Assam Election | ಮುಖ್ಯಮಂತ್ರಿ ಹಿಮಂತ ಬಿಸ್ವಾ
ದಿಸ್ಪುರ: ಅಸ್ಸಾಂ ವಿಧಾನಸಭಾ ಚುನಾವಣೆಯ (Assam Election) ಕಹಳೆ ಮೊಳಗಿದ್ದು, ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಗುರುವಾರ ತನ್ನ 88 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನಿರೀಕ್ಷೆಯಂತೆಯೇ ಜಲುಕ್ಬರಿ ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ ನಾಯಕತ್ವ ಬಿಜೆಪಿಗೆ ಆನೆ ಬಲ ತಂದಿದ್ದು, ಈ ಬಾರಿ ಮೊದಲ ಪಟ್ಟಿಯಲ್ಲೇ 88 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ವಿರೋಧ ಪಕ್ಷಗಳಿಗಿಂತ ಕೇಸರಿ ಪಾಳಯ ಒಂದು ಹೆಜ್ಜೆ ಮುಂದಿದೆ. ಪಟ್ಟಿಯ ಪ್ರಮುಖ ಆಕರ್ಷಣೆಯೆಂದರೆ, ಅನುಭವಿ ನಾಯಕರಿಗೆ ಅವರದ್ದೇ ಪ್ರಭಾವಿ ಕ್ಷೇತ್ರಗಳನ್ನು ನೀಡುವ ಮೂಲಕ ಗೆಲುವಿನ ಹಾದಿಯನ್ನು ಸುಗಮಗೊಳಿಸಿಕೊಳ್ಳಲಾಗಿದೆ.
ರಂಜೀತ್ ಕುಮಾರ್ ದಾಸ್: ಭವಾನಿಪುರ-ಸೋರ್ಭೋಗ್ ಕ್ಷೇತ್ರದಿಂದ ಅದೃಷ್ಟ ಪರೀಕ್ಷಿಸಲಿದ್ದಾರೆ.
ಪ್ರದ್ಯುತ್ ಬೋರ್ಡೊಲೊಯ್: ರಾಜ್ಯ ರಾಜಧನಿ ದಿಸ್ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಜಯಂತ ಮಲ್ಲ ಬರುವಾ: ನಲ್ಬರಿ ಕ್ಷೇತ್ರದಿಂದ ಸ್ಪರ್ಧೆ.
ಚಂದ್ರ ಮೋಹನ್ ಪಟೋವರಿ: ತಿಹು ವಿಧಾನಸಭಾ ಕ್ಷೇತ್ರ.
ಬಿಸ್ವಜಿತ್ ಡೈಮರಿ: ತಮುಲ್‌ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ.
ರಾನೋಜ್ ಪೆಗು: ಧೇಮಾಜಿ ಮೀಸಲು ಕ್ಷೇತ್ರದಿಂದ ಅಖಾಡಕ್ಕೆ.
ಮಹಿಳಾ ಶಕ್ತಿಗೆ ಆದ್ಯತೆ.. ಹೊಸ ಮುಖಗಳ ಸೇರ್ಪಡೆ
ಬಿಜೆಪಿಯು ತನ್ನ ಮೊದಲ ಪಟ್ಟಿಯಲ್ಲಿ ಸಾಮಾಜಿಕ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದ್ದು, ಈ ಪಟ್ಟಿಯಲ್ಲಿ ಆರು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ಮಹಿಳಾ ಮತದಾರರ ಓಲೈಕೆಗೆ ಮುಂದಾಗಿದೆ. ರಾಮಕೃಷ್ಣನಗರದಿಂದ ಬಿಜೋಯ್ ಮಾಲಕರ್, ಬಿಹ್ಪುರಿಯಾದಿಂದ ಭೂಪೇನ್ ಕುಮಾರ್ ಬೋರಾ ಮತ್ತು ಪಥರ್ಕಂಡಿಯಿಂದ ಕೃಷ್ಣೇಂದು ಪಾಲ್ ಅವರಿಗೆ ಟಿಕೆಟ್ ಖಚಿತಪಡಿಸಲಾಗಿದೆ. ಹಿರಿಯ ನಾಯಕ ಅಶೋಕ್ ಸಿಂಘಾಲ್ ಅವರು ಧೇಕಿಯಾಜುಲಿಯಿಂದ ಕಣಕ್ಕಿಳಿಯಲಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ ಎದುರಾಳಿ ಯಾರು..?
ಜಲುಕ್ಬರಿ ಕ್ಷೇತ್ರದಲ್ಲಿ ಹಿಮಂತ ಬಿಸ್ವಾ ಶರ್ಮಾಗೆ ದೊಡ್ಡ ಮಟ್ಟದ ವರ್ಚಸ್ಸಿದ್ದು, ಕಳೆದ ಬಾರಿ ಭಾರಿ ಬಹುಮತದಿಂದ ಗೆದ್ದಿದ್ದ ಅವರು, ಈ ಬಾರಿಯೂ ಅದೇ ದಾಖಲೆಯನ್ನು ಪುನರಾವರ್ತನೆ ಮಾಡುವ ವಿಶ್ವಾಸದಲ್ಲಿದ್ದಾರೆ. ರಾಜ್ಯಾದ್ಯಂತ ತಮ್ಮ ಅಭಿವೃದ್ಧಿ ಕಾರ್ಯಗಳು ಮತ್ತು ಪ್ರಖರ ಹಿಂದುತ್ವದ ಅಜೆಂಡಾವನ್ನು ಮುಂದಿಟ್ಟುಕೊಂಡು ಪ್ರಚಾರ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಅಸ್ಸಾಂನಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಜೋತ್ ನಡುವೆ ನೇರ ಪೈಪೋಟಿ ನಿರೀಕ್ಷಿಸಲಾಗಿದೆ(ಏಜೆನ್ಸೀಸ್).