Assam Floods ಚಿತ್ರ Instagram 
ದೇಶ

ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ ಮುಂಬೈ ಯುವಕನ ಬೃಹತ್ ಆಸರೆ: ಜಾಲತಾಣದಲ್ಲಿ ವೈರಲ್ ಆಯ್ತು ಭಾವುಕ ವೀಡಿಯೊ! Assam Floods

ಮುಂಬೈ: ಪ್ರವಾಹದ ತೀವ್ರತೆಗೆ ಸಿಲುಕಿ ಮನೆ-ಮಠ ಕಳೆದುಕೊಂಡು ಕಂಗಾಲಾಗಿದ್ದ ಅಸ್ಸಾಂನ ಸಂತ್ರಸ್ತರ ನೆರವಿಗೆ ಮುಂಬೈನ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಹುಸೇನ್ ಮನ್ಸೂರಿ ಧಾವಿಸಿದ್ದಾರೆ. ಪ್ರವಾಹ ಪೀಡಿತ (Assam Floods) ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿದ ಅವರು ಮತ್ತು ಅವರ ತಂಡ, ಸೂರು ಕಳೆದುಕೊಂಡು ಸಂಕಷ್ಟದಲ್ಲಿರುವ ನೂರಾರು ಕುಟುಂಬಗಳಿಗೆ ನಿದ್ರಿಸಲು ಅತ್ಯಗತ್ಯವಾದ ಹಾಸಿಗೆಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ದುರಂತದ ಸಮಯದಲ್ಲಿ ಸಂತ್ರಸ್ತರ ಕಣ್ಣೀರು ಒರೆಸಿದ ಹುಸೇನ್ ತಂಡದ ಈ ಕರುಣಾಮಯಿ ಕಾರ್ಯಕ್ಕೆ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವೈರಲ್ ವೀಡಿಯೊದಲ್ಲೇನಿದೆ?

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಮನ್ಸೂರಿ ತಮ್ಮ ಸ್ವಯಂಸೇವಕರ ತಂಡದೊಂದಿಗೆ ಕೆಸರುಮಯ ಹಾದಿಯಲ್ಲಿ ಹಾಸಿಗೆಗಳನ್ನು ಹೊತ್ತುಕೊಂಡು ಸಂತ್ರಸ್ತರ ಮನೆಗಳು ಹಾಗೂ ತಾತ್ಕಾಲಿಕ ಆಶ್ರಯ ತಾಣಗಳತ್ತ ಸಾಗುತ್ತಿರುವುದು ಕಂಡುಬಂದಿದೆ. ಪ್ರವಾಹದ ಪರಿಣಾಮ ಅಲ್ಲಿನ ಕುಟುಂಬಗಳು ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿದೆ.
ನಿರಂತರ ಮಳೆ ಮತ್ತು ಜಾರುವ ಹಾದಿಯ ಸವಾಲುಗಳ ನಡುವೆಯೂ, ಮನ್ಸೂರಿ ಹಾಗೂ ಅವರ ತಂಡವು ಪ್ರತಿಯೊಂದು ಮನೆಗೂ ತೆರಳಿ ಹಾಸಿಗೆಗಳನ್ನು ತಲುಪಿಸಿದೆ. ಅಷ್ಟೇ ಅಲ್ಲದೆ, ಸ್ವತಃ ತಾವೇ ಆ ಹಾಸಿಗೆಗಳನ್ನು ಜೋಡಿಸಿ, ಅವುಗಳ ಮೇಲೆ ಚಾಪೆ ಹಾಸಿ ಕೊಡುವ ಮೂಲಕ ನೈಜ ಕಾಳಜಿ ಮೆರೆದಿದ್ದಾರೆ.

ಭಾವನಾತ್ಮಕ ಕ್ಷಣಗಳು

ವೀಡಿಯೊದ ಒಂದು ಹಂತದಲ್ಲಿ, ಕೆಸರಿನ ಹಾದಿಯಲ್ಲಿ ಭಾರವಾದ ಹಾಸಿಗೆಯನ್ನು ಹೊತ್ತು ಸಾಗುವಾಗ ಮನ್ಸೂರಿ ಜಾರಿ ಬೀಳುವ ಹಂತ ತಲುಪಿದ್ದರು. ಆದರೂ ತಕ್ಷಣವೇ ತಮ್ಮ ಸಮತೋಲನವನ್ನು ಕಾಯ್ದುಕೊಂಡು, ಕಿಂಚಿತ್ತೂ ಹಿಂಜರಿಯದೆ ಪರಿಹಾರ ವಿತರಣೆಯನ್ನು ಮುಂದುವರಿಸಿದರು.
ನೆರವಿನ ಅಗತ್ಯವಿದ್ದ ಕುಟುಂಬಗಳು ಈ ಮಾನವೀಯ ಕಾರ್ಯವನ್ನು ಕಂಡು ಭಾವುಕರಾದವು. ಅನೇಕ ಫಲಾನುಭವಿಗಳು ಕಣ್ಣೀರು ಹಾಕುತ್ತಾ ಮನ್ಸೂರಿ ಅವರನ್ನು ತಬ್ಬಿಕೊಂಡು, ಪಾದ ಮುಟ್ಟಿ ಕೃತಜ್ಞತೆ ಸಲ್ಲಿಸಿದ ಅತ್ಯಂತ ಭಾವುಕ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಇತ್ತೀಚಿನ ಪ್ರವಾಹದಿಂದ ಅಸ್ಸಾಂ ಚೇತರಿಸಿಕೊಳ್ಳುತ್ತಿರುವಂತೆಯೇ ಈ ಪರಿಹಾರ ಕಾರ್ಯ ನಡೆದಿದೆ. ಸೋಮವಾರ, ರಾಜ್ಯ ಸರ್ಕಾರವು ಪ್ರವಾಹ ಪೀಡಿತ ಕುಟುಂಬಗಳಿಗೆ ಪ್ರತಿ ಮನೆಗೆ ಸುಮಾರು 75,000 ರೂ.ಗಳ ಮಧ್ಯಂತರ ಪರಿಹಾರದ ಮೊದಲ ಕಂತನ್ನು ಬಿಡುಗಡೆ ಮಾಡಿತು. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ದಿಬ್ರುಗಢದಿಂದ ಕೆಲವು ಕೆಟ್ಟ ಹಾನಿಗೊಳಗಾದ ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಾಯವನ್ನು ವಿತರಿಸಿದರು.
ಅಧಿಕಾರಿಗಳ ಪ್ರಕಾರ, ಅಪ್ಪರ್ ಅಸ್ಸಾಂನಲ್ಲಿ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 85 ಕ್ಕೆ ಏರಿದೆ. ಪೀಡಿತರ ಸಂಖ್ಯೆ ಸುಮಾರು 1.36 ಲಕ್ಷಕ್ಕೆ ಇಳಿದಿದ್ದರೂ, ಶಿವಸಾಗರ್ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿ ಉಳಿದಿದೆ. ನಂತರ ಚರೈಡಿಯೋ ಮತ್ತು ಜೋರ್ಹತ್ ಇವೆ. ರಾಜ್ಯ ಸರ್ಕಾರವು ಪ್ರಸ್ತುತ ಐದು ಜಿಲ್ಲೆಗಳಲ್ಲಿ 54 ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ನಿರ್ವಹಿಸುತ್ತಿದ್ದು, 13,700 ಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಿದೆ (ಏಜೆನ್ಸೀಸ್​).