Udhayanidhi Stalin > ನನ್ನ ಬಂಧನ ಬರಿ ನಾಟಕ, 'ಆ ವಿಷಯದ' ಕುರಿತಾದ ಗಮನ ಬೇರೆಡೆ ಸೆಳೆಯಲು ವಿಜಯ್ ಸರ್ಕಾರ ಹೆಣೆದ ತಂತ್ರ ಇದು: ಉದಯನಿಧಿ ಆರೋಪ!
ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ (
ಬಂಧನ ಹಾಗೂ ಹೈಕೋರ್ಟ್‌ನಿಂದ ಬಿಡುಗಡೆಯ ಬಳಿಕ, ಇಂದು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಹಾಗೂ ಉದಯನಿಧಿ ವಿಧಾನಸಭೆಯಲ್ಲಿ ಮುಖಾಮುಖಿಯಾದರು.
ಈ ವೇಳೆ ಮುಖ್ಯಮಂತ್ರಿ ವಿಜಯ್ ಉದಯನಿಧಿ ಬಂಧನದ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದರೆ, ಉದಯನಿಧಿ ಸ್ಟಾಲಿನ್ ವಿಜಯ್ ನೇತೃತ್ಬದ ಟಿವಿಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಟಿ ತ್ರಿಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಉದಯನಿಧಿ ಸ್ಟಾಲಿನ್, ಬಜೆಟ್ ಮಂಡನೆಗೂ ಮುನ್ನ ರಾಜ್ಯದ ಮೂಲಭೂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಟಿವಿಕೆ ಸರ್ಕಾರ ಈ ಬಂಧನ ನಾಟಕವನ್ನು ಆಡಿದೆ ಎಂದು ಆರೋಪಿಸಿದರು.
ವಿಧಾನಸೌಧದ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉದಯನಿಧಿ, ತಮ್ಮ ಬಂಧನದ ಕುರಿತು ಮುಖ್ಯಮಂತ್ರಿ ವಿಜಯ್ ಮೌನ ವಹಿಸಿರುವುದನ್ನು ವ್ಯಂಗ್ಯವಾಡುತ್ತಾ, ನಿನ್ನೆಯ ಘಟನೆಯ ಬಗ್ಗೆ ಸಿಎಂ ಅವರನ್ನೇ ಕೇಳಬೇಕು, ಮೌನವಾಗಿರುವುದು ಅವರೇ ಹೊರತು ನಾನಲ್ಲ ಎಂದರು. ನಟಿ ತ್ರಿಶಾ ವಿರುದ್ಧ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಟಿವಿಕೆ ನೀಡಿದ ದೂರಿನನ್ವಯ ಉದಯನಿಧಿ ಸ್ಟಾಲಿನ್ರನ್ನು ಮಂಗಳವಾರ ಬೆಳಿಗ್ಗೆ ಚೆನ್ನೈನ ನಿವಾಸದಿಂದ ಪೊಲೀಸರು ಬಂಧಿಸಿದ್ದರು.
ಅದೇ ದಿನ ಮದ್ರಾಸ್ ಹೈಕೋರ್ಟ್, ವಿಚಾರಣೆ ಪೂರ್ಣಗೊಂಡ ನಂತರ ಉದಯನಿಧಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿತ್ತು. ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ ಉದಯನಿಧಿ, ನಾನು ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ. ನನ್ನ ಭಾಷಣವನ್ನು ಕಟ್, ಕಾಪಿ, ಪೇಸ್ಟ್ ಮಾಡಿ ನಾನು ಸೂಕ್ತವಲ್ಲದ ಮಾತುಗಳನ್ನು ಆಡಿದ್ದೇನೆ ಎಂದು ಬಿಂಬಿಸಲಾಗಿದೆ. ಕೆಲವರು ನಾನು ಡಬಲ್ ಮೀನಿಂಗ್ನಲ್ಲಿ ಮಾತನಾಡಿದ್ದೇನೆ ಎಂದು ಆರೋಪಿಸಿದ್ದಾರೆ. ಆದರೆ ನಾನು ಒಂದೇ ಅರ್ಥದಲ್ಲಿ ಮಾತನಾಡಿದ್ದೇನೆ ಅದೇನೆಂದರೆ ರೈತರಿಗೆ ನೀರು ಬೇಕು.
ಹಿಂದಿನ ಡಿಎಂಕೆ ಸರ್ಕಾರದ ಯೋಜನೆಗಳನ್ನು ಮರುನಾಮಕರಣ ಮಾಡಿ ತಮ್ಮದೇ ಯೋಜನೆಗಳೆಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಉದಯನಿಧಿ, ಈ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳನ್ನು ಡಿಎಂಕೆ ಸರ್ಕಾರವೇ ಘೋಷಿಸಿತ್ತು. ಅವರು ಕೇವಲ ಯೋಜನೆಗಳ ಹೆಸರುಗಳನ್ನು ಬದಲಾಯಿಸಿದ್ದಾರೆ ಅಷ್ಟೇ ಎಂದರು.
ಟಿವಿಕೆ ಸರ್ಕಾರದ ಮೊದಲ ಬಜೆಟ್!
ತಮಿಳುನಾಡು ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಬುಧವಾರ ಟಿವಿಕೆ ಸರ್ಕಾರದ ಮೊದಲ ಬಜೆಟ್ ಮಂಡಿಸಿದರು. ಬಜೆಟ್ ಮಂಡನೆ ವೇಳೆ, ಟೆಂಡರ್‌ಗಳಲ್ಲಿ ಕೆಲವು ಪಕ್ಷಗಳು ಮತ್ತು ವ್ಯಕ್ತಿಗಳು ಪಡೆಯುತ್ತಿದ್ದ ಕಮಿಷನ್ ಅಭ್ಯಾಸವನ್ನು ತಡೆದಿದ್ದಕ್ಕಾಗಿ ಮುಖ್ಯಮಂತ್ರಿ ವಿಜಯ್ರನ್ನು ಶ್ಲಾಘಿಸಿದರು. ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಹೊರತರುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರತಿಪಾದಿಸಿದ ಸರ್ಕಾರ, ತಮ್ಮ ಪ್ರಮುಖ ಭರವಸೆಗಳಲ್ಲೊಂದಾದ ಚಿನ್ನದ ಯೋಜನೆಗಳಿಗೆ 1,300 ಕೋಟಿ ರೂ.ಗೂ ಹೆಚ್ಚು ಹಣವನ್ನು ಮೀಸಲಿಟ್ಟಿದೆ.
ತಮಿಳುನಾಡು ಸರ್ಕಾರ ನೀಟ್ ಪರೀಕ್ಷೆಯನ್ನು ವಿರೋಧಿಸುತ್ತದೆ ಎಂದು ಪುನರುಚ್ಚರಿಸಿದ ಹಣಕಾಸು ಸಚಿವರು, ಕೇಂದ್ರ ಸರ್ಕಾರವು ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ, 12 ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ನೀಡುವ ಹಳೆಯ ಪದ್ಧತಿಯನ್ನು ಮರಳಿ ತರಬೇಕು ಎಂದು ಒತ್ತಾಯಿಸಿದರು. ನೀಟ್ ವಿಚಾರದಲ್ಲಿಯೂ ವಿಜಯ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಉದಯನಿಧಿ ಸ್ಟಾಲಿನ್, ನೀಟ್ ಪೇಪರ್ ಲೀಕ್ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧವೇ ವಿಜಯ್ ಸರ್ಕಾರ ಪ್ರಕರಣಗಳನ್ನು ದಾಖಲಿಸಿದೆ ಎಂದು ಕಿಡಿಕಾರಿದರು(ಏಜೆನ್ಸೀಸ್).