Pawan Khera | ಕಾಂಗ್ರೆಸ್ ವಕ್ತಾರ ಪವನ್ ಖೇರಾ
ದಿಸ್ಪುರ್: ಅಸ್ಸಾಂ ರಾಜ್ಯದ ರಾಜಕೀಯ ಮತ್ತು ಸಾಂಸ್ಕೃತಿಕ ತಿರುಳನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟೊಳ್ಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಆರೋಪಿಸಿದ್ದಾರೆ.
ಗುವಾಹಟಿಯಲ್ಲಿ ಮಾತನಾಡಿದ ಖೇರಾ, ಸಿಎಂ ಶರ್ಮಾ ನೇತೃತ್ವದ ಸರ್ಕಾರ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ವ್ಯಾಪಿಸಲು ಅವಕಾಶ ಮಾಡಿಕೊಟ್ಟಿದ್ದು, ಒಂದು ಕಾಲದಲ್ಲಿ ಈ ಪ್ರದೇಶವನ್ನು ವ್ಯಾಖ್ಯಾನಿಸುತ್ತಿದ್ದ ಅಸ್ಸಾಮಿ ಗುರುತನ್ನೇ ದುರ್ಬಲಗೊಳಿಸಲಾಗುತ್ತಿದೆ ಎಂದು ಹೇಳಿದರು.
ಗಾಯಕ ಜುಬೀನ್ ಗರ್ಗ್ ಅವರಂತಹ ಸಾಂಸ್ಕೃತಿಕ ವ್ಯಕ್ತಿಗಳಿಂದ ರೂಪುಗೊಂಡಿದ್ದ ಅಸ್ಸಾಂನ ಜಾಗತಿಕ ಚಿತ್ರಣವು ಈಗ ಹದಗೆಟ್ಟಿದ್ದು, ಒಂದು ಕಾಲದಲ್ಲಿ ಚಹಾ, ಸಂಸ್ಕೃತಿ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದ್ದ ರಾಜ್ಯ ಇಂದು ಮಾದಕ ದ್ರವ್ಯ, ದನಗಳ ಕಳ್ಳಸಾಗಣೆ ಮತ್ತು ಭ್ರಷ್ಟಾಚಾರದಿಂದ ಸುದ್ದಿಯಾಗುತ್ತಿದೆ, ಈಗ ಎಬಿಸಿಡಿಯ ಅರ್ಥವೂ ಬದಲಾಗಿದೆ ಎಂದರು. ಬಿಜೆಪಿ ನೇತೃತ್ವದ ಸರ್ಕಾರವು ಚಹಾ ತೋಟದ ಕಾರ್ಮಿಕರ ಅನೇಕ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಬಂದಿದೆ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತಿದ್ದಾರೆ ಎಂದು ಆರೋಪಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ಸೆಳೆಯಲು ಅನಿವಾಸಿಗಳನ್ನು ರಾಜ್ಯಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಆರೋಪಿಸಿರುವ ಖೇರಾ, ಮತದಾರರಿಂದ ತುಂಬಿದ ಬಸ್ಸುಗಳು ಮತ್ತು ರೈಲುಗಳನ್ನು ಸಜ್ಜುಗೊಳ್ಳುವ ಸಾಧ್ಯತೆ ಇದೆ, ಇದು ಸ್ಥಳೀಯ ಅಸ್ಸಾಮಿ ಗುರುತಿಗೆ ನೇರ ಬೆದರಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಸ್ಸಾಂನ ಪ್ರಜಾಪ್ರಭುತ್ವ ಮತ್ತು ರಾಜಕೀಯ ಅಪಾಯದಲ್ಲಿದೆ, ತುಂಬಾ ತಡವಾಗುವ ಮುನ್ನ ಮತದಾರರು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ರನ್ನು ಈ ಪೀಳಿಗೆಯ ಬದಲಾವಣೆಯ ನಾಯಕ ಎಂದು ಬಣ್ಣಿಸಿದ ಖೇರಾ, ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅಧಿಕಾರಾವಧಿಯನ್ನೊಮ್ಮ ಮೆಲುಕು ಹಾಕಿದರು. ಪೊಲೀಸರು ಮತ್ತು ಚುನಾವಣಾ ಆಯೋಗದ ಬೆಂಬಲವಿಲ್ಲದೆ ಮುಖ್ಯಮಂತ್ರಿ ಶರ್ಮಾ ಸ್ವತಂತ್ರವಾಗಿ ಮುಂದುವರೆಯಲು ಸಾಧ್ಯವಿಲ್ಲ, ರಾಜ್ಯದಲ್ಲಿ ಬುಡಕಟ್ಟು ಜನಾಂಗದ ಭೂಮಿಯನ್ನು ಅದಾನಿ ಮತ್ತು ಅಂಬಾನಿ ಸೇರಿದಂತೆ ಕಾರ್ಪೊರೇಟ್ ಗುಂಪುಗಳಿಗೆ ವರ್ಗಾಯಿಸಲಾಗುತ್ತಿದೆ, ಕಳೆದ ಏಳು ವರ್ಷಗಳಲ್ಲಿ ಶರ್ಮಾ ಕುಟುಂಬವು ಗಳಿಸಿರುವ ಆಸ್ತಿಯನ್ನು ಜನತೆಯ ಮುಂದಿಡುವಂತೆ ಪವನ್ ಖೇರಾ ಸವಾಲ್ ಹಾಕಿದ್ದಾರೆ.
ಹಿಮಂತ್ ಬಿಸ್ವಾ ಶರ್ಮಾ ಬಿಜೆಪಿಗೆ ಸೇರಿದ ಬಳಿಕ ಅವರ ವಿರುದ್ಧದ ಪ್ರಕರಣಗಳು ಮ್ಯಾಜಿಕ್ ರೀತಿಯಲ್ಲಿ ಮುಚ್ಚಿಹಾಕಲಾಯಿತು. ಈ ಹಿಂದಿನ ಇಡಿ ಮತ್ತು ಸಿಬಿಐ ಪ್ರಕರಣಗಳನ್ನು ತೆಗೆದುಹಾಕಿದ್ದು ಹೇಗೆ..?, ಇದು ಕ್ಲಾಸಿಕ್ ವಾಷಿಂಗ್ ಮಷಿನ್ ರಾಜಕೀಯ ಎಂದು ಹೇಳಿದರು(ಏಜೆನ್ಸೀಸ್).