ಸಾಂದರ್ಭಿಕ ಚಿತ್ರ 
ದೇಶ

ಅಸ್ಸಾಂ ಮೂಲದ ವಲಸೆ ಮಹಿಳೆ ಮೇಲೆ ಗಂಡನ ಎದುರೇ ಸಾಮೂಹಿಕ ಅತ್ಯಾಚಾರ: ಮೂವರ ಬಂಧನ | Gang rape

ಚೆನ್ನೈ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶಿವಂತಿಪಟ್ಟಿ ಎಂಬಲ್ಲಿ ಅಸ್ಸಾಂ ಮೂಲದ ವಲಸೆ ಮಹಿಳೆ ಮೇಲೆ ಆಕೆಯ ಗಂಡನ ಎದುರೇ ಸಾಮೂಹಿಕ ಅತ್ಯಾಚಾರ(Gang rape) ಮಾಡಿದ ಆರೋಪದ ಮೇಲೆ ಇಬ್ಬರು ಬಾಲಾಪರಾಧಿಗಳು ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಮಂಗಳವಾರ(ಡಿ. 16) ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಶ್ರೀವೈಕುಂಠಂ ಮಹಿಳಾ ಠಾಣೆ ಪೊಲೀಸರು, ಪ್ರಮುಖ ಆರೋಪಿ ಅಸ್ಸಾಂ ಮೂಲದ ಎ.ಮೊಹಮ್ಮದ್ ಮಕ್ಪುಲ್ ಹುಸೇನ್ ಎಂದು ಗುರುತಿಸಿದ್ದು, ತಿಸಾಯನ್‌ವಿಲೈನಲ್ಲಿ ಕಾರ್ಮಿಕ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾನೆ. ಆತನ ಜೊತೆಗೆ 16 ವರ್ಷ ವಯಸ್ಸಿನ ಇಬ್ಬರು ಬಾಲಕರು ವಾಸಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಮೊಹಮ್ಮದ್ ಇತ್ತೀಚೆಗೆ ಮಹಿಳೆ ಮತ್ತು ಆಕೆಯ ಪತಿಗೆ ಚೆರಾಕುಲಂನಲ್ಲಿರುವ ಪೇವರ್ ಬ್ಲಾಕ್ ಉತ್ಪಾದನಾ ಘಟಕದಲ್ಲಿ ಉದ್ಯೋಗ ವ್ಯವಸ್ಥೆ ಕೊಡಿಸಿದ್ದನು. ಆದರೆ ಕೆಲಸದ ಸ್ಥಳದಲ್ಲಿ ಸೌಲಭ್ಯಗಳು ಅಸಮರ್ಪಕವಾಗಿದ್ದ ಕಾರಣ ದಂಪತಿಗಳು ಕೆಲಸ ಬಿಟ್ಟು ಭಾನುವಾರ ಕೇರಳಕ್ಕೆ ತೆರಳಲು ನಿರ್ಧರಿಸಿದ್ದಾರೆ. ಈ ವೇಳೆ ಕಂಪನಿಯಿಂದ ಬಂದ ಮಾಹಿತಿಯಂತೆ ಏಜೆಂಟ್ ಮೊಹಮ್ಮದ್ ದಂಪತಿಗಳನ್ನು ಕೆಲಸ ಬಿಡದಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಇರಲು ಒಪ್ಪದೇ ಆಟೋದಲ್ಲಿ ಸ್ಥಳದಿಂದ ತೆರಳಿದ್ದಾರೆ.
ದಪತಿಗಳು ತಿರುನಲ್ವೇಲಿಯ ಕಡೆಗೆ ಹೋಗುತ್ತಿದ್ದಾಗ ಆರೋಪಿ ಮೊಹಮ್ಮದ್ ಮತ್ತು ಇಬ್ಬರು ಬಾಲಾಪರಾಧಿಗಳು ಅವರನ್ನು ಅಡ್ಡಗಟ್ಟಿ, ಶಿವಂತಿಪಟ್ಟಿಯ ಕಲಿಯುಗ ಮೆಯ್ಯನ್ನಾರ್ ಶಾಸ್ತ್ರ ದೇವಸ್ಥಾನದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ದಂಪತಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಮಹಿಳೆ ಮೇಲೆ ಮೂವರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಮಹಿಳೆ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ತಿರುನಲ್ವೇಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಹಿಳೆಯನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಮೂವರು ಆರೋಪಿಗಳ ವಿರುದ್ಧ ಪೊಲೀಸರು, ಬಿಎನ್‌ಎಸ್‌ನ ಸೆಕ್ಷನ್ 70 (ಸಾಮೂಹಿಕ ಅತ್ಯಾಚಾರ), 126(2), 115(2), 324(4), 351(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹತ್ತಿರದ ಹಳ್ಳಿಗಳಲ್ಲಿ ಶೋಧ ಕಾರ್ಯಾಚರಣೆಯ ನಂತರ, ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ (ಏಜೆನ್ಸೀಸ್).