Nainar Nagenthran | ಸಿಎಂ ವಿಜಯ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ವಿವಾದಾತ್ಮಕ ಹೇಳಿಕೆ 
ದೇಶ

ತಂದೆ ಎಲ್ಲಿದ್ದಾರೆ ಅಂತ ತಾಯಿನ ಕೇಳಿ!...ಸಿಎಂ ವಿಜಯ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ವಿವಾದಾತ್ಮಕ ಹೇಳಿಕೆ | Nainar Nagenthran

ಯಾರಾದರೂ ತಮ್ಮ ತಂದೆ ಎಲ್ಲಿದ್ದಾರೆ ಎಂದು ತಿಳಿಯಲು ಬಯಸಿದರೆ ವಿಧಾನಸಭೆಯಲ್ಲಿ ಹುಡುಕುವುದಲ್ಲ, ಮನೆಗೆ ಹೋಗಿ ತಮ್ಮ ತಾಯಿಯನ್ನು ಕೇಳಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಹೊಸ ವಿವಾದ ಸೃಷ್ಟಿಸಿದ್ದಾರೆ.

ವಿಧಾನಸಭೆಯಲ್ಲಿ ಸಿಎಂ ವಿಜಯ್ ಅವರು ಪದೇ ಪದೇ ತಂದೆ ಎಂದು ಪ್ರಸ್ತಾಪಿಸುವುದನ್ನು ಗೇಲಿ ಮಾಡಿದ ನಾಗೇಂದ್ರನ್, ಶಾಸನಸಭೆಯಲ್ಲಿ ತಂದೆ ಎಲ್ಲಿದ್ದಾರೆ? ಎಂದು ಕೇಳಿದರೆ ಉತ್ತರ ಸಿಗುವುದಿಲ್ಲ, ಬದಲಿಗೆ ಮನೆಗೆ ಹೋಗಿ ಸ್ವಂತ ತಾಯಿಯನ್ನು ಕೇಳಬೇಕು ಎಂದು ವ್ಯಂಗ್ಯವಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸೋಲಿನ ಬಳಿಕ ತಮಿಳುನಾಡು ಮುಖ್ಯಮಂತ್ರಿ ವಿಜಯ್, ವಿಧಾನಸಭೆಯಲ್ಲಿ ಕುಟ್ಟಿ ಕಥೈ ಯೊಂದನ್ನು ನಿರೂಪಿಸಿದ್ದರು. ಕೊಳತ್ತೂರು ಕ್ಷೇತ್ರದಲ್ಲಿ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಸೋಲನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ, ಉದಯನಿಧಿ ಸ್ಟಾಲಿನ್ ಅವರ ತಂದೆ ಎಲ್ಲಿದ್ದಾರೆ ಎಂಬ ಬಗ್ಗೆ ಹಾಸ್ಯಸ್ಪದ ಪ್ರಸ್ತಾಪವನ್ನು ಮಾಡಿದ್ದರು. ಆ ಸಮಯದಲ್ಲಿ ಡಿಎಂಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ವಿಜಯ್ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದವು. ಸಿಎಂ ವಿಜಯ್ ಅವರ ಆಕ್ಷೇಪಾರ್ಹ ಟೀಕೆಗೆ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಸ್ಟಾಲಿನ್, ತಾವು ಶಾಸನಸಭೆಯಲ್ಲಿ ಇಲ್ಲದಿದ್ದರೂ ಜನರ ಹೃದಯದಲ್ಲಿ ಸದಾ ಇರುವುದಾಗಿ ಹೇಳಿದ್ದರು.

ನಾಗೇಂದ್ರನ್​ ವಿರುದ್ಧ ಅಣ್ಣಾಮಲೈ ಕಿಡಿ!

ಬಿಜೆಪಿ ರಾಜ್ಯಾಧ್ಯಕ್ಷ ನಾಗೇಂದ್ರನ್ ಈ ಹೇಳಿಕೆಯನ್ನು ಸಚಿವ ಎ. ರಾಜ್‌ಮೋಹನ್ ಮತ್ತು ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಖಂಡಿಸಿದ್ದಾರೆ. ನಾಗೇಂದ್ರನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎ. ರಾಜ್‌ಮೋಹನ್, ಈ ಕಾಮೆಂಟ್‌ಗಳು ಅಸಭ್ಯ ಮತ್ತು ಅನುಚಿತ ಎಂದು ಕರೆದಿದ್ದಾರೆ. ಯಾವುದೇ ಪ್ರಚೋದನೆಗಳು ಅಥವಾ ವೈಯಕ್ತಿಕ ದಾಳಿಗಳು ಎದುರಾದರೂ ರಾಜಕೀಯ ಸೌಹಾರ್ದತೆ ಮತ್ತು ಮರ್ಯಾದೆಯನ್ನು ಕಾಯ್ದುಕೊಳ್ಳುವಂತೆ ವಿಜಯ್ ಅವರು ತಮ್ಮ ಸಹೋದ್ಯೋಗಿಗಳಿಗೆ ಸದಾ ಸೂಚಿಸಿದ್ದಾರೆ ಎಂದು ಹೇಳಿದರು.
ಇನ್ನೊಂದೆಡೆ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಮಾತನಾಡಿ, ನಾಗೇಂದ್ರನ್ ಅವರ ಹೇಳಿಕೆಗಳು ರಾಜಕೀಯ ಸಭ್ಯತೆಯ ಎಲ್ಲಾ ಗೆರೆಗಳನ್ನು ದಾಟಿವೆ ಎಂದು ಕಿಡಿ ಕಾರಿದ್ದಾರೆ. ಸರ್ಕಾರವನ್ನು ಪ್ರಶ್ನಿಸುವುದು ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದ ಸಿಂಧುತ್ವ ಹೊಂದಿರುವ ಭಾಗಗಳಾಗಿವೆ, ಆದರೆ ಒಬ್ಬ ನಾಯಕನ ಕುಟುಂಬವನ್ನು, ಅದರಲ್ಲೂ ವಿಶೇಷವಾಗಿ ಅವರ ತಾಯಿಯನ್ನು ಎಳೆದು ತಂದು ವೈಯಕ್ತಿಕ ದಾಳಿ ಮಾಡುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ, ಇಂತಹ ಹೇಳಿಕೆಗಳು ಕೀಳುಮಟ್ಟದ ರಾಜಕೀಯದ ಸಂಕೇತವಾಗಿದ್ದು, ಇವುಗಳನ್ನು ಯುವ ಪೀಳಿಗೆಯಲ್ಲಿ ಎಂದಿಗೂ ಪ್ರೋತ್ಸಾಹಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ(ಏಜೆನ್ಸೀಸ್​).