ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಪವನ್ ಖೇರಾ 
ದೇಶ

ಅಸ್ಸಾಂ ಚುನಾವಣೆ; ಸಿಎಂ ಹಿಮಂತ ಬಿಸ್ವಾ ಶರ್ಮಾ ವಿದೇಶದಲ್ಲಿ ಆಸ್ತಿ, ಹೂಡಿಕೆ ಮಾಡಿದ್ದಾರೆ; ಕಾಂಗ್ರೆಸ್​ನಿಂದ ಗಂಭೀರ ಆರೋಪ | Congress

ನವದೆಹಲಿ: ಕೆಲವೇ ದಿನಗಳಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭೆ ಚುನಾವಣೆಗೂ ಮುನ್ನ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಕಾಂಗ್ರೆಸ್(Congress), ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಎರಡು ಮುಸ್ಲಿಂ ದೇಶಗಳು ಸೇರಿದಂತೆ ಮೂರು ದೇಶಗಳ ಪಾಸ್‌ಪೋರ್ಟ್‌, ದುಬೈನಲ್ಲಿ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಹಾಗೂ ಅಮೆರಿಕದಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಕಾಂಗ್ರೆಸ್​ನ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮಾತನಾಡಿದ್ದು, ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಹಾಲಿ ಸಿಎಂ ಮತ್ತು ಅವರ ಕುಟುಂಬದ ವಿರುದ್ಧ ಇಷ್ಟೊಂದು ದೊಡ್ಡ ಆರೋಪ ಎಂದಿಗೂ ಬಂದಿರಲಿಲ್ಲ. ವಿದೇಶದಲ್ಲಿರುವ ವಿಶ್ವಾಸಾರ್ಹ ಮೂಲಗಳಿಂದ ಪಡೆದ ದಾಖಲೆಗಳನ್ನು ಆಧರಿಸಿ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ಪವನ್ ಖೇರಾ ಪ್ರಕಾರ, ಸಿಎಂ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಮೂರು ಪಾಸ್‌ಪೋರ್ಟ್‌ಗಳಲ್ಲಿ ಒಂದು 2022 ಮಾರ್ಚ್ 14ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಯಲ್ಲಿ ನೀಡಲಾದ "ಗೋಲ್ಡನ್ ಕಾರ್ಡ್" ಆಗಿದ್ದು, ಇದು 2027 ಮಾರ್ಚ್ 13ರವರೆಗೆ ಮಾನ್ಯವಾಗಿರುತ್ತದೆ ಎಂದು ಆರೋಪಿಸಿದ್ದಾರೆ.
ಎರಡನೆಯದು, ಆಂಟಿಗುವಾ ಮತ್ತು ಬಾರ್ಬುಡಾದ ಪಾಸ್‌ಪೋರ್ಟ್ ಆಗಿದ್ದು, ಇದನ್ನು 2021 ಆಗಸ್ಟ್ 26ರಂದು ನೀಡಲಾಗಿದ್ದು, 2031 ಆಗಸ್ಟ್ 25ರವರೆಗೆ ಮಾನ್ಯವಾಗಿರುತ್ತದೆ. ಮೂರನೇಯದು ಈಜಿಪ್ಟ್‌ನ ಪಾಸ್‌ಪೋರ್ಟ್ ಆಗಿದ್ದು, 2022 ಫೆಬ್ರವರಿ 13ರಂದು ಪಡೆದುಕೊಂಡಿದ್ದು, ಅದು 2029 ಫೆಬ್ರವರಿ 12ರವರೆಗೆ ಮಾನ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ದುಬೈನಲ್ಲಿ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದು, ಅಮೆರಿಕಾದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಈ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶೇಷ ತನಿಖಾ ತಂಡವನ್ನು ರಚಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಏಪ್ರಿಲ್ 09ರಂದು ಅಸ್ಸಾಂ ವಿಧಾನಸಭೆ ಚುನಾವಣೆ ನಡೆಯಲಿದ್ದು, ಒಟ್ಟು 126 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ. 04ರಂದು ಫಲಿತಾಂಶ ಪ್ರಕಟವಾಗಲಿದೆ (ಏಜೆನ್ಸೀಸ್).