ಗುವಾಹಟಿ: ಅಸ್ಸಾಂ ಚುನಾವಣೆಯ ಪ್ರಚಾರ ಬಿರುಸಿನಿಂದ ಸಾಗಿದ್ದು, ಬುಧವಾರ(ಏ. 01) ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಅಸ್ಸಾಂನಲ್ಲಿ ಒಂದೇ ಕುಟುಂಬವು ಎಲ್ಲವನ್ನೂ ಲೂಟಿ ಹೊಡೆಯುತ್ತಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಸ್ಸಾಂನ ನಜೀರಾ ಕ್ಷೇತ್ರದ ಅಭ್ಯರ್ಥಿ ದೇಬಬ್ರತ ಸೈಕಿಯಾ ಪರವಾಗಿ ಪ್ರಚಾರ ನಡೆಸಿ ಮಾತನಾಡಿರುವ ಅವರು, ಒಂದು ಕುಟುಂಬ ಅಸ್ಸಾಂನಲ್ಲಿ ಎಲ್ಲವನ್ನೂ ಲೂಟಿ ಮಾಡುತ್ತಿದೆ. ಅವರು ಮಾಡದಿದ್ದಾಗ, ಗಣಿ, ಭೂಮಿ ಇತರೆ ಇತರ ಪ್ರತಿಯೊಂದು ಆಸ್ತಿಯನ್ನು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪ್ರತಿಯೊಂದು ರಂಗದಲ್ಲೂ ಭಾರಿ ಭ್ರಷ್ಟಾಚಾರ ನಡೆದಿದೆ. ಶಾರದಾ ಚಿಟ್ ಫಂಡ್, ಸ್ಮಾರ್ಟ್ ಸಿಟಿ ಹಾಗೂ ಎನ್‌ಸಿ ಹಿಲ್ಸ್‌ನಂತಹ ಹಲವಾರು ಹಳೆಯ ಹಗರಣಗಳನ್ನು ಉಲ್ಲೇಖಿಸಿ ಕಿಡಿಕಾರಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ ಎಂದು ಹೇಳುತ್ತಿದೆ. ವಾಸ್ತವದಲ್ಲಿ ಅದು ಡಬಲ್ ಗುಲಾಮಗಿರಿ ಸರ್ಕಾರ. ಪ್ರಧಾನಿ ಮೋದಿ ಅಮೆರಿಕದ ಗುಲಾಮಗಿರಿಯಲ್ಲಿ ತೊಡಗಿದ್ದಾರೆ ಮತ್ತು ಹಿಮಂತ ಬಿಸ್ವಾ ಶರ್ಮಾ ಮೋದಿಯ ಗುಲಾಮಗಿರಿಯಲ್ಲಿ ತೊಡಗಿದ್ದಾರೆ ಎಂದಿದ್ದಾರೆ.
ಚಹಾ ತೋಟದ ಕಾರ್ಮಿಕರ ದಿನಗೂಲಿ ಹೆಚ್ಚಿಸುವ ಭರವಸೆಯನ್ನು ಈಡೇರಿಸುವಲ್ಲಿ ಬಿಜೆಪಿ ಸರ್ಕಾರದ ವಿಫಲವಾಗಿದೆ. ವಿವಿಧ ಬುಡಕಟ್ಟು ಸಮುದಾಯಗಳು ವರ್ಷಗಳಿಂದ ಎಸ್‌ಟಿ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿವೆ. ಬಿಜೆಪಿ ಅವರಿಗೆ ಎಸ್‌ಟಿ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿತ್ತು, ಆದರೆ ಅವರು ಅದನ್ನು ನೀಡಲು ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).