಶವಗಳನ್ನು ಬಾವಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಸಾವಿಗೆ ಬಾವಿಯ ಬಳಿ ಸಂರಕ್ಷಣಾ ಗೋಡೆಗಳು ಇಲ್ಲದಿರುವುದು ಅಥವಾ ಸುರಕ್ಷತೆಯ ವೈಫಲ್ಯದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).