ಅಸ್ಸಾಂನಲ್ಲಿ ಭೀಕರ ಪ್ರವಾಹ: 41 ಬಲಿ, 80ಕ್ಕೂ ಹೆಚ್ಚು ನಾಪತ್ತೆ
- ಅಸ್ಸಾಂನಲ್ಲಿ ಭೀಕರ ಪ್ರವಾಹ
- 41 ಬಲಿ, 80ಕ್ಕೂ ಹೆಚ್ಚು ನಾಪತ್ತೆ
- 25 ಜಿಲ್ಲೆಗಳ 1,800 ಹಳ್ಳಿಗಳು ಮುಳುಗಡೆ
- 9 ಲಕ್ಷ ಜನರ ಬದುಕು ಬೀದಿಗೆ; NDRF ಪಡೆಯ ಕ್ಷಿಪ್ರ ಕಾರ್ಯಾಚರಣೆ
ಗುವಾಹಟಿ: ಈ ಬಾರಿಯ ಮಳೆಗಾಲದಲ್ಲಿ ಅಸ್ಸಾಂನಲ್ಲಿ ಪ್ರಕೃತಿಯ ವಿಕೋಪ ಮಿತಿಮೀರಿದ್ದು, ಇಡೀ ರಾಜ್ಯವೇ ಭೀಕರ ಪ್ರವಾಹಕ್ಕೆ (Assam Floods) ಸಿಲುಕಿ ತಲುಪಿದೆ. ನೆರೆಯ ನಾಗಾಲ್ಯಾಂಡ್‌ನಲ್ಲಿ ಸಂಭವಿಸಿದ ಸರಣಿ ಮೇಘಸ್ಫೋಟ ಹಾಗೂ ಅಸ್ಸಾಂನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನದಿಗಳು ಮೈದುಂಬಿ ಹರಿಯುತ್ತಿದ್ದು, 25 ಜಿಲ್ಲೆಗಳ 1,800ಕ್ಕೂ ಹೆಚ್ಚು ಹಳ್ಳಿಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.
ಈ ಜಲಪ್ರಳಯಕ್ಕೆ ಇಲ್ಲಿಯವರೆಗೆ ಕನಿಷ್ಠ 41 ಜನರು ಪ್ರಾಣ ಕಳೆದುಕೊಂಡಿದ್ದು, 80ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದ್ದು ಈ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
9 ಲಕ್ಷಕ್ಕೂ ಹೆಚ್ಚು ಜನರಿಗೆ ಆಘಾತ!
ಪ್ರವಾಹದ ತೀವ್ರತೆಗೆ 9 ಲಕ್ಷಕ್ಕೂ ಹೆಚ್ಚು ಜನರು ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದು, ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ನೀರಿನಲ್ಲಿ ಮುಳುಗಡೆಯಾಗಿದ್ದು, ಜಾನುವಾರುಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ.
ಅನೇಕರು ತಮ್ಮ ಜೀವನಪೂರ್ತಿ ಸಂಪಾದಿಸಿದ ಆಸ್ತಿ, ಪ್ರಮುಖ ದಾಖಲೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರೆ, ಕೆಲವು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಬರೋಬ್ಬರಿ 436 ಪ್ರತಿಶತದಷ್ಟು ಹೆಚ್ಚು ಮಳೆ ದಾಖಲಾಗಿದ್ದು, ಇತಿಹಾಸದಲ್ಲೇ ಇಂತಹ ಭೀಕರ ಪ್ರವಾಹವನ್ನು ಕಾಣದ ಗ್ರಾಮಗಳೂ ಕೂಡ ಈಗ ಮುಳುಗಡೆಯಾಗಿವೆ.
'ಅತಿ ಗಂಭೀರ ಪರಿಸ್ಥಿತಿ' – ಸಿಎಂ ಹಿಮಂತ ಬಿಸ್ವಾ ಶರ್ಮಾ ಎಚ್ಚರಿಕೆ
ಗೋಲಾಘಾಟ್ ಜಿಲ್ಲೆಯ ಪರಿಹಾರ ಶಿಬಿರಕ್ಕೆ ಭೇಟಿ ನೀಡಿ ಸಂತ್ರಸ್ತರ ಅಳಲು ಆಲಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಜ್ಯದಲ್ಲಿನ ಸ್ಥಿತಿ ಸಾಕಷ್ಟು ಗಂಭೀರವಾಗಿದೆ ಎಂದು ಹೇಳಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಸಂಭವಿಸಿದ ಮೇಘಸ್ಫೋಟವೇ ಅಸ್ಸಾಂನ ನಾಲ್ಕು ಪ್ರಮುಖ ಜಿಲ್ಲೆಗಳು ಮುಳುಗಲು ಕಾರಣವಾಗಿದ್ದು, 70 ರಿಂದ 80 ಜನರು ಇನ್ನೂ ಪತ್ತೆಯಾಗಿಲ್ಲ, ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಖಾಡಕ್ಕಿಳಿದ ಸೇನೆ, ವಾಯುಪಡೆ; ಅಮಿತ್ ಶಾ ಭರವಸೆ!
ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸಲು ಭಾರತೀಯ ವಾಯುಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು (SDRF) ಹಗಲಿರುಳು ಕಾರ್ಯಾಚರಣೆ ನಡೆಸುತ್ತಿವೆ. ದೋಣಿಗಳು ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ಸಂತ್ರಸ್ತರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ.
ರಾಜ್ಯಾದ್ಯಂತ 148ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 30,000ಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಲಾಗಿದೆ. ಸಂತ್ರಸ್ತರಿಗೆ 3 ಲಕ್ಷ ಕಿಲೋಗ್ರಾಂ ಗೂ ಹೆಚ್ಚು ಅಕ್ಕಿ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗಿದೆ.
ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ. ಕೇಂದ್ರದಿಂದ ಎಲ್ಲಾ ರೀತಿಯ ಸಹಾಯ ಒದಗಿಸುವ ಭರವಸೆ ನೀಡಿದ್ದು, ಪ್ರವಾಹ ಹಾನಿಯನ್ನು ಪರಿಶೀಲಿಸಲು ಕೇಂದ್ರ ಸಚಿವಾಲಯಗಳ ವಿಶೇಷ ತಂಡವೊಂದು ಶೀಘ್ರದಲ್ಲೇ ಅಸ್ಸಾಂಗೆ ಭೇಟಿ ನೀಡಲಿದೆ ಎಂದು ತಿಳಿಸಿದ್ದಾರೆ, (ಏಜನ್ಸೀಸ್).