ಕೋಲ್ಕತ್ತಾ: ಶಾಸಕರ ಮನೆಯ ಭದ್ರತೆಗೊಸ್ಕರ ನಿಯೋಜಿಸಲಾಗಿದ್ದ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡಿರುವ ಶಾಸಕ ಹುಮಾಯೂನ್ ಕಬೀರ್(Humayun Kabir) ಪುತ್ರನನ್ನು ಇಂದು(ಡಿ. 28) ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಶಕ್ತಿಪುರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಜುಮ್ಮಾ ಖಾನ್ ಎಂಬುವರು ದೂರು ನೀಡಿದ ಬಳಿಕ ಹುಮಾಯೂನ್ ಕಬೀರ್ ಅವರ ಪುತ್ರ ಗೋಲಂ ನಬಿ ಆಜಾದ್ ಅವರನ್ನು ಬಂಧಿಸಲಾಗಿದೆ. ಭಾನುವಾರ ಬೆಳಿಗ್ಗೆ ಕೆಲವು ದಿನಗಳ ರಜೆಗಾಗಿ ಅರ್ಜಿ ಸಲ್ಲಿಸಿದಾಗ ಶಾಸಕರ ಮಗ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಖಾನ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಆಜಾದ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ. ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನೂ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಹುಮಾಯೂನ್ ಕಬೀರ್, ಇಂದು ಬೆಳಗ್ಗೆ ನಮ್ಮ ಮನೆಯೊಳಗೆ ಪೊಲೀಸರು ಅಕ್ರಮವಾಗಿ ಪ್ರವೇಶಿಸಿದ್ದಕ್ಕೆ ನನ್ನ ಮಗ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಆದರೆ ನನ್ನ ಮಗನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ, ಅನುಚಿತ ವರ್ತನೆಯ ಆರೋಪ ಹೊರಿಸಿದ್ದಾರೆ ಎಂದು ಹೇಳಿದ್ದಾರೆ.
ಘಟನೆ ನಡೆದ ಸಮಯದಲ್ಲಿ ನಾನು ಮನೆಯಲ್ಲಿ ಇರಲಿಲ್ಲ. ತನ್ನ ಮಗನನ್ನು ಸುಳ್ಳು ಆರೋಪಗಳ ಅಡಿಯಲ್ಲಿ ಕಾನೂನು ಬಾಹಿರ ರೀತಿಯಲ್ಲಿ ಬಂಧಿಸಲಾಗಿದೆ. ಆತನನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ (ಏಜೆನ್ಸೀಸ್).