ದೆಹಲಿ: ಕೇಂದ್ರ ಸರ್ಕಾರ ಸಂಸತ್ತಿನ ಚಳಿಗಾಲದ ಅಧಿವೇಶನದ ಅವಧಿಯನ್ನು ಕಡಿತಗೊಳಿಸುವ ಮೂಲಕ ಮತದಾರರ ಪಟ್ಟಿಯ ಪರಿಷ್ಕರಣೆಯ ಕುರಿತಾದ ಚರ್ಚೆಯನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಸಿದ್ದು, ಒಂದು ವೇಳೆ ಸರ್ಕಾರ ಈ ಹೀಗೆ ಮಾಡಿದ್ದೇ ಆದಲ್ಲಿ ವಿಪಕ್ಷಗಳು ಸುಗಮ ಕಲಾಪಕ್ಕೆ ಅವಕಾಶ ನೀಡಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ, ಸಂಸದ ರಾಮ್ ಗೋಪಾಲ್ ಯಾದವ್ ತಿಳಿಸಿದ್ದಾರೆ.
ಇತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕೂಡ ಎಸ್‌ಐಆರ್ ಕುರಿತಾದ ಚರ್ಚೆಗೆ ಅಧಿವೇಶನ ಆರಂಭಕ್ಕೂ ಒಂದು ದಿನ ಮುಂಚಿತವಾಗಿಯೇ ಪಟ್ಟು ಹಿಡಿದಿದ್ದು, ಟಿಎಂಸಿ ಅನೇಕ ದಿನಗಳಿಂದ ಪಟ್ಟಿ ಪರಿಷ್ಕರಣೆಯನ್ನು ನಿರಂತರವಾಗಿ ಟೀಕಿಸುತ್ತಲೇ ಬಂದಿದೆ ಮತ್ತು ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಹ ನೀಡಿ, ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಒತ್ತಡದಿಂದಾಗಿ ಸುಮಾರು 40 ಬೂತ್ ಮಟ್ಟದ ಅಧಿಕಾರಿಗಳು ಸಾವಿಗೀಡಾಗಿದ್ದಾರೆ, ಎಸ್‌ಐಆರ್ ಬಗ್ಗೆ ನಮ್ಮದು ಯಾವುದೇ ತಕರಾರು ಇಲ್ಲ, ಆದರೆ, ಪ್ರಕ್ರಿಯೆ ವಿಧಾನದ ಬಗ್ಗೆ ನಮ್ಮ ಆಕ್ಷೇಪವಿದೆ ಎಂದು ಟಿಎಂಸಿ ನಾಯಕರು ಆರೋಪಿಸಿದ್ದಾರೆ. ನವೆಂಬರ್ 10 ರಂದು ದೆಹಲಿ ಕೆಂಪು ಕೋಟೆಯ ಬಳಿ ನಡೆದ ಸ್ಫೋಟದ ಕುರಿತಂತೆ, ರಾಷ್ಟ್ರೀಯ ಭದ್ರತೆಯ ವಿಚಾರವಾಗಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸಬೇಕೆಂದು ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳು ಭಾನುವಾರ ಒತ್ತಾಯಿಸಿವೆ.
ಗೌರವ್ ಗೊಗೊಯ್ ಹೇಳಿದ್ದೇನು..?
ದೆಹಲಿಯಲ್ಲಿನ ವಾಯು ಮಾಲಿನ್ಯ, ರೈತರಿಗೆ ಆರ್ಥಿಕ ಭದ್ರತೆ ಭದ್ರತೆಯ ಬಗ್ಗೆಯೂ ಚರ್ಚೆ ನಡೆಸಲು ಇಚ್ಛಿಸಿದೆ ಎಂದು ಲೋಕಸಭೆಯ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಮಾಧ್ಯಮಗಳಿಗೆ ತಿಳಿಸಿದರು.
ನಾವು ವಿದೇಶಾಂಗ ನೀತಿಯ ವಿಷಯವನ್ನೂ ಎತ್ತಿದ್ದೇವೆ, ಭಾರತವು ಇತರ ದೇಶಗಳ ಆಧಾರದ ಮೇಲೆ ತನ್ನ ವಿದೇಶಾಂಗ ನೀತಿಯನ್ನು ರೂಪಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ಗೊಗೊಯ್, ನಾವು ರಷ್ಯಾದಿಂದ ತೈಲ ಖರೀದಿಸುವುದನ್ನು ಯಾರೋ ಇಷ್ಟಪಡುವುದಿಲ್ಲ. ಇನ್ನೊಂದು ದೇಶವು ತನ್ನ ರಕ್ಷಣೆಯಲ್ಲಿ ಹೂಡಿಕೆ ಮಾಡುತ್ತಿದೆ, ಅದಕ್ಕೆ ನಾವು ಸಿದ್ಧರಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಡಳಿತಾರೂಢ ಬಿಜೆಪಿ, ಅಧಿವೇಶನವನ್ನು ಕಡಿಮೆ ಮಾಡಿ, ಚರ್ಚೆಯ ಸಮಯವನ್ನು ಕಡಿತಗೊಳಿಸುವ ಮೂಲಕ ಪ್ರಜಾಪ್ರಭುತ್ವದ ತತ್ವಗಳನ್ನು ದುರ್ಬಲಗೊಳಿಸುತ್ತಿದೆ, ಇದು ಸಂಸತ್ತಿನೊಳಗಿನ ಚರ್ಚೆಗಳನ್ನು ಸೀಮಿತಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಮುಗಿಸುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದ್ದಾರೆ.
ಈ ಅಧಿವೇಶನ ಕೇವಲ 19 ದಿನಗಳ ಕಾಲ ನಡೆಯಲಿದ್ದು, ಅದರಲ್ಲಿ 15 ದಿನಗಳ ಚರ್ಚೆ ಮಾತ್ರ ಸಾಧ್ಯ. ಇದು ಇದುವರೆಗಿನ ಅತ್ಯಂತ ಕಡಿಮೆ ಚಳಿಗಾಲದ ಅಧಿವೇಶನವಾಗಿರಬಹುದು. ಸರ್ಕಾರವೇ ಸಂಸತ್ತಿನ ಹಳಿತಪ್ಪಿಸಲು ಬಯಸಿದಂತೆ ಕಾಣುತ್ತಿದೆ, ಎಲ್ಲಾ ವಿರೋಧ ಪಕ್ಷಗಳು ಈ ವಿಷಯದ ಕುರಿತಾಗಿ ಒಗ್ಗಟ್ಟಾಗಿದ್ದೇವೆ. ನಾಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಇಂಡಿಯಾ ಒಕ್ಕೂಟದ ಎಲ್ಲಾ ಮಿತ್ರಪಕ್ಷಗಳ ಸಭೆ ನಡೆಸುತ್ತೇವೆ ಎಂದು ಹೇಳಿದರು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತು...
ಚಳಿಗಾಲದ ಅಧಿವೇಶನದಲ್ಲಿ ಸುಗಮ ಕಲಾಪಕ್ಕಾಗಿ ಕೇಂದ್ರ ಸರ್ಕಾರ ವಿರೋಧ ಪಕ್ಷಗಳೊಂದಿಗೆ ತೊಡಗಿಸಿಕೊಳ್ಳಲು ಬದ್ಧವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿಕೆ ನೀಡಿದ್ದಾರೆ. ಸಂಸತ್ತು ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ, ಅದು ರಾಷ್ಟ್ರಕ್ಕೆ ಸೇರಿದ್ದು, ಆದ್ದರಿಂದ ವಿರೋಧ ಪಕ್ಷಗಳ ನಾಯಕರು ಎಲ್ಲ ರೀತಿಯಲ್ಲೂ ಸಹಕರಿಸುವಂತೆ ಮನವಿ ಮಾಡಿದರು.
ನಾವು ವಿರೋಧ ಪಕ್ಷದ ಮಾತುಗಳನ್ನು ಸಕಾರಾತ್ಮಕ ಮನೋಭಾವದಿಂದ ಕೇಳಲು ಸಿದ್ಧರಿದ್ದೇವೆ. ಸಂಸತ್ತು ಇಡೀ ದೇಶಕ್ಕೆ ಸೇರಿದ್ದು, ಪ್ರತಿಯೊಂದು ವಿಷಯವನ್ನು ಇಲ್ಲಿ ಚರ್ಚಿಸಲು ಅವಕಾಶವಿದೆ, ಆದರೆ ಅದಕ್ಕೆ ಒಂದು ನಿರ್ದಿಷ್ಟ ಕಾರ್ಯವಿಧಾನವಿದೆ, ಅದರ ಪ್ರಕಾರವೇ ಎಲ್ಲ ನಡೆಯಲಿ ಎಂದು ಹೇಳಿದರು. ಸೋಮವಾರದಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನವು ಡಿಸೆಂಬರ್ 19 ರಂದು ಮುಕ್ತಾಯಗೊಳ್ಳಲಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಸಂಕ್ಷಿಪ್ತ ಚಳಿಗಾಲದ ಅಧಿವೇಶನಗಳಲ್ಲಿ ಒಂದಾಗಿದೆ(ಏಜೆನ್ಸೀಸ್).