Assam Floods (ಚಿತ್ರ X) 
ದೇಶ

ಸಾವು-ಬದುಕಿನ ನಡುವೆ ಗೆದ್ದ ಪ್ರಾಣಿಪ್ರೇಮ: ಕುತ್ತಿಗೆಯಾಳದ ನೀರಿನಲ್ಲೂ ಕರುವನ್ನು ಎದೆಗಪ್ಪಿ ದಡ ಸೇರಿಸಿದ ಯುವಕ! Assam Floods

ಗುವಾಹಾಟಿ: ಅಸ್ಸಾಂನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ (Assam Floods) ಪರಿಸ್ಥಿತಿ ದಿನದಿಂದ ದಿನಕ್ಕೆ ಭೀಕರ ರೂಪ ಪಡೆದುಕೊಳ್ಳುತ್ತಿದ್ದು, ಲಕ್ಷಾಂತರ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಮನೆ-ಮಠಗಳು, ರಸ್ತೆಗಳು ಹಾಗೂ ಅಪಾರ ಪ್ರಮಾಣದ ಕೃಷಿ ಭೂಮಿ ನೀರಿನಲ್ಲಿ ಮುಳುಗಿದ್ದು, ಸಾವಿರಾರು ಕುಟುಂಬಗಳು ರಸ್ತೆಪಾಲಾಗಿವೆ. ಈ ಪ್ರಕೃತಿ ವಿಕೋಪದ ನಡುವೆಯೂ ಮಾನವೀಯತೆ ಹಾಗೂ ಪ್ರಾಣಿಪ್ರೇಮ ಸಾರುವ ರೋಮಾಂಚಕ ಘಟನೆಯೊಂದು ಶಿವಸಾಗರ ಜಿಲ್ಲೆಯಲ್ಲಿ ನಡೆದಿದ್ದು, ಯುವಕನೊಬ್ಬ ತನ್ನ ಜೀವವನ್ನೇ ಪಣಕ್ಕಿಟ್ಟು ಕರುವೊಂದನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಯುವಕನೊಬ್ಬ ರಭಸವಾಗಿ ಹರಿಯುತ್ತಿರುವ ಪ್ರವಾಹದ ನೀರಿನಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ನೀರು ಆತನ ಕುತ್ತಿಗೆಯವರೆಗೂ ತಲುಪಿದ್ದರೂ, ಆತ ಧೈರ್ಯಗೆಡದೆ ತನ್ನ ಎದೆಗೆ ಚಿಕ್ಕ ಕರುವನ್ನು ಗಟ್ಟಿಯಾಗಿ ಅಪ್ಪಿ ಹಿಡಿದುಕೊಂಡಿದ್ದಾನೆ.
ಪ್ರವಾಹದ ರಭಸಕ್ಕೆ ಕೊಚ್ಚಿಹೋಗುವ ಅಪಾಯವಿದ್ದಾಗ, ದಡದಲ್ಲಿದ್ದ ಗ್ರಾಮಸ್ಥರು ಬಿದಿರಿನ ಉದ್ದನೆಯ ಕೋಲನ್ನು ಆತನತ್ತ ಚಾಚಿ ಸಹಾಯ ಮಾಡಿದ್ದಾರೆ. ಯುವಕ ಆ ಬಿದಿರಿನ ಕೋಲನ್ನು ಒಂದು ಕೈಯಿಂದ ಹಿಡಿದು ಸಮತೋಲನ ಕಾಯ್ದುಕೊಳ್ಳುತ್ತಾ, ಮತ್ತೊಂದು ಕೈಯಿಂದ ಕರುವನ್ನು ಎತ್ತಿ ಹಿಡಿದು ನಿಧಾನವಾಗಿ ದಡದತ್ತ ಹೆಜ್ಜೆ ಹಾಕಿದ್ದಾನೆ. ಅಂತಿಮವಾಗಿ ಪ್ರಾಣಿಯನ್ನು ಸುರಕ್ಷಿತವಾಗಿ ದಡಕ್ಕೆ ತರುವಲ್ಲಿ ಆತ ಯಶಸ್ವಿಯಾಗಿದ್ದು, ನೆಟ್ಟಿಗರು ಆತನ ಸಾಹಸಕ್ಕೆ ಶಹಬ್ಬಾಸ್ ಎಂದಿದ್ದಾರೆ.
ಪ್ರವಾಹಕ್ಕೆ ಸಿಲುಕಿ ಮಂಗಳವಾರ ಮತ್ತೂ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದು, ರಾಜ್ಯದಲ್ಲಿ ಪ್ರವಾಹ ಸಂಬಂಧಿತ ದುರಂತಗಳಿಗೆ ಬಲಿಯಾದವರ ಒಟ್ಟು ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಪ್ರವಾಹದ ಭೀಕರತೆಗೆ ರಾಜ್ಯದ 622 ಹಳ್ಳಿಗಳ ಸುಮಾರು 3.32 ಲಕ್ಷ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲದೆ, ಸುಮಾರು 45,342 ಹೆಕ್ಟೇರ್ ಕೃಷಿ ಭೂಮಿ ಜಲಾವೃತಗೊಂಡು ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದರೆ, ನೂರಾರು ಮನೆಗಳು, ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.

ಬೃಹತ್ ರಕ್ಷಣಾ ಕಾರ್ಯಾಚರಣೆ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭಾರತೀಯ ಸೇನೆ, ರಾಷ್ಟ್ರೀಯ ದುರಂತ ಸ್ಪಂದನಾ ಪಡೆ (NDRF), ರಾಜ್ಯ ದುರಂತ ಸ್ಪಂದನಾ ಪಡೆ (SDRF), ಭಾರತೀಯ ವಾಯುಪಡೆ ಮತ್ತು ಸ್ಥಳೀಯ ಸ್ವಯಂಸೇವಕರು ಹಗಲಿರುಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದ್ದು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದೆ (ಏಜೆನ್ಸೀಸ್​).